AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಯುಪಿ ಅಭಿವೃದ್ಧಿಗೆ ಪತಂಜಲಿ ಸಹಕಾರ; ಏರ್​ಪೋರ್ಟ್ ಸಮೀಪ ಅಗ್ರಿ ಎಕ್ಸ್​ಪೋರ್ಟ್ ಹಬ್

ನೋಯ್ಡಾದ ಸೆಕ್ಟರ್ 24A ನಲ್ಲಿ ಫುಡ್ ಪಾರ್ಕ್, ಹರ್ಬಲ್ ಪಾರ್ಕ್ ಯೋಜನೆಗಳಿಗಾಗಿ ಪತಂಜಲಿಗೆ ಮಂಜೂರು ಮಾಡಲಾದ ಭೂಮಿಯಲ್ಲಿ 50 ಎಕರೆಯನ್ನು ಕರ್ನಾಟಕದ ಇನ್ನೋವಾಗೆ ಸಬ್​ಲೀಸ್​ಗೆ ನೀಡಲಿ ಎನ್ನುವಂತಹ ಪ್ರಸ್ತಾವವನ್ನು YEIDA ಮಾಡಿದೆ. ಈ ಪ್ರದೇಶದಲ್ಲಿ ಪತಂಜಲಿಗೆ ಒಟ್ಟು 430 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇನ್ನೋವಾಗೆ ಸಬ್​ಲೀಸ್​ಗೆ ನೀಡಲಾಗುವ 50 ಎಕರೆ ಭೂಮಿಯಲ್ಲಿ ಕೃಷಿ ಹಬ್ ನಿರ್ಮಾಣ ಮಾಡಲಾಗುತ್ತದೆ.

ಪಶ್ಚಿಮ ಯುಪಿ ಅಭಿವೃದ್ಧಿಗೆ ಪತಂಜಲಿ ಸಹಕಾರ; ಏರ್​ಪೋರ್ಟ್ ಸಮೀಪ ಅಗ್ರಿ ಎಕ್ಸ್​ಪೋರ್ಟ್ ಹಬ್
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2025 | 4:46 PM

Share

ಉತ್ತರ ಪ್ರದೇಶ ಸರ್ಕಾರವು ಪಶ್ಚಿಮ ಉತ್ತರ ಪ್ರದೇಶವನ್ನು ಪ್ರಮುಖ ಕೃಷಿ ಹಬ್ (Agri export hub) ಆಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಈ ಉದ್ದೇಶಕ್ಕಾಗಿ, ಯಮುನಾ ಎಕ್ಸ್‌ಪ್ರೆಸ್‌ವೇ ಅಥವಾ ಜೇವರ್ ವಿಮಾನ ನಿಲ್ದಾಣದ ಬಳಿ ಫುಡ್ ಪಾರ್ಕ್ ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಬೃಹತ್ ಯೋಜನೆಯಲ್ಲಿ ಪತಂಜಲಿ ಪಾತ್ರ ಗಮನಾರ್ಹವಾಗಿ ಇರಲಿದೆ. ವರದಿಗಳ ಪ್ರಕಾರ, ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರವು (YEIDA) ಪತಂಜಲಿ (Patanjali) ಮತ್ತು ಕರ್ನಾಟಕದ ಕೋಲಾರದ ಇನ್ನೋವಾ ಫುಡ್ ಪಾರ್ಕ್ ನಡುವೆ ಪಾರ್ಟ್ನರ್​ಶಿಪ್​ನಲ್ಲಿ ಕೃಷಿ ಹಬ್ ನಿರ್ಮಿಸುವ ಪ್ಲಾನ್ ಪ್ರಸ್ತಾವಿಸಿದೆ. ಏರ್​ಪೋರ್ಟ್ ಸಮೀಪದಲ್ಲೇ ಫುಡ್ ಪಾರ್ಕ್ ಸ್ಥಾಪಿಸಲಾಗುತ್ತದೆ. ಸೆಕ್ಟರ್ 24ಎಯಲ್ಲಿ ಪತಂಜಲಿಗೆ ಒಂದಷ್ಟು ಭೂಮಿಯನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 50 ಎಕರೆ ಭೂಮಿಯನ್ನು ಕೋಲಾರದ ಇನ್ನೋವಾಗೆ ಸಬ್​ಲೀಸ್ ನೀಡುವಂತೆ ಪತಂಜಲಿಗೆ ಮನವಿ ಮಾಡಲಾಗುತ್ತಿದೆ.

ಪತಂಜಲಿಗೆ YEIDA ಆಫರ್

ಇನ್ನೋವಾ ಫುಡ್ ಪಾರ್ಕ್​ಗೆ ಸಬ್​ಲೀಸ್ ಕೊಡುವ ಯೋಜನೆಯನ್ನು ಪತಂಜಲಿ ಜೊತೆ ಪ್ರಸ್ತಾಪಿಸಲಾಗಿದೆ. ಅದರ ನಿಲುವು ಇನ್ನೂ ಅಂತಿಮಗೊಂಡಿಲ್ಲ ಎಂದು YEIDA ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಶೈಲೇಂದ್ರ ಭಾಟಿಯಾ ಹೇಳಿದ್ದಾರೆ. ಪತಂಜಲಿ ಈಗಾಗಲೇ ಸೆಕ್ಟರ್ 24A ನಲ್ಲಿ ದೊಡ್ಡ ಭೂಮಿಯನ್ನು ಹೊಂದಿದೆ. ಫುಡ್ ಪಾರ್ಕ್ ಸ್ಥಾಪನೆಗೆಂದು ಈ ಜಮೀನನ್ನು ಲೀಸ್​ಗೆ ಕೊಡಲಾಗಿದೆ. ಒಪ್ಪಂದದ ಪ್ರಕಾರ, ಶೇ. 20ರವರೆಗೆ ಸಬ್​ಲೀಸ್​ಗೆ ಕೊಡಬಹುದು. ಈ ಭೂಮಿ ಸೂಕ್ತ ಸ್ಥಳದಲ್ಲಿದ್ದು, ಕೃಷಿ ಸಂಸ್ಕರಿತ ಕಾರ್ಯಗಳಿಗೆಂದು ಇದನ್ನು ಮೀಸಲಿರಿಸಲಾಗಿದೆ. ಇದು ರಫ್ತು ಕೇಂದ್ರವಾಗಲು ಬಹಳ ಸೂಕ್ತವೂ ಆಗಿದೆ. ಪತಂಜಲಿಯು ಈ ಜಮೀನನ್ನು ಫುಡ್ ಪಾರ್ಕ್​ಗೆಂದು ಸಬ್​ಲೀಸ್​ಗೆ ಕೊಟ್ಟರೆ, ಪತಂಜಲಿಯ ಪ್ರಾಜೆಕ್ಟ್​ಗೂ ಅನುಕೂಲವಾಗುತ್ತದೆ ಎಂಬುದು ಯೀಡಾ (YEIDA) ವಿಶೇಷ ಕರ್ತವ್ಯಾಧಿಕಾರಿಯಾದ ಶೈಲೇಂದ್ರ ಭಾಡಿಯಾ ಹೇಳಿದ್ದಾರೆ.

ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಮಹಿಳೆಯರು ಮಾಡಬಹುದಾದ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ ಇದು

ಉತ್ತರಪ್ರದೇಶದ ಸಂಪುಟವು YEIDAದ ಈ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಪ್ರಾಜೆಕ್ಟ್ ವಿಶ್ವಬ್ಯಾಂಕ್​ನ ಭಾಗವಾಗಿ ಇರುವುದು ವಿಶೇಷ.

ಜೇವರ್ ಏರ್​ಪೋರ್ಟ್ ಪಶ್ಚಿಮ ಯುಪಿ ಪ್ರದೇಶದಲ್ಲಿ ಪ್ರಮುಖ ಸಾಗಣೆ ಕೇಂದ್ರವಾಗಿದೆ. ಇಲ್ಲಿ ಕೃಷಿ ರಫ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಅನುವಾಗುವ ರೀತಿಯಲ್ಲಿ ಪ್ರಾಜೆಕ್ಟ್ ಸಿದ್ಧಪಡಿಸಲಾಗಿದೆ.

ಫುಡ್ ಪಾರ್ಕ್​ನಲ್ಲಿ ಏನಿರಲಿದೆ?

ಕೃಷಿ ಮತ್ತು ತೋಟಗಾರಿಕೆಯ ವಿವಿಧ ಉತ್ಪನ್ನಗಳನ್ನು ರಫ್ತಿಗಾಗಿ ಕಳುಹಿಸುವ ಮುನ್ನ ಅವುಗಳ ಟೆಸ್ಟಿಂಗ್, ಗ್ರೇಡಿಂಗ್ ಮತ್ತು ಪ್ಯಾಕೇಜಿಂಗ್ ಮಾಡಲು ಅತ್ಯಾಧುನಿಕ ಸೌಕರ್ಯ ನಿರ್ಮಿಸುವುದು ಫುಡ್ ಪಾರ್ಕ್​ನ ಉದ್ದೇಶವಾಗಿದೆ. ಏರ್​ಪೋರ್ಟ್​ನ ಕಾರ್ಗೋ ಟರ್ಮಿನಲ್​ನಿಂದ (ಸರಕು ಸಾಗಣೆಗೆ) ಕೇವಲ 10 ಕಿಮೀ ದೂರದಲ್ಲಿದೆ. ಇದರಿಂದ ಕೃಷಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ನೇರವಾಗಿ ಕಳುಹಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ಪತಂಜಲಿ ವೆಲ್ನೆಸ್​ನಿಂದ ಬದಲಾದ ಜೀವನ; ಜನರ ಅನುಭವಗಳ ಕಥೆ ಕೇಳಿ

ಉತ್ತರಪ್ರದೇಶ ಸರ್ಕಾರ 2017ರಲ್ಲಿ ಸೆಕ್ಟರ್ 24ರಲ್ಲಿ ಪತಂಜಲಿ ಗ್ರೂಪ್​ಗೆ 430 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಫುಡ್ ಮತ್ತು ಹರ್ಬಲ್ ಪಾರ್ಕ್ ಅಭಿವೃದ್ಧಿಗೆ ಈ ಭೂಮಿ ಕೊಡಲಾಗಿದೆ. ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್ ನೋಯಿಡಾ ಪ್ರೈ ಲಿ ಸಂಸ್ಥೆಗೆ 300 ಎಕರೆ, ಹಾಗೂ ಪತಂಜಲಿ ಆಯುರ್ವೇದ ಲಿ ಸಂಸ್ಥೆಗೆ 130 ಎಕರೆ ಭೂಮಿಯನ್ನು ನಿಯೋಜಿಸಲಾಗಿದೆ.

YEIDA ಮಾಡಿರುವ ಈ ಪ್ರಸ್ತಾವಕ್ಕೆ ಪತಂಜಲಿ ಒಪ್ಪಿದಲ್ಲಿ ಕೋಲಾರದ ಇನ್ನೋವಾ ಸಂಸ್ಥೆ 50 ಎಕರೆ ಭೂಮಿಯನ್ನು ಸಬ್​ಲೀಸ್​ಗೆ ಪಡೆದು ಅಗ್ರಿ ಎಕ್ಸ್​ಪೋರ್ಟ್ ಹಬ್ ಅಭಿವೃದ್ಧಿಪಡಿಸಲಿದೆ. ಜಾಗತಿಕ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ನೇರವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಪಶ್ಚಿಮ ಯುಪಿ ಪ್ರದೇಶವು ಪ್ರಮುಖ ಕೃಷಿ ರಫ್ತು ಪ್ರದೇಶವಾಗಿ ಬೆಳವಣಿಗೆ ಸಾಧಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ