
ಬೆಂಗಳೂರು, ಅಕ್ಟೋಬರ್ 21: ಚಿನ್ನಾಭರಣಗಳನ್ನು ಹೊಂದಿದ್ದರೆ ಅದಕ್ಕೆ ದಾಖಲೆ ಪತ್ರಗಳಿಲ್ಲದಿದ್ದರೆ (unaccounted gold jewelleries) ಕಾನೂನು ಸಂಕಷ್ಟ ಎದುರಾಗುತ್ತದೆ. ಪಾರಂಪರಿಕವಾಗಿ ಬಂದ ಒಡವೆಗಳೂ ಸೇರಿ, ದಾಖಲೆರಹಿತವಾಗಿ ಇಟ್ಟುಕೊಳ್ಳಲು ಕಾನೂನು ಒಂದು ಮಿತಿ ನಿಗದಿ ಮಾಡಿದೆ. ಆ ಮಿತಿಗಿಂತ ಹೆಚ್ಚು ದಾಖಲೆರಹಿತ ಒಡವೆಗಳಿದ್ದರೆ ಅದನ್ನು ಅಕ್ರಮ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಸುದೀರ್ಘ ಕಾನೂನು ಹೋರಾಟ ಮಾಡಿ ಕೋಟ್ಯಂತರ ಮೌಲ್ಯದ ಒಡವೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದೃಷ್ಟವಶಾತ್ ಮಾತ್ರ.
ಆದಾಯ ತೆರಿಗೆ ಇಲಾಖೆಯು (IT dept) 2019ರ ನವೆಂಬರ್ 14ರಂದು ಬೆಂಗಳೂರಿನ ಈ ವ್ಯಕ್ತಿಯ ನಿವಾಸಕ್ಕೆ ರೇಡ್ ಮಾಡಿ ಶೋಧ ನಡೆಸಿತ್ತು. ಈ ವೇಳೆ, 2.487 ಕಿಲೋ ಚಿನ್ನ ಮತ್ತು 3 ಕಿಲೋ ಬೆಳ್ಳಿ ಆಭರಣಗಳು ಸಿಕ್ಕಿದವು. ಇವುಗಳ ಮೌಲ್ಯ 1.75 ಕೋಟಿ ಎಂದು ಗಣಿಸಲಾಯಿತು. ಈ ಪೈಕಿ ದಾಖಲೆಗಳಿಲ್ಲದ ಆಭರಣಗಳ ಮೌಲ್ಯ 1.65 ಕೋಟಿ ರೂ ಆಗಿತ್ತು. ಇದನ್ನು ಆದಾಯ ತೆರಿಗೆ ಅಧಿಕಾರಿಗಳು ಸೀಜ್ ಮಾಡಿದ್ದರು.
ಇದನ್ನೂ ಓದಿ: ಬಬಲ್ ಝೋನ್ನಲ್ಲಿ ಚಿನ್ನ; 400 ಡಾಲರ್ನಷ್ಟು ಬೆಲೆ ಇಳಿಕೆ ಸಾಧ್ಯತೆ: ಆಭರಣ ವ್ಯಾಪಾರಸ್ಥರ ಅನಿಸಿಕೆ
ಬೆಂಗಳೂರಿನ ಈ ವ್ಯಕ್ತಿ ತನ್ನಲ್ಲಿರುವ ಎಲ್ಲಾ ಪೇಮೆಂಟ್ ದಾಖಲೆಗಳನ್ನು ತೋರಿಸಿದ್ದರು. ಆನ್ಲೈನ್ ಪೇಮೆಂಟ್ ಮಾಡಿದ್ದು ಇತ್ಯಾದಿ ಸಬೂತುಗಳು ಅಷ್ಟು ಒಡವೆ ಸಾಕಾಗಲಿಲ್ಲ. ಅವರ ಆದಾಯ ತೆರಿಗೆ ರಿಟರ್ನ್ನಲ್ಲೂ ಈ ಯಾವುದೇ ಆಸ್ತಿಯ ಉಲ್ಲೇಖ ಕೂಡ ಆಗಿರಲಿಲ್ಲ. ಆ 1.65 ಕೋಟಿ ರೂ ಒಡವೆಗಳಿಗೆ ‘ತೆರಿಗೆ’ ಕಟ್ಟಬೇಕೆಂದು ಇಲಾಖೆ ಹೇಳಿತು. ಇದಕ್ಕೆ ಒಪ್ಪದ ಆ ವ್ಯಕ್ತಿ ಮೇಲ್ಮನವಿ ಆಯುಕ್ತರ (ಸಿಐಟಿ ಎ) ಮೊರೆ ಹೋದರು. ಅಲ್ಲಿ ಅವರ ಪರ ತೀರ್ಪು ಬಂತು. ಆದರೆ, ಆದಾಯ ತೆರಿಗೆ ಇಲಾಖೆಯು ಬೆಂಗಳೂರು ವಿಭಾಗದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಮೆಟ್ಟಿಲೇರಿತು. ಇಲ್ಲೂ ಕೂಡ ಆ ವ್ಯಕ್ತಿಯ ಪರವಾಗಿಯೇ ತೀರ್ಪು ಬಂದಿದ್ದು ಗಮನಾರ್ಹ.
ಆದಾಯ ತೆರಿಗೆ ಇಲಾಖೆಯು ಮನೆಯ ಮೇಲೆ ರೇಡ್ ಮಾಡಿ ಒಡವೆಗಳನ್ನು ಪತ್ತೆ ಮಾಡಿದ್ದರು. ಈ ವೇಳೆ, ವ್ಯಕ್ತಿಯ ಪತ್ನಿಯ ಹೇಳಿಕೆಯನ್ನು ಅಧಿಕಾರಿ ಪಡೆದರು. ಒಡವೆ ತನಗೆ ಸೇರಿದ್ದು ಎನ್ನುವುದಕ್ಕೆ ಆಕೆ ನೀಡಿದ್ದ ವಿವರಣೆಯನ್ನು ಅಧಿಕಾರಿ ಒಪ್ಪಿ ಸ್ವೀಕರಿಸಿದ್ದರು. ಆದರೆ, ಗಂಡ ನೀಡಿದ ವಿವರಣೆಯನ್ನು ಒಪ್ಪದೆ, ಅದು ಅಕ್ರಮ ಆಸ್ತಿ ಎಂದು ಹೇಳಿದ್ದು ಎಟಿಎಟಿಯಲ್ಲಿ ಆದಾಯ ತೆರಿಗೆ ಇಲಾಖೆಗೆ ಹಿನ್ನಡೆಯಾಯಿತು.
ಅಧಿಕಾರಿ ಮಾಡಿದ ಒಂದು ತಪ್ಪು, ಹಾಗೂ ಹೆಂಡತಿಯ ದೆಸೆಯಿಂದ ಬೆಂಗಳೂರಿನ ನಿವಾಸಿ ಕೋಟ್ಯಂತರ ರೂ ಹಣವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ದಾಖಲೆಗಳಲ್ಲದ ಆಸ್ತಿಗೆ ಶೇ 60ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದರ ಜೊತೆಗೆ ಶೇ. 25 ಹೆಚ್ಚುವರಿ ಶುಲ್ಕ ಹಾಗೂ ಶೇ 4 ಸೆಸ್ ಹಾಕಲಾಗುತ್ತದೆ. ತೆರಿಗೆಯ ಮೇಲೆ ಶೇ. 10ರಷ್ಟು ದಂಡವನ್ನೂ ಹಾಕಲಾಗುತ್ತದೆ. ಆ ಆಸ್ತಿಯ ಪೂರ್ಣ ಮೌಲ್ಯವನ್ನೇ ಟ್ಯಾಕ್ಸ್ ರೂಪದಲ್ಲಿ ಕಟ್ಟಬೇಕಾಗುತ್ತದೆ. ಅಂದರೆ, ಹೊಸದಾಗಿ ಆ ಆಸ್ತಿಯನ್ನು ಖರೀದಿಸಿದಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ