
ನವದೆಹಲಿ, ಮೇ 19: ಭಾರತದ ಸರಕುಗಳಿಗೆ ಬಾಂಗ್ಲಾದೇಶವು (Bangladesh) ಸಾರಿಗೆ ಶುಲ್ಕ ವಿಧಿಸುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ಹಾಕಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ನಿರ್ಬಂಧ ಕ್ರಮ ಜಾರಿಗೆ ತಂದಿದ್ದು, ಇದು ಬಾಂಗ್ಲಾದ ಅತಿದೊಡ್ಡ ಬ್ಯುಸಿನೆಸ್ ಆದ ಗಾರ್ಮೆಂಟ್ಸ್ ಉದ್ಯಮಕ್ಕೆ ಹಿನ್ನಡೆ ತರುವಂಥದ್ದಾಗಿದೆ. ಕಡಿಮೆ ಬೆಲೆಗೆ ಗಾರ್ಮೆಂಟ್ಸ್ ರಫ್ತು ಮಾಡುತ್ತಿದ್ದ ಬಾಂಗ್ಲಾದೇಶಕ್ಕೆ ಭಾರತದ ಈ ಕ್ರಮವು ಅನನುಕೂಲ ತರಲಿದೆ. ಬಾಂಗ್ಲಾದ ಬಟ್ಟೆಗಳು (Bangladesh garments) ಭಾರತಕ್ಕೆ ತಲುಪುವಷ್ಟರಲ್ಲಿ ಬೆಲೆ ದುಬಾರಿಯಾಗಲಿದೆ.
ಬಾಂಗ್ಲಾದೇಶದಲ್ಲಿ ತಯಾರಾದ ರೆಡಿಮೇಡ್ ಬಟ್ಟೆಗಳು ಅಂತಾರಾಷ್ಟ್ರೀಯ ಗಡಿ ಮೂಲಕ ರಸ್ತೆ ಮಾರ್ಗದಲ್ಲಿ ಭಾರತಕ್ಕೆ ರಫ್ತಾಗುತ್ತಿದ್ದುವು. ಈಗ ಇಲ್ಲಿ ಸರಕು ಸಾಗಣೆಗೆ ಭಾರತ ನಿರ್ಬಂಧ ಹಾಕಿದೆ. ಬಾಂಗ್ಲಾ ಗಾರ್ಮೆಂಟ್ಸ್ ಕಂಪನಿಗಳು ಈಗ ಭಾರತಕ್ಕೆ ರಫ್ತು ಮಾಡಬೇಕೆಂದರೆ ಹಡಗುಗಳ ಮೂಲಕ ಕೋಲ್ಕತಾ ಬಂದರು ಮತ್ತು ಮುಂಬೈನ ನಾವ ಶೇವಾ ಬಂದರುಗಳಿಗೆ ಹೋಗಿ, ಅಲ್ಲಿ ಆಮದು ಸುಂಕಗಳನ್ನು ಕಟ್ಟಿ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಭಾರತದಲ್ಲಿನ ಗ್ರಾಹಕರನ್ನು ತಲುಪಬೇಕು.
ಈ ಮುಂಚೆ ಇದ್ದ ರಸ್ತೆ ಮಾರ್ಗದಲ್ಲಾದರೆ 2-3 ದಿನದಲ್ಲಿ ಬಾಂಗ್ಲಾದ ಬಟ್ಟೆಗಳು ಭಾರತದಲ್ಲಿರುವ ತಮ್ಮ ಗ್ರಾಹಕರನ್ನು ತಲುಪುತ್ತಿದ್ದುವು. ಈಗ ಹಡಗುಗಳ ಮೂಲಕ ಬಂದರು ತಲುಪಿ, ಅಲ್ಲಿಂದ ರಸ್ತೆ ಮೂಲಕ ಸಾಗುವಷ್ಟರಲ್ಲಿ ಬಹಳ ಹೆಚ್ಚಿನ ದಿನಗಳಾಗಬಹುದು. ಬೆಲೆ ಕೂಡ ದುಬಾರಿಯಾಗಬಹುದು.
ಇದನ್ನೂ ಓದಿ: ಪಾಕಿಸ್ತಾನದ ಗಡಿಯಲ್ಲಿ ಭಾರತದ್ದು ಉಕ್ಕಿನ ಕೋಟೆ; ಚೀನಾ, ಬಾಂಗ್ಲಾ ಗಡಿಯಲ್ಲಿ ಅಕ್ಷರಶಃ ಅಭೇದ್ಯ ಕೋಟೆ
ಕಡಿಮೆ ಬೆಲೆಗೆ ಸಿಗುವ ಕಾರಣಕ್ಕೆ ಬಾಂಗ್ಲಾ ಬಟ್ಟೆಗಳಿಗೆ ಬೇಡಿಕೆ ಹೆಚ್ಚು ಇದೆ. ಈಗ ಸಾಗಣೆ ವೆಚ್ಚ ಹೆಚ್ಚುವುದರಿಂದ ಬೆಲೆಯೂ ಏರಿಕೆ ಆಗುತ್ತದೆ. ಅಗ್ಗದ ಬೆಲೆಯ ಅನುಕೂಲ ಬಾಂಗ್ಲಾ ಉದ್ಯಮಕ್ಕೆ ಇಲ್ಲದಂತಾಗುತ್ತದೆ.
ಬಾಂಗ್ಲಾದೇಶವು ಭಾರತಕ್ಕೆ ಒಂದು ವರ್ಷದಲ್ಲಿ 700 ಮಿಲಿಯನ್ ಡಾಲರ್ನಷ್ಟು ಗಾರ್ಮೆಂಟ್ಸ್ ರಫ್ತು ಮಾಡುತ್ತದೆ. ಅದರ ಒಟ್ಟಾರೆ ರಫ್ತಿಗೆ ಹೋಲಿಸಿದರೆ ಇದು ತೀರಾ ದೊಡ್ಡ ಮೊತ್ತವಲ್ಲ. ಆದರೂ ಕೂಡ ಬಾಂಗ್ಲಾ ಆರ್ಥಿಕತೆಗೆ ತುಸು ಹಿನ್ನಡೆ ತರುವುದು ಹೌದು.
ಬಾಂಗ್ಲಾದೇಶದಲ್ಲಿ ಕಾರ್ಮಿಕ ವೆಚ್ಚ ಕಡಿಮೆ. ಜೊತೆಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಸಿಗುತ್ತದೆ. ಚೀನಾದಿಂದ ಸುಂಕರಹಿತವಾಗಿ ಕಡಿಮೆ ಬೆಲೆಗೆ ಉಣ್ಣೆಗಳು ಸಿಗುತ್ತವೆ. ಇದರಿಂದ ಬಾಂಗ್ಲಾ ಕಂಪನಿಗಳಿಗೆ ಬಟ್ಟೆ ತಯಾರಿಕೆ ವೆಚ್ಚ ಕಡಿಮೆ ಇರುತ್ತದೆ. ಹಾಗೆಯೇ, ಬಾಂಗ್ಲಾದೇಶವು ಬಹಳ ಕಡಿಮೆ ಅಭಿವೃದ್ಧಿ ಹೊಂದಿದ ದೇಶವೆಂಬ ಗುಂಪಿನಲ್ಲಿರುವುದರಿಂದ ಪಾಶ್ಚಿಮಾತ್ಯ ದೇಶಗಳು ಕಡಿಮೆ ಆಮದು ಸುಂಕ ವಿಧಿಸುತ್ತವೆ. ಇದು ಗಾರ್ಮೆಂಟ್ಸ್ ರಫ್ತಿನಲ್ಲಿ ಬಾಂಗ್ಲಾದೇಶಕ್ಕೆ ಇರುವ ಮತ್ತೊಂದು ಅನುಕೂಲ.
ಇದನ್ನೂ ಓದಿ: ನೆರೆ ದೇಶಗಳೊಂದಿಗೆ ತಿಕ್ಕಾಟ ನಿಲ್ಲಿಸುವುದು ಸೇರಿದಂತೆ ಪಾಕಿಸ್ತಾನಕ್ಕೆ 11 ಷರತ್ತುಗಳನ್ನು ವಿಧಿಸಿದ ಐಎಂಎಫ್
ಕೆಲ ಭಾರತೀಯ ಕಂಪನಿಗಳೂ ಕೂಡ ಬಾಂಗ್ಲಾದೇಶದಲ್ಲಿ ಫ್ಯಾಕ್ಟರಿ ಸ್ಥಾಪಿಸಿವೆ. ಆದರೆ, ಬಾಂಗ್ಲಾ ಕಂಪನಿಗಳಿಗೆ ಇರುವ ಕೆಲ ಅನುಕೂಲಗಳು ಭಾರತೀಯ ಕಂಪನಿಗಳಿಗೆ ಇರುವುದಿಲ್ಲ.
ಈಗ ಭಾರತವು ಬಾಂಗ್ಲಾದ ಗಾರ್ಮೆಂಟ್ಸ್ ಸರಕುಗಳ ಮೇಲೆ ನಿರ್ಬಂಧ ಹಾಕಿರುವುದು ಎರಡು ಅನುಕೂಲಗಳನ್ನು ತರಲಿದೆ. ಒಂದು, ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮಕ್ಕೆ ತುಸು ಹಿನ್ನಡೆಯಾಗುತ್ತದೆ. ಎರಡನೆಯದು, ಭಾರತದ ಗಾರ್ಮೆಂಟ್ಸ್ ಉದ್ಯಮಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ