Flipkart: ಬೆಂಗಳೂರು; ಮೊಬೈಲ್ ಫೋನ್ ನೀಡದ ಫ್ಲಿಪ್​ಕಾರ್ಟ್​ಗೆ 42 ಸಾವಿರ ರೂ. ದಂಡ

| Updated By: Ganapathi Sharma

Updated on: Jan 03, 2023 | 5:38 PM

ದೂರುದಾರರಿಂದ ಫ್ಲಿಪ್​ಕಾರ್ಟ್ ಸಂಪೂರ್ಣ ಮೊತ್ತ ಪಡೆದುಕೊಂಡಿತ್ತು. ಆದರೆ, ಮೊಬೈಲ್​ಫೋನ್ ಕಳುಹಿಸಿರಲಿಲ್ಲ. ಫ್ಲಿಪ್​ಕಾರ್ಟ್ ಸೇವೆಯಲ್ಲಿ ನಿರ್ಲಕ್ಷ್ಯ ಎಸಗಿದ್ದಲ್ಲದೆ, ಅನೀತಿಯ ವ್ಯಾಪಾರ ಅಭ್ಯಾಸ ನಡೆಸಿದೆ ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.

Flipkart: ಬೆಂಗಳೂರು; ಮೊಬೈಲ್ ಫೋನ್ ನೀಡದ ಫ್ಲಿಪ್​ಕಾರ್ಟ್​ಗೆ 42 ಸಾವಿರ ರೂ. ದಂಡ
ಫ್ಲಿಪ್​ಕಾರ್ಟ್
Follow us on

ಬೆಂಗಳೂರು: ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ನೀಡದ ಫ್ಲಿಪ್​ಕಾರ್ಟ್​ಗೆ (Flipkart) ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (Consumer Disputes Redressal Commission) ಒಟ್ಟು 42,000 ರೂ. ಗ್ರಾಹಕರಿಗೆ ನೀಡುವಂತೆ ಆದೇಶಿಸಿದೆ. ಮೊಬೈಲ್​​​ ಫೋನ್​ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. 20,000 ರೂ. ಪರಿಹಾರವಾಗಿ ನೀಡಬೇಕು. ಜತೆಗೆ, ದಾವೆ ವೆಚ್ಚಗಳಿಗಾಗಿ 10,000 ರೂ. ನೀಡಬೇಕು ಎಂದು ಫ್ಲಿಪ್​ಕಾರ್ಟ್​ಗೆ ಆಯೋಗ ಸೂಚಿಸಿದೆ. ರಾಜಾಜಿನಗರದ ಜೆ. ದಿವ್ಯ ಶ್ರೀ ಎಂಬವರು ಫ್ಲಿಪ್​​​ಕಾರ್ಟ್ ವಿರುದ್ಧ ದೂರು ನೀಡಿದ್ದರು. ಆಯೋಗದ ಅಧ್ಯಕ್ಷೆ ಎಂ. ಶೋಭಾ ಮತ್ತು ಸದಸ್ಯೆ ರೇಣುಕಾ ದೇವಿ ದೇಶಪಾಂಡೆ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ.

ದೂರುದಾರರಿಂದ ಫ್ಲಿಪ್​ಕಾರ್ಟ್ ಸಂಪೂರ್ಣ ಮೊತ್ತ ಪಡೆದುಕೊಂಡಿತ್ತು. ಆದರೆ, ಮೊಬೈಲ್​ಫೋನ್ ಕಳುಹಿಸಿರಲಿಲ್ಲ. ಹೀಗೆ ಮಾಡುವ ಮೂಲಕ ಫ್ಲಿಪ್​ಕಾರ್ಟ್ ಸೇವೆಯಲ್ಲಿ ನಿರ್ಲಕ್ಷ್ಯ ಎಸಗಿದ್ದಲ್ಲದೆ, ಅನೀತಿಯ ವ್ಯಾಪಾರ ಅಭ್ಯಾಸ ನಡೆಸಿದೆ ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ. ನೋಟಿಸ್ ನೀಡಿದ್ದರೂ ಫ್ಲಿಪ್​ಕಾರ್ಟ್ ಗೈರುಹಾಜರಾಗಿತ್ತು.

ಇದನ್ನೂ ಓದಿ: Mutual Funds: ಮ್ಯೂಚುವಲ್ ಫಂಡ್; 5 ವರ್ಷಗಳಲ್ಲಿ 50 ಲಕ್ಷ ರಿಟರ್ನ್ಸ್​ಗೆ ಎಷ್ಟು ಮೊತ್ತದ ಎಸ್​ಐಪಿ ಅಗತ್ಯ? ಇಲ್ಲಿದೆ ಮಾಹಿತಿ

ನಿರೀಕ್ಷಿತ ದಿನಾಂಕದ ಒಳಗೆ ಮೊಬೈಲ್ ಫೋನ್ ವಿತರಣೆ ಮಾಡದ್ದರಿಂದ ಗ್ರಾಹಕರಿಗೆ ಆರ್ಥಿಕ ನಷ್ಟ ಆಗಿದ್ದರೆ ಜತೆಗೆ ಅವರು ಮಾನಸಿಕ ಯಾತನೆಯನ್ನೂ ಅನುಭವಿಸುವಂತಾಗಿತ್ತು. ಕಂತುಗಳನ್ನು ಪಾವತಿಸುವುದು ಹೊರೆಯಾಗಿ ಪರಿಣಮಿಸಿತ್ತು. ಮೊಬೈಲ್ ಫೋನ್ ದೊರೆಯದ ಹೊರತಾಗಿಯೂ ಗ್ರಾಹಕರು ಹಣ ಪಾವತಿ ಮಾಡಿದ್ದಾರೆ. ಇದಾದ ನಂತರ ಹಲವು ಬಾರಿ ಕಸ್ಟಮರ್​ ಕೇರ್ ಅನ್ನೂ ಸಂಪರ್ಕಿಸಿದ್ದರು ಎಂದು ಆಯೋಗ ಹೇಳಿದೆ.

ಈ ಎಲ್ಲ ಕಾರಣಗಳಿಗಾಗಿ, ಮೊಬೈಲ್​ಗಾಗಿ ಪಡೆದಿದ್ದ 12,499 ರೂ.ವನ್ನು ಗ್ರಾಹಕರಿಗೆ ಮರಳಿ ನೀಡಬೇಕು. 20,000 ರೂ. ಪರಿಹಾರ ನೀಡಬೇಕು. ಕಾನೂನು ಹೋರಾಟದ ಖರ್ಚಿನ ಲೆಕ್ಕದಲ್ಲಿ 10,000 ರೂ. ನೀಡಬೇಕು ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ. ಗ್ರಾಹಕರು 2022ರ ಜನವರಿ 15ರಂದು 12,499 ರೂ. ಮೊತ್ತದ ಮೊಬೈಲ್​​ಫೋನ್ ಬುಕ್ ಮಾಡಿದ್ದರು. ಇದು ನಿಗದಿಯಂತೆ ಮರುದಿನ ಅವರ ಕೈಸೇರಬೇಕಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ