ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ – ನವೆಂಬರ್ ಅವಧಿಯಲ್ಲಿ ನೇರ ನಿವ್ವಳ ತೆರಿಗೆ ಸಂಗ್ರಹದಲ್ಲಿ (Direct Tax Collection) ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 24ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ 8.77 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು 2022-23ನೇ ಸಾಲಿನ ಬಜೆಟ್ ಅಂದಾಜಿನ ಶೇಕಡಾ 61.79ರಷ್ಟಾಗಿದೆ ಎಂದು ಹಣಕಾಸು ಸಚಿವಾಲಯ (Ministry of Finance) ಸೋಮವಾರ ತಿಳಿಸಿದೆ.
‘ನವೆಂಬರ್ 30ರ ವರೆಗಿನ ಲೆಕ್ಕಾಚಾರ ಪ್ರಕಾರ, ನಿವ್ವಳ ನೇರ ತೆರಿಗೆ ಸಂಗ್ರಹ 8.77 ಲಕ್ಷ ಕೋಟಿ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 24.26ರಷ್ಟು ಹೆಚ್ಚಾಗಿದೆ’ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
Steady growth in Direct Tax collections!
Net collection in FY 2022-23 is 24.26% higher than the net collection for the corresponding period of the preceding year.
61.79% of Budget Estimates for FY 2022-23 already achieved.#NotJustFinance#AatmanirbharForGrowth pic.twitter.com/ybdnhWL2he— Ministry of Finance (@FinMinIndia) December 12, 2022
ಈ ವರ್ಷ 14.20 ಲಕ್ಷ ಕೋಟಿ ನೇರ ತೆರಿಗೆ ಸಂಗ್ರವಾಗಬಹುದೆಂದು ಬಜೆಟ್ನಲ್ಲಿ ಅಂದಾಜಿಸಲಾಗಿತ್ತು. ಇದು 2021-22ನೇ ಸಾಲಿನ 14.10 ಲಕ್ಷ ಕೋಟಿಗಿಂತಲೂ ಹೆಚ್ಚಾಗಿತ್ತು. ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆಗಳು ನೇರ ತೆರಿಗೆ ವ್ಯಾಪ್ತಿಯಡಿ ಬರುತ್ತವೆ. ತೆರಿಗೆ ಸಂಗ್ರಹವು ದೇಶದ ಆರ್ಥಿಕ ಚಟುವಟಿಕೆಗಳ ಸೂಚಕವೂ ಆಗಿದೆ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣ ಬಿಡುಗಡೆ, ಕರ್ನಾಟಕಕ್ಕೆ ಎಷ್ಟು ಬಂತು?
ಜಿಎಸ್ಟಿಯಿಂದ ಪ್ರತಿ ತಿಂಗಳು 1.45 – 1.50 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್ 1ರಿಂದ ನವೆಂಬರ್ 30ರ ಅವಧಿಯಲ್ಲಿ 2.15 ಲಕ್ಷ ಕೋಟಿ ರಿಫಂಡ್ ಮಾಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 67ರಷ್ಟು ಹೆಚ್ಚು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಜಿಎಸ್ಟಿ ಸಂಗ್ರಹವೂ ಹೆಚ್ಚಳ
ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಮೂಲಕ 1,45,867 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಸಂಗ್ರಹವಾದ ಜಿಎಸ್ಟಿ ಆದಾಯಕ್ಕಿಂತ ಇದು ಶೇಕಡಾ 11ರಷ್ಟು ಹೆಚ್ಚು ಎಂದು ಕೇಂದ್ರ ಹಣಕಾಸು ಸಚಿವಾಲಯ ಇತ್ತೀಚೆಗೆ ತಿಳಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಕೂಡ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 1,51,718 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಅಕ್ಟೋಬರ್ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Mon, 12 December 22