ಬ್ಯಾಂಕಿಂಗ್ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಹೊರತಂದಿದೆ. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನವನ್ನು ಅದರಲ್ಲಿ ಮಾಡಲಾಗಿದೆ.
ಆನ್ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ವಂಚಕರು ಹೇಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಎಗರಿಸಬಹುದು? ನೀವೇನು ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 3
ರಾಜು ಎಂಬ ವ್ಯಕ್ತಿ ಸೋಫಾ ಸೆಟ್ ಅನ್ನು ಮಾರಾಟ ಮಾಡಲು ಉದ್ದೇಶಿಸಿರುತ್ತಾರೆ. ಅದಕ್ಕಾಗಿ ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ಮಾಡುವ ಆನ್ಲೈನ್ ಮಾರ್ಕೆಟಿಂಗ್ ತಾಣವೊಂದರಲ್ಲಿ ಜಾಹೀರಾತು ಪೋಸ್ಟ್ ಮಾಡುತ್ತಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ 15,000 ರೂ. ನೀಡಿ ಸೋಫಾ ಸೆಟ್ ಖರೀದಿಸುವುದಾಗಿ ಹೇಳುತ್ತಾರೆ. ರಾಜು ಅವರಿಗೆ ಬಹಳ ಸಂತಸವಾಗುತ್ತದೆ. ನಂತರ ಏನಾಯ್ತು ನೋಡಿ…
ಅಪರಿಚಿತ: ಸೋಫಾ ಸೆಟ್ ಅನ್ನು ಕೊಂಡೊಯ್ಯುವುದಕ್ಕೂ ಮುನ್ನ ನಿಮಗೆ ಆನ್ಲೈನ್ ಮೂಲಕ ಹಣ ವರ್ಗಾಯಿಸುತ್ತೇನೆ
ರಾಜು: ಒಕೆ, ಫೈನ್
ಅಪರಿಚಿತ: ದಯಮಾಡಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನೀಡಿ
ರಾಜು: ನನ್ನ ಬ್ಯಾಂಕ್ ಖಾತೆ ಸಂಖ್ಯೆ 123 xxxx 67
ಅಪರಿಚಿತ: ಒಟ್ಟು ಮೊತ್ತ ಪಾವತಿಸುವ ಮುನ್ನ ಖಾತೆಯನ್ನು ಪರಿಶೀಲಿಸುವುದಕ್ಕಾಗಿ 10 ರೂ. ಪಾವತಿಸುತ್ತೇನೆ.
10 ರೂ. ಕಳುಹಿಸಿದ ಅಪರಿಚಿತ ವ್ಯಕ್ತಿ ಒಟ್ಟು ಮೊತ್ತ ಪಾವತಿಸುವುದಕ್ಕಾಗಿ ಬ್ಯಾಂಕ್ ಖಾತೆ ರಾಜು ಅವರದ್ದು ಹೌದೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ.
ರಾಜು: ಹಣ ಬಂದಿದೆ
ಬಳಿಕ ಅಪರಿಚಿತ ವ್ಯಕ್ತಿ 14,990 ರೂ. ಸ್ವೀಕರಿಸಲು ರಾಜುಗೆ ಯುಪಿಐ ವಿನಂತಿ ಕಳುಹಿಸುತ್ತಾರೆ.
ರಾಜು: ಅದು ನನ್ನ ಪಿನ್ ಸಂಖ್ಯೆ ನಮೂದಿಸಲು ಕೇಳುತ್ತದೆಯಲ್ಲಾ? ನಮೂದಿಸಬೇಕೇ?
ಅಪರಿಚಿತ: ಬ್ಯಾಂಕ್ ನಿಯಮಗಳ ಪ್ರಕಾರ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಪಿನ್ ಸಂಖ್ಯೆ ನಮೂದಿಸಬೇಕು.
ರಾಜು ಪಿನ್ ಸಂಖ್ಯೆ ನಮೂದಿಸುತ್ತಾರೆ. ತಕ್ಷಣ ಅವರ ಖಾತೆಯಿಂದ 14,990 ರೂ. ಕಡಿತವಾಗುತ್ತದೆ. ರಾಜುಗೆ ಮೋಸ ಹೋದ ಬಗ್ಗೆ ಅರಿವಾಗುತ್ತದೆ. ತಕ್ಷಣವೇ ಬ್ಯಾಂಕ್ಗೆ ತೆರಳಿ ದೂರು ದಾಖಲಿಸುತ್ತಾರೆ.
ನಿಮಗಿದು ತಿಳಿದಿರಲಿ…
ಅಪರಿಚಿತರೊಂದಿಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಒಟಿಪಿ ಕೂಡ ಶೇರ್ ಮಾಡಬೇಡಿ. ಯುಪಿಐ ಮೂಲಕ ಹಣ ಸ್ವೀಕರಿಸಲು ಪಿನ್ ಸಂಖ್ಯೆ ನಮೂದಿಸುವ ಅಗತ್ಯವಿಲ್ಲ ಎಂಬುದನ್ನು ತಿಳಿದಿರಿ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ