PhonePe: ಫೋನ್ ಪೇ ಈಗಲೂ ಯಾಕೆ ನಂಬರ್ ಒನ್? ಅದರ ಬಳಿ ಇದೆ ಪಿನ್​ಕೋಡ್, ಸ್ಮಾರ್ಟ್ ಸ್ಪೀಕರ್ ಅಸ್ತ್ರ

Phone Pe Smartspeaker and Pincode: ಭಾರತದ ನಂಬರ್ ಒನ್ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್ ಪೇ ಕಳೆದ 6 ತಿಂಗಳಲ್ಲಿ 20 ಲಕ್ಷ ಸ್ಮಾರ್ಟ್ ಸ್ಪೀಕರ್​ಗಳನ್ನು ವರ್ತಕರ ಅಂಗಡಿಗಳಲ್ಲಿ ಅಳವಡಿಸಿದೆ. ಹಾಗೆಯೇ ಪಿನ್​ಕೋಡ್ ಎನ್ನುವ ಇಕಾಮರ್ಸ್ ಆ್ಯಪ್ ಕೂಡ ಫೋನ್​ಪೇಗೆ ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.

PhonePe: ಫೋನ್ ಪೇ ಈಗಲೂ ಯಾಕೆ ನಂಬರ್ ಒನ್? ಅದರ ಬಳಿ ಇದೆ ಪಿನ್​ಕೋಡ್, ಸ್ಮಾರ್ಟ್ ಸ್ಪೀಕರ್ ಅಸ್ತ್ರ
ಫೋನ್​ಪೇ
Follow us
|

Updated on: Apr 13, 2023 | 7:03 PM

ನವದೆಹಲಿ: ಭಾರತದ ನಂಬರ್ ಒನ್ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್ ಪೇ (PhonePe) ದಿನ ಕಳೆದಂತೆ ಪ್ರಬಲವಾಗುತ್ತಲೇ ಹೋಗುತ್ತಿದೆ. ಬಹಳ ಹೆಚ್ಚು ಫೀಚರ್ಸ್ ಮತ್ತು ವಿಸ್ತಾರ ಹೊಂದಿರುವ ಪೇಟಿಎಂ ಹಾಗೂ ದೈತ್ಯ ಗೂಗಲ್​ನ ಜಿಪೇಗೂ ಫೋನ್ ಪೇ ಅನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಪೇಟಿಎಂ ಮತ್ತು ಗೂಗಲ್ ಪೇಗಿಂತ ಹೆಚ್ಚು ಗ್ರಾಹಕರನ್ನು ಫೋನ್ ಪೇ ಹೊಂದಿದೆ. ಮೊದಲಿಂದಲೂ ಫೋನ್ ಪೇ ಮಾರುಕಟ್ಟೆ ಪ್ರಾಬಲ್ಯ ಉಳಿಸಿಕೊಂಡು ಬರುತ್ತಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಂತಹ ಪ್ರಯೋಗಗಳನ್ನು ಫೋನ್ ಪೇ ಮಾಡುತ್ತಿರುತ್ತದೆ.

ಪೇಟಿಎಂನ ಸೌಂಡ್​ಬಾಕ್ಸ್ (Paytm Soundbox) ರೀತಿಯಲ್ಲಿ ಫೋನ್ ಪೇ ಕಳೆದ ವರ್ಷ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿತ್ತು. ಕೇವಲ 6 ತಿಂಗಳಲ್ಲಿ ವರ್ತಕರ ಅಂಗಡಿಗಳಿಗೆ 20 ಲಕ್ಷ ಸ್ಮಾರ್ಟ್ ಸ್ಪೀಕರ್​ಗಳನ್ನು (Smart Speakers) ಫೋನ್ ಪೇ ಅಳವಡಿಸಿದೆ. ಈ ಸ್ಮಾರ್ಟ್​ಸ್ಪೀಕರ್​ಗಳು ಯಾರಾದರೂ ಗ್ರಾಹಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದಾಗ ಧ್ವನಿ ಸಂದೇಶದ ಮೂಲಕ ಅಲರ್ಟ್ ಮಾಡುತ್ತವೆ. ಫೋನ್ ಪೇ ಸ್ಮಾರ್ಟ್​ಸ್ಪೀಕರ್ ಸಾಧನ ಒಮ್ಮೆ ಚಾರ್ಜ್ ಮಾಡಿದರೆ ನಾಲ್ಕು ದಿನಗಳವರೆಗೆ ಅದರ ಬ್ಯಾಟರಿ ಬಾಳಿಕೆ ಬರುತ್ತದೆ.

ಅಂದಹಾಗೆ, ಇಂಥ ಸ್ಪೀಕರ್​ಗಳನ್ನು ಮೊದಲು ಜಾರಿಗೆ ತಂದಿದ್ದು ಪೇಟಿಎಂ. ಸೌಂಡ್​ಬಾಕ್ಸ್ ಎಂಬ ಅದರ ಸಾಧನ ಜನಪ್ರಿಯವಾಗಿದೆ. ಇದೀಗ ಈ ಸೌಂಡ್​ಬಾಕ್ಸ್ ಪೇಟಿಎಂನ ಒಂದು ಪ್ರಮುಖ ಆದಾಯ ಮೂಲವೂ ಹೌದು. ಪೇಟಿಎಂನ ನಿವ್ವಳ ಪೇಮೆಂಟ್ ಆದಾಯದಲ್ಲಿ ಶೇ. 38ರಷ್ಟು ಪಾಲು ಸೌಂಡ್​ಬಾಕ್ಸ್​ನಿಂದಲೇ ಬರುತ್ತದೆ.

ಇದನ್ನೂ ಓದಿIPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್

ಬಹಳ ಅಂಗಡಿಗಳಲ್ಲಿ ಮಾಲೀಕರ ಮೊಬೈಲ್ ನಂಬರ್​ಗೆ ಪೇಮೆಂಟ್ ಅಲರ್ಟ್ ಬರುತ್ತದೆ. ಆದರೆ, ಮಾಲೀಕರು ಅಂಗಡಿಯಲ್ಲಿ ಇಲ್ಲದಾಗ ಪೇಮೆಂಟ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಅಂಗಡಿಯಲ್ಲಿರುವ ಬೇರೆ ಕೆಲಸಗಾರರಿಗೆ ಸಾಧ್ಯವಾಗುವುದಿಲ್ಲ. ಪದೇ ಪದೇ ಮಾಲೀಕರಿಗೆ ಫೋನ್ ಮಾಡಿ ಖಚಿಪಡಿಸಿಕೊಳ್ಳುವುದು ಇಬ್ಬರಿಗೂ ಕಿರಿಕಿರಿಯೇ. ಸೌಂಡ್​ಬಾಕ್ಸ್ ಅಥವಾ ಸ್ಮಾರ್ಟ್​ಸ್ಪೀಕರ್​ಗಳು ಈ ರಗಳೆ ನಿವಾರಿಸುತ್ತವೆ. ಅಂಗಡಿಯ ಸ್ಕ್ಯಾನರ್ ಮೂಲಕ ಯಾರಾದರೂ ಪೇಮೆಂಟ್ ಮಾಡಿದಾಗ ಈ ಬಾಕ್ಸ್​ನಲ್ಲೇ ಅಲರ್ಟ್ ಮೆಸೇಜ್ ಹೊರಡುತ್ತದೆ. ಅಂದಹಾಗೆ ಈ ಬಾಕ್ಸ್ ಅನ್ನು ಅಂಗಡಿಯವರು ಹಣ ಕೊಟ್ಟು ಖರೀದಿಸಬೇಕು. ಇದರ ಸೇವೆಗೆ ನಿರ್ದಿಷ್ಟ ಮಾಸಿಕ ಶುಲ್ಕವೂ ಇರುತ್ತದೆ. ಫೋನ್ ಪೇ ಈಗ ಬಹಳ ಅಗ್ರೆಸಿವ್ ಆಗಿ ಸ್ಮಾರ್ಟ್ ಸ್ಪೀಕರ್​ಗಳನ್ನು ವರ್ತಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

phone pe

ಫೋನ್​ಪೇ

ಫೋನ್ ಪೇ ಬಳಿ ಇದೆ ಪಿನ್​ಕೋಡ್ ಪ್ರಯೋಗ

ಇನ್ನು, ಫೋನ್ ಪೇ ಇತ್ತೀಚೆಗಷ್ಟೇ ಪಿನ್​ಕೋಡ್ (Pincode App) ಎನ್ನುವ ಹೊಸ ಶಾಪಿಂಗ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸದ್ಯ ಇದರ ಸೇವೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಯಶಸ್ವಿಯಾದರೆ ದೇಶಾದ್ಯಂತ ಸೇವೆ ವಿಸ್ತರಿಸುವ ಆಲೋಚನೆ ಫೋನ್ ಪೇನದ್ದು.

ಇದನ್ನೂ ಓದಿNikhil Kamath: ಅಮೆರಿಕ ಬಿಟ್ಟು ಬನ್ನಿ, ಭಾರತದಲ್ಲಿ ಏನಾದರೂ ಮಾಡಿ: ಎನ್​ಆರ್​ಐಗಳಿಗೆ ನಿಖಿಲ್ ಕಾಮತ್ ಕರೆ

ಪಿನ್​ಕೋಡ್ ಆ್ಯಪ್ ಅನ್ನು ಡಿಜಿಟಲ್ ಕಾಮರ್ಸ್ ಓಪನ್ ನೆಟ್ವರ್ಕ್​ನ ಪ್ಲಾಟ್​ಫಾರ್ಮ್ (ONDC- Open Network for Digital Commerce) ಬಳಸಿ ಅಭಿವೃದ್ಧಿಪಡಿಸಲಾಗಿದೆ. ಜನಸಾಮಾನ್ಯರು ಹಾಗೂ ವಾಸಸ್ಥಳ ಸಮೀಪದ ಅಂಗಡಿಗಳ ಮಧ್ಯೆ ಈ ಆ್ಯಪ್ ಒಂದು ರೀತಿಯಲ್ಲಿ ಡಿಜಿಟಲ್ ಕೊಂಡಿಯಾಗಿದೆ. ದೊಡ್ಡ ದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಬರೀ ದೊಡ್ಡ ಅಂಗಡಿ, ಮಳಿಗೆಯವರೇ ಜೋಡಿತವಾಗಿರುತ್ತಾರೆ. ಸಣ್ಣ ಪುಟ್ಟ ಕಾಕಾ ಅಂಗಡಿ, ಶೆಟ್ಟರ ಅಂಗಡಿ, ಭಟ್ಟರ ಕಾಂಡಿಮೆಂಟ್ಸ್ ಇತ್ಯಾದಿ ವರ್ತಕರು ಮತ್ತು ಮಾರಾಟಗಾರರು ಡಿಜಿಟಲ್ ವ್ಯಾಪ್ತಿಯಿಂದ ಹೊರಗುಳಿದು ಹೋಗಿದ್ದಾರೆ. ಇಂಥವರನ್ನು ಇಕಾಮರ್ಸ್ ವ್ಯಾಪ್ತಿಗೆ ತರುತ್ತದೆ ಫೋನ್​ಪೇನ ಪಿನ್​ಕೋಡ್ ಆ್ಯಪ್.

ಅಂದಹಾಗೆ, ಬೆಂಗಳೂರಿನಲ್ಲಿ ಅಪ್ಪಟ ಭಾರತೀಯರು ಹುಟ್ಟುಹಾಕಿದ್ದ ಫೋನ್​ಪೇ ಸಂಸ್ಥೆಗೆ ಇದೀಗ ಅಮೆರಿಕದ ವಾಲ್​ಮಾರ್ಟ್ ಸಂಸ್ಥೆ ಮಾಲಕತ್ವ ಹೊಂದಿದೆ. ಹೀಗಾಗಿ, ಫೋನ್​ಪೇಗೆ ಬಂಡವಾಳದ ಕೊರತೆ ಎದುರಾಗುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ