Brightcom Fraud: ಅಕ್ರಮ ಹಣಕಾಸು ವರದಿ ಆರೋಪ: ಬ್ರೈಟ್​ಕಾಮ್ ಗ್ರೂಪ್​ಗೆ ಶೋಕಾಸ್ ನೋಟೀಸ್; ಕುಸಿಯುತ್ತಿರುವ ಷೇರುಬೆಲೆ

|

Updated on: Apr 14, 2023 | 11:39 AM

Showcause Notice To Brightcom Group: ಹೂಡಿಕೆದಾರರನ್ನು ಪ್ರಭಾವಗೊಳಿಸಲು ಬ್ರೈಟ್​ಕಾಮ್ ಗ್ರೂಪ್​ಗೆ ಹೆಚ್ಚಿನ ಲಾಭ ಮತ್ತು ಆದಾಯದ ಲೆಕ್ಕ ತೋರಿಸಲಾಗಿದೆ. ಇದು ಷೇರುಬೆಲೆಯನ್ನು ಕೃತಕವಾಗಿ ಉಬ್ಬಿಸುವ ಉದ್ದೇಶದಿಂದ ಮಾಡಿರುವುದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಸೆಬಿ ಹೇಳಿದೆ.

Brightcom Fraud: ಅಕ್ರಮ ಹಣಕಾಸು ವರದಿ ಆರೋಪ: ಬ್ರೈಟ್​ಕಾಮ್ ಗ್ರೂಪ್​ಗೆ ಶೋಕಾಸ್ ನೋಟೀಸ್; ಕುಸಿಯುತ್ತಿರುವ ಷೇರುಬೆಲೆ
ಬ್ರೈಟ್​ಕಾಮ್ ಗ್ರೂಪ್​ನ ಪ್ರೊಮೋಟರ್ ಸುರೇಶ್ ರೆಡ್ಡಿ (ಬಲಗಡೆ ಕೈಕುಲುಕುತ್ತಿರುವವರು)
Follow us on

ನವದೆಹಲಿ: ಪ್ರಮುಖ ಜಾಹೀರಾತು ತಂತ್ರಜ್ಞಾನ ಕಂಪನಿ ಬ್ರೈಟ್​ಕಾಮ್ ಗ್ರೂಪ್​ಗೆ (Brightcom Group) ಸೆಬಿ ಏಪ್ರಿಲ್ 13ರಂದು ಶೋಕಾಸ್ ನೋಟೀಸ್ ಜಾರಿ ಮಾಡಿರುವ ಘಟನೆ ನಡೆದಿದೆ. ಕಂಪನಿಯ ಹಣಕಾಸು ವರದಿಯಲ್ಲಿ ವಂಚನೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಬ್ರೈಟ್​ಕಾಮ್ ಗ್ರೂಪ್ ಹಾಗೂ ಅದರ ನಿರ್ದೇಶಕರಿಗೆ ನೋಟೀಸ್ ಕೊಡಲಾಗಿದೆ. ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತನ್ನ ಮಧ್ಯಂತರ ಆದೇಶದಲ್ಲಿ ಬ್ರೈಟ್​ಕಾಮ್ ಗ್ರೂಪ್​ನ ಸುರೇಶ್ ಕುಮಾರ್ ರೆಡ್ಡಿ, ವಿಜಯ್ ಕಾಂಚಾರಿಯಾ, ಯೆರದೊಡ್ಡಿ ರಮೇಶ್ ರೆಡ್ಡಿ ಮತ್ತು ವೈ ಶ್ರೀನಿವಾಸ ರಾವ್ ಅವರಿಗೆ ಶೋಕಾಸ್ ಜಾರಿ ಮಾಡಿದೆ. ಈ ನಾಲ್ಕವರ ಪೈಕಿ ಸುರೇಶ್ ರೆಡ್ಡಿ ಮತ್ತು ವಿಜಯ್ ಕಾಂಚಾರಿಯಾ ಅವರು ಪ್ರೊಮೋಟರ್ ಗ್ರೂಪ್​ಗೆ ಸೇರಿದವರು. ವೈ ಶ್ರೀನಿವಾಸರಾವ್ ಈ ಕಂಪನಿಯ ಸಿಎಫ್​ಒ ಆಗಿದ್ದಾರೆ.

ತನ್ನ ಮುಂದಿನ ಆದೇಶ ಬರುವವರೆಗೂ ಈ ನಾಲ್ವರು ಆರೋಪಿಗಳು ಹಾಗೂ ಅವರ ಕುಟುಂಬ ಸದಸ್ಯರು ತಮ್ಮಲ್ಲಿರುವ ಸಂಸ್ಥೆಯ ಷೇರುಗಳನ್ನು ಪರೋಕ್ಷವಾಗಿ ಅಥವಾ ನೇರವಾಗಿ ಮಾರುವುದಾಗಲೀ, ವಿಲೇವಾರಿಯಾಗಲೀ ಮಾಡುವಂತಿಲ್ಲ ಎಂದು ಸೆಬಿ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಈ ಬೆಳವಣಿಗೆ ಆದ ಬೆನ್ನಲ್ಲೇ ಬ್ರೈಟ್​​ಕಾಮ್ ಗ್ರೂಪ್​ನ ಷೇರುಗಳು ಪ್ರಪಾತಕ್ಕೆ ಬೀಳುತ್ತಿವೆ. 16.51 ರೂ ಇದ್ದ ಅದರ ಷೇರುಬೆಲೆ 15.45 ರುಪಾಯಿಗೆ ಕುಸಿದಿದೆ.

ಇದನ್ನೂ ಓದಿInfosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

ಕೃತಕ ಲಾಭ ಸೃಷ್ಟಿಸಿ ಷೇರು ಬೆಲೆ 6 ಪಟ್ಟು ಹೆಚ್ಚುವಂತೆ ಮಾಡಿದ್ದ ಆರೋಪಿಗಳು

ಜಾಹೀರಾತು ಕ್ಷೇತ್ರದ ಬ್ರೈಟ್​ಕಾಮ್ ಗ್ರೂಪ್ ಕಂಪನಿ ಹೈದರಾಬಾದ್ ಮೂಲದ್ದು. ಅಮೆರಿಕ, ಇಸ್ರೇಲ್, ಲ್ಯಾಟಿನ್ ಅಮೆರಿಕ, ಪಶ್ಚಿಮ ಯೂರೋಪ್, ಏಷ್ಯಾ ಪೆಸಿಫಿಕ್ ಸೇರಿದಂತೆ ವಿಶ್ವಾದ್ಯಂತ ಅದರ ಅಂಗಸಂಸ್ಥೆಗಳಿವೆ. ಜಾಹೀರಾತು ತಂತ್ರಜ್ಞಾನ, ನ್ಯೂ ಮೀಡಿಯಾ, ಡಿಜಿಟಲ್ ಆ್ಯಡ್ ವ್ಯವಹಾರಗಳನ್ನು ಈ ಸಂಸ್ಥೆ ನಿರ್ವಹಿಸುತ್ತದೆ.

ಈ ಸಂಸ್ಥೆಯ ಹಣಕಾಸು ವರದಿಗಳಲ್ಲಿ ಅಕ್ರಮ ಇದೆ ಎಂಬಂತಹ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೆಬಿ ತನಿಖೆ ಕೈಗೊಂಡಿತ್ತು. 2014-15ರಿಂದ 2019-20ವರವರೆಗಿನ ಅವಧಿಯಲ್ಲಿ ಈ ಸಂಸ್ಥೆಯ ಲೆಕ್ಕಪತ್ರಗಳನ್ನು ಸೆಬಿ ಅಧಿಕಾರಿಗಳು ಜಾಲಾಡಿದ್ದಾರೆ. ಸುಳ್ಳು ಲಾಭ, ಆದಾಯದ ಲೆಕ್ಕಗಳನ್ನು ತೋರಿಸಿರುವುದು ಸೆಬಿ ಗಮನಕ್ಕೆ ಬಂದಿದೆ.

ಇದನ್ನೂ ಓದಿPhonePe: ಫೋನ್ ಪೇ ಈಗಲೂ ಯಾಕೆ ನಂಬರ್ ಒನ್? ಅದರ ಬಳಿ ಇದೆ ಪಿನ್​ಕೋಡ್, ಸ್ಮಾರ್ಟ್ ಸ್ಪೀಕರ್ ಅಸ್ತ್ರ

ಹೂಡಿಕೆದಾರರನ್ನು ಪ್ರಭಾವಗೊಳಿಸಲು ಬ್ರೈಟ್​ಕಾಮ್ ಗ್ರೂಪ್​ಗೆ ಹೆಚ್ಚಿನ ಲಾಭ ಮತ್ತು ಆದಾಯದ ಲೆಕ್ಕ ತೋರಿಸಲಾಗಿದೆ. ಇದು ಷೇರುಬೆಲೆಯನ್ನು ಕೃತಕವಾಗಿ ಉಬ್ಬಿಸುವ ಉದ್ದೇಶದಿಂದ ಮಾಡಿರುವುದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಯಾವುದೇ ಮಾನದಂಡ ಇಟ್ಟು ನೋಡಿದರೂ ಈ ಕಂಪನಿಯ ಹಣಕಾಸು ಲೆಕ್ಕಗಳನ್ನು ತಿರುಚಲಾಗಿರುವುದು ಕಂಡುಬರುತ್ತದೆ. ಇದು ಕಂಪನಿಯ ಆದಾಯ ಮತ್ತು ಲಾಭದ ಲೆಕ್ಕಗಳನ್ನು ಉಬ್ಬಿಸಿರುವುದು ಮಾತ್ರವಲ್ಲ, ಕಳೆದ 3 ವರ್ಷದಲ್ಲಿ ಅದರ ಷೇರುಮೌಲ್ಯ ಕೂಡ ಶೇ. 657ರಷ್ಟು ಹೆಚ್ಚಾಗಿದೆ ಎಂದು ಸೆಬಿ ತನ್ನ 70ಕ್ಕೂ ಹೆಚ್ಚು ಪುಟಗಳ ಮಧ್ಯಂತರ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಕುತೂಹಲವೆಂದರೆ ಫಸ್ಟ್ ಗ್ಲೋಬಲ್ ಸಂಸ್ಥೆಯ ಮಾಲೀಕ ಹಾಗೂ ಷೇರುಪೇಟೆ ಅನುಭವಿ ಉದ್ಯಮಿ ಶಂಕರ್ ಶರ್ಮಾ ಅವರು ಬ್ರೈಟ್​ಕಾಮ್ ಗ್ರೂಪ್​ನಲ್ಲಿ ಶೇ. 1.2ರಷ್ಟು ಷೇರುಪಾಲು ಹೊಂದಿದ್ದಾರೆ.

ಬ್ರೈಟ್​ಕಾಮ್ ಗ್ರೂಪ್ ಇತಿಹಾಸ

ಸುರೇಶ್ ರೆಡ್ಡಿ ಮತ್ತು ವಿಜಯ್ ಕಾಂಚಾರ್ಲಾ ಅವರು 1999ರಲ್ಲಿ ಯುಎಸ್​ಎಗ್ರೀಟಿಂಗ್ಸ್ ಡಾಟ್ ಕಾಮ್ ಎಂಬ ಹೆಸರಿನ ಕಂಪನಿ ಸ್ಥಾಪಿಸಿದರು. 2000ರಲ್ಲಿ ಅದು ವೈಬ್ರಾಂಟ್ ಟೆಕ್ನಾಲಜೀಸ್ ಎಂದು ಬದಲಾಯಿತು. ವರ್ಷಗಳುರುಳಿದಂತೆ ಬೇರೆ ಕೆಲವೊಂದಿಷ್ಟು ಕಂಪನಿಗಳನ್ನು ಖರೀದಿಸಿದ ಬಳಿಕ ಅದರ ಹೆಸರು ವೈಬ್ರಾಂಟ್ ಡಿಜಿಟಲ್ ಆಯಿತು. 2010ರಲ್ಲಿ ಸರ್ಚ್ ಎಂಜಿನ್ ಕಂಪನಿ ಲೈಕೋಸ್ ಅನ್ನು ಖರೀದಿಸಿತು. 2018ರಲ್ಲಿ ಇದು ಬ್ರೈಟ್​ಕಾಮ್ ಆಗಿ ಹೆಸರು ಬದಲಾವಣೆ ಮಾಡಿಕೊಂಡಿತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Fri, 14 April 23