ಬ್ರೂನೇ ದೇಶದ ಸುಲ್ತಾನ ಹಸನಲ್ ಬೋಲಕಿಯಾಹ್ ಉರುಫ್ 3ನೇ ಒಮರ್ ಅಲಿ ಸೈಫುದ್ದೀನ್ (Brunei Sultan Hassanal Bolkiah) ಸದ್ಯ ವಿಶ್ವದಲ್ಲಿರುವ ಕೆಲವೇ ರಾಜರಲ್ಲಿ ಒಬ್ಬರು. ವಿಶ್ವದ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾಗಿರುವ ಸುಲ್ತಾನ್ ಹಸನಲ್ ಹುಟ್ಟಿದ್ದು 1946ರ ಜುಲೈ 15ರಂದು. ಮಲೇಷ್ಯಾ ಗಡಿಯಲ್ಲಿರುವ ಬ್ರೂನೇ ದೇಶದ ಸುಲ್ತಾನರಾಗಿರುವ ಇವರು ತಮ್ಮ ಜೀವನಶೈಲಿ ಮೂಲಕ ವಿಶ್ವಮಂದಿಯ ಗಮನ ಸೆಳೆಯುತ್ತಾರೆ. ಬ್ರೂನೇ ದೇಶದಲ್ಲಿ ಸಮೃದ್ಧವಾಗಿರುವ ತೈಲ ನಿಕ್ಷೇಪಗಳು ಹಾಗೂ ನೈಸರ್ಗಿಕ ಅನಿಲಗಳ ಆದಾಯ ಹೊಂದಿರುವ ಸುಲ್ತಾನರು ವಿಶ್ವದ ಶ್ರೀಮಂತರ ಪೈಕಿ ಒಬ್ಬರು. ಆದರೆ, ಅಂಬಾನಿ, ಅದಾನಿಯಷ್ಟು ಶ್ರೀಮಂತರಲ್ಲದಿದ್ದರೂ ವೈಭೋಗದಲ್ಲಿ ಇವರೆಲ್ಲರನ್ನೂ ಮೀರಿಸುವಂತಹವರು.
ಹಸನಲ್ ಬೋಲ್ಕಿಯಾಹ್ ವೈಭೋಗದ ಜೀವನಕ್ಕೆ ಹೆಸರಾದವರು. ಇವರದ್ದು ವಿಶ್ವದ ಅತಿದೊಡ್ಡ ಅರಮನೆ. 20 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಇವರ ಇಸ್ತಾನ ನೂರುಲ್ ಇಮಾಮ್ ಪ್ಯಾಲೇಸ್ ಇದೆ. ವಿಶ್ವದ ಅತಿದೊಡ್ಡ ಅರಮನೆ ಎಂದು ಗಿನ್ನೆಸ್ ಪುಸ್ತಕದಲ್ಲಿ ನಮೂದಾಗಿದೆ. ಈ ಅರಮನೆಯ ಮೌಲ್ಯ 2,550 ಕೋಟಿ ರೂ ಎನ್ನಲಾಗಿದೆ. ಈ ಅರಮನೆಯ ಗೋಪುರಕ್ಕೆ ಚಿನ್ನದ ಕೋಟಿಂಗ್ ಮಾಡಲಾಗಿದೆ. 1,700ಕ್ಕೂ ಹೆಚ್ಚು ರೂಮುಗಳು, 257 ಸ್ನಾನದ ಕೊಠಡಿ, 5 ಈಜು ಕೊಳಗಳು ಈ ಅರಮನೆಯಲ್ಲಿವೆ. ಏರ್ ಕಂಡೀಷನ್ ಇರುವ 200 ಕುದುರೆ ಲಾಯಗಳು, 110 ಗ್ಯಾರೇಜ್ಗಳು ಈ ಅರಮನೆಯಲ್ಲಿವೆ.
ಹಸನಲ್ ಬೋಲ್ಲಿಯಾಹ್ ಅವರ ಬಳಿ ಬರೋಬ್ಬರಿ 7,000 ವಾಹನಗಳಿವೆ. ಅದರಲ್ಲಿ ಬೋಯಿಂಗ್ 747 ವಿಮಾನವೂ ಒಂದು. ಮೂರು ಸಾವಿರ ಕೋಟಿ ರೂ ಖರ್ಚು ಮಾಡಿ ಈ ವಿಮಾನದಲ್ಲಿ ವಿಶೇಷ ಸೌಲಭ್ಯ ಹಾಕಿಸಿಕೊಂಡಿದ್ದಾರೆ. ಈ ಐಷಾರಾಮಿ ವಿಮಾನದಲ್ಲಿರುವ ವಾಷ್ ಬೇಸಿನ್ ಮೌಲ್ಯವೇ ಸಾವಿರ ಕೋಟಿ ರೂ ಎನ್ನಲಾಗಿದೆ. ಸುಲ್ತಾನರ ಬಳಿ ಇರುವ 7,000 ವಾಹನಗಳಲ್ಲಿ 500 ರೋಲ್ಸ್ ರಾಯ್ಸ್, 300 ಫೆರಾರಿ ಕಾರುಗಳಿವೆ.
ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
ಇನ್ನು, ಈ ಮಹಾ ಸುಲ್ತಾನರ ಬಳಿ ಒಂದು ಖಾಸಗಿ ಝೂ ಕೂಡ ಇದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ 30 ಬಂಗಾಳಿ ಹುಲಿಗಳಿವೆ. ಇನ್ನೊಂದು ಕುತೂಹಲದ ಸಂಗತಿ ಎಂದರೆ ಸುಲ್ತಾನ್ ಹಸನಲ್ ಬೋಲ್ಕಿಯಾಹ್ ಅವರು ತಮ್ಮ ಹೇರ್ಕಟ್ಗಾಗಿಯೇ 20,000 ಡಾಲರ್ ಖರ್ಚು ಮಾಡುತ್ತಾರಂತೆ.
ಹಸನಲ್ ಬೋಲ್ಕಿಯಾಹ್ ಅವರು ಬ್ರೂನೆ ದೇಶದ 29ನೇ ಸುಲ್ತಾನರಾಗಿದ್ದಾರೆ. ಬ್ರಿಟಿಷರ ವಶದಲ್ಲಿದ್ದ ಈ ಬ್ರೂನೇ ದೇಶ 1984ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆಗಿನಿಂದಲೂ ಇವರು ತಮ್ಮ ದೇಶದ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 1962ರಲ್ಲಿ ಬ್ರೂನೇಯಲ್ಲಿ ಬಂಡಾಯ ನಡೆದಿತ್ತು. ಇಂಡೋನೇಷ್ಯಾ ಬೆಂಬಲಿತ ಬಂಡುಕೋರರು ದಂಗೆ ಎದ್ದಿದ್ದರು. ಈ ವೇಳೆ ಬ್ರಿಟಿಷರ ಗೂರ್ಖಾ ರೈಫಲ್ಸ್ ಪಡೆ ಸುಲ್ತಾನ್ ಹಸನಲ್ ಬೋಲ್ಕಿಯಾಹ್ ಹಾಗೂ ಅವರ ತಂದೆ ಒಮರ್ ಅಲಿ ಸೈಫುದ್ದೀನ್ ಅವರನ್ನು ರಕ್ಷಿಸಿತ್ತು. ಲೆಫ್ಟಿನೆಂಟ್ ಕರ್ನಲ್ ಡಿಗ್ಬಿ ವಿಲೋಬಿ ನೇತೃತ್ವದಲ್ಲಿ ಗೂರ್ಖಾ ಪಡೆ ಕಡಿಮೆ ಸಂಖ್ಯೆಯಲ್ಲಿದ್ದರೂ ಬಂಡುಕೋರರಿಂದ ಸುಲ್ತಾನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು.
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್ನ ಯಶೋಗಾಥೆ
ಗೂರ್ಖಾ ಪಡೆಗಳನ್ನು ಭಾರತೀಯ ಸೇನೆಯಲ್ಲಿ ನೀವು ನೋಡಿರಬಹುದು. ಆದರೆ ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ನಡೆಸುವಾಗ ಗೂರ್ಖಾ ಪಡೆಗಳನ್ನು ನಿಯೋಜಿಸಲಾಗಿತ್ತು. ಬ್ರಿಟಿಷರ ನಂಬಿಕಸ್ಥ ತುಕಡಿಗಳಲ್ಲಿ ಗೂರ್ಖಾದ ವಿವಿಧ ರೆಜಿಮೆಂಟ್ಗಳಿದ್ದವು. 1857ರಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆಗಳಾದಾಗ ಅವರಿಗೆ ಲಾಯಲ್ ಆಗಿ ಇದ್ದದ್ದು ಗೂರ್ಖಾ ಪಡೆಗಳೇ. ಹೀಗಾಗಿ, ಬ್ರಿಟಿಷರಿಗೆ ಈ ಪಡೆಗಳೆಂದರೆ ಬಹಳ ವಿಶ್ವಾಸ.
ಭಾರತ ಸ್ವಾತಂತ್ರ್ಯ ಪಡೆದಾಗ ಗೂರ್ಖಾ ಪಡೆಗಳು ಭಾರತ ಹಾಗೂ ಬ್ರಿಟನ್ ಮಧ್ಯೆ ಹಂಚಿಹೋದವು. ಬ್ರೂನೇ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಬ್ರಿಟಿಷರು ಗೂರ್ಖಾ ಪಡೆಗಳನ್ನು ಬಳಸಿಕೊಳ್ಳುತ್ತಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Tue, 22 August 23