ಬೆಂಗಳೂರು, ಜೂನ್ 26: ಕರ್ನಾಟಕ ರಾಜಧಾನಿ ನಗರ ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದು ಕೆಲ ದಶಕಗಳೇ ಆಗಿವೆ. ಈಗಲೂ ಕೂಡ ತನ್ನ ಸ್ಥಾನವನ್ನು ಭದ್ರವಾಗಿ ಕಾಪಾಡಿಕೊಂಡು ಬರುತ್ತಿದೆ. ಮೂಲ ಸಿಲಿಕಾನ್ ವ್ಯಾಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (San Francisco) ಇದೆ. ಮೂಲ ಸಿಲಿಕಾನ್ ವ್ಯಾಲಿಯಲ್ಲಿರುವವರಿಗೆ ಸಿಲಿಕಾನ್ ಸಿಟಿ ಎನಿಸಿದ ಬೆಂಗಳೂರು ಹೇಗನಿಸೀತು? ಮೇಲ್ನೋಟಕ್ಕೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಂಡವರು ಕಾಲಿಡಲೇ ಹೆದರಬಹುದು. ಆದರೆ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಏಳು ವರ್ಷ ಇದ್ದು ಈಗ ಬೆಂಗಳೂರಿನಲ್ಲಿ ಸ್ಟಾರ್ಟಪ್ವೊಂದನ್ನು ಆರಂಭಿಸಿದರುವ ಹರ್ದೀಪ್ ಗಂಭೀರ್ (Hardeep Gambhir) ಎಂಬ ಉದ್ಯಮಿ ಅನುಭವ ವಿಭಿನ್ನವಾಗಿದೆ. ಉದ್ಯಾನನಗರಿಯ ಬಗ್ಗೆ ಹೊಗಳಿಕೆಯ ಮಳೆಯನ್ನೇ ಸುರಿಸಿದ್ದಾರೆ. ಕಡಿಮೆ ಜೀವನ ವೆಚ್ಚದಿಂದ ಹಿಡಿದು ಇಲ್ಲಿನ ಹಿತವೆನಿಸುವ ತಾಪಮಾನದವರೆಗೂ ಬೆಂಗಳೂರಿನ ಕೆಲ ಅಂಶಗಳು ಹರದೀಪ್ಗೆ ಬಹಳ ಮೆಚ್ಚುಗೆಯಾಗಿವೆ.
ಹರ್ದೀಪ್ ಗಂಭೀರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬೆಂಗಳೂರಿನ ಬಗ್ಗೆ ಒಂದಷ್ಟು ಆಸಕ್ತಿದಾಯಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ದೇವನಹಳ್ಳಿಯ ಏರ್ಪೋರ್ಟ್ನಲ್ಲಿ ಊಬರ್ ಝೋನ್ ಕ್ಯಾಬ್ ವ್ಯವಸ್ಥೆ ಅವರಿಗೆ ಬಹಳ ಹಿಡಿಸಿತಂತೆ. ‘ಊಬರ್ ಬುಕ್ ಮಾಡಿ ಅದಕ್ಕಾಗಿ ಕಾಯುತ್ತಾ ಇರುವ ಬದಲು, ಊಬರ್ ಬುಕ್ ಮಾಡಿ, ಸರದಿಯಲ್ಲಿ ಮೊದಲಿರುವ ಕ್ಯಾಬ್ಗೆ ಹೋಗಿ ಪಿನ್ ತಿಳಿಸಿದರೆ ಸಾಕು. ಸ್ವಲ್ಪವೂ ಕಾಯಬೇಕಿಲ್ಲ,’ ಎಂದು ಅವರು ಹೇಳುತ್ತಾರೆ.
ಬೆಂಗಳೂರಿನ ಬಗ್ಗೆ ಹರ್ದೀಪ್ ಗಂಭೀರ್ಗೆ ಅಚ್ಚರಿ ಎನಿಸಿದ ಅಂಶಗಳಲ್ಲಿ ಇಲ್ಲಿನ ಜನರಿಗೆ ಇರುವ ಇಂಗ್ಲೀಷ್ ತಿಳಿವಳಿಕೆ. ಸಾಮಾನ್ಯ ಬೆಂಗಳೂರಿಗರಿಗೆ ಇಂಗ್ಲೀಷ್ ಬರಲ್ಲ, ಹಿಂದಿಯಲ್ಲೇ ಕಮ್ಯೂನಿಕೇಟ್ ಮಾಡಬೇಕಾಗುತ್ತೆ ಎಂದು ಇಲ್ಲಿಗೆ ಬಂದಿದ್ದ ಉದ್ಯಮಿ ಹರ್ದೀಪ್ ಗಂಭೀರ್ಗೆ ಅಚ್ಚರಿ ಕಾದಿತ್ತು. ‘ಭಾರತದ ನಗರಗಳ ಪೈಕಿ ಇಂಗ್ಲೀಷ್ ಅತಿ ಹೆಚ್ಚು ಮಾತನಾಡುವ ನಗರ ಬೆಂಗಳೂರು ಎಂಬುದು ತಿಳಿದು ಅಚ್ಚರಿ ಆಯಿತು,’ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್ವಿಡ್ತ್ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್
ಹರ್ದೀಪ್ ಗಂಭೀರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದಾಗ ಅವರ ತಿಂಗಳ ವೆಚ್ಚ 2,500 ಡಾಲರ್ ಇತ್ತು. ಅಂದರೆ, ಸುಮಾರು ಎರಡು ಲಕ್ಷ ರೂ. ಅದೇ ಬೆಂಗಳೂರಿನಲ್ಲಿ ಇವರ ಮಾಸಿಕ ವೆಚ್ಚ 900 ಡಾಲರ್ (75,000 ರೂ) ಮಾತ್ರವೇ ಇದೆಯಂತೆ. ಅವರ ಪ್ರಕಾರ ಇದು ಇದು ಬಹಳ ಕಡಿಮೆ.
ಹರ್ದೀಪ್ ಅವರಿಗೆ ಬೆಂಗಳೂರಿನ ಡೋರ್ ಡೆಲಿವರಿ ವ್ಯವಸ್ಥೆ ಬಹಳ ಇಷ್ಟವಾಗಿದೆ. ಕ್ಷಿಪ್ರಗತಿಯಲ್ಲಿ ವಸ್ತುಗಳನ್ನು ತಂದು ಮನೆಗೆ ತಲುಪಿಸುತ್ತಾರೆ. ರಾತ್ರಿ 2:30ಕ್ಕೆ ಇವರು ಆರ್ಡರ್ ಮಾಡಿದ ವಸ್ತುಗಳು 2:37ಕ್ಕೆಲ್ಲಾ ಬಂದಿತಂತೆ. ಹಾಗೆಂದು ಅವರು ಹೇಳಿಕೊಂಡಿದ್ದಾರೆ.
Since I moved out of India 7 years ago, I thought I’d never live here again.
After spending a lot of time in the Bay, in May, I moved to Bangalore where I had never been to start @_TheResidency.
And it has been an immaculate SF-like experience in this city.
Here’s why🧵:
— Hardeep (@hardeep_gambhir) June 21, 2024
ಹಾಗೆಯೇ, ಬೆಂಗಳೂರಿನ ಉಷ್ಣಾಂಶ ಭಾರತದ ಬೇರೆ ನಗರಗಳಿಗೆ ಹೋಲಿಸಿದರೆ ಬಹಳ ಚಂದ ಇದೆ ಎಂದು ಹೇಳುವ ಅವರು, ಸಿಲಿಕಾನ್ ಸಿಟಿಯು ಮಹಿಳೆಯರಿಗೂ ಸುರಕ್ಷಿತ ನಗರವಾಗಿದೆ ಎನ್ನುತ್ತಾರೆ. ಅದರಲ್ಲೂ ಎಚ್ಎಸ್ಆರ್ ಲೇ ಔಟ್ ಬಡಾವಣೆಯನ್ನು ಶ್ಲಾಘಿಸಿದ್ದು ಸ್ಯಾನ್ ಫ್ರಾನ್ಸಿಸ್ಕೋದ ಹೇಯ್ಸ್ ವ್ಯಾಲಿಗೆ ಹೋಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್
ಬೆಂಗಳೂರಿನ ಬಗ್ಗೆ ಹರ್ದೀಪ್ಗೆ ಇಷ್ಟವಾಗಿದ್ದು ಇಷ್ಟೇ ಅಲ್ಲ. ಇಲ್ಲಿಯ ಸ್ಟಾರ್ಟಪ್ ಇಕೋಸಿಸ್ಟಂ, ಪ್ರತಿಭೆಗಳ ಲಭ್ಯತೆ ಇವೆಲ್ಲವೂ ಅವರ ಗಮನ ಸೆಳೆದಿದೆ. ಅಂದಹಾಗೆ ಹರ್ದೀಪ್ ಗಂಭೀರ್ ಅವರು ಬೆಂಗಳೂರಿನಲ್ಲಿ ದಿ ರೆಸಿಡೆನ್ಸಿ ಎಂಬ ಸ್ಟಾರ್ಟಪ್ ಆರಂಭಿಸಿದ್ದಾರೆ.
ಬೆಂಗಳೂರಿನ ಬಗ್ಗೆ ಹಿಡಿಸದೇ ಇರುವ ಅಂಶಗಳೂ ಹರ್ದೀಪ್ಗೆ ಇವೆ. ಇಲ್ಲಿಯ ಸೊಳ್ಳೆ ಕಾಟ ಅವರಿಗೆ ಆಘಾತ ತಂದಿದೆ. ಹಾಗೆಯೇ, ಮನೆ ಬಾಡಿಗೆಗೆ ಹೋಗುವಾಗ ಬಹಳ ಅಧಿಕ ಮೊತ್ತದ ಹಣವನ್ನು ಸೆಕ್ಯೂರಿಟಿ ಡೆಪಾಸಿಟ್ ಆಗಿ ಪಡೆಯುತ್ತಾರೆ ಎಂದು ಅವರು ಅಲವತ್ತುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬಾಡಿಗೆ ಹಣದ ಹತ್ತು ಪಟ್ಟು ಹಣವನ್ನು ಅಡ್ವಾನ್ಸ್ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಆಗಿ ಪಡೆಯಲಾಗುತ್ತದೆ. ಈ ವಿಚಾರ ಹರ್ದೀಪ್ಗೆ ಹಿಡಿಸಲಿಲ್ಲ. ಇನ್ನು, ಬೆಂಗಳೂರಿನ ನೊಟೋರಿಯಸ್ ಟ್ರಾಫಿಕ್ ಸಮಸ್ಯೆ ಬಗ್ಗೆ ಅವರು ಏನೂ ಕಾಮೆಂಟ್ ಮಾಡಿಲ್ಲದಿರುವುದು ಅಚ್ಚರಿಯೇ ಸರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ