ಇನ್ಫೋಸಿಸ್ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್ನ ಯಶೋಗಾಥೆ
Dadasaheb Bhagat's Inspiring Story: ಇನ್ಫೋಸಿಸ್ ಸಂಸ್ಥೆಯ ಗೆಸ್ಟ್ ಹೌಸ್ನಲ್ಲಿ ರೂಮ್ ಬಾಯ್ ಆಗಿದ್ದ ಭಗತ್ ದಾದಾಸಾಹೇಬ್ ಇವತ್ತು ನೈನ್ತ್ ಮೋಶನ್ ಮತ್ತು ಡೂಗ್ರಾಫಿಕ್ಸ್ ಎಂಬ ಎರಡು ಕಂಪನಿಗಳ ಒಡೆಯರಾಗಿದ್ದಾರೆ. ವಿಶ್ವದ ಅತಿದೊಡ್ಡ ಡಿಸೈನ್ ಪೋರ್ಟಲ್ ರೂಪಿಸುವ ಗುರಿ ಹೊಂದಿರುವ ಭಗತ್ ಅವರ ಜೀವನಗಾಥೆ ನಿಜಕ್ಕೂ ಸ್ಫೂರ್ತಿಯುತವಾಗಿದೆ.
ಸಾಧನೆಯಲ್ಲಿ ಪ್ರತಿಭೆ, ಅದೃಷ್ಟಕ್ಕಿಂತ ಹೆಚ್ಚಾಗಿ ಮನೋಸ್ಥೈರ್ಯ ಬಹಳ ಮುಖ್ಯ. ಎದುರಾಗುವ ಅನಿರೀಕ್ಷಿತ ಸವಾಲುಗಳು, ಘಟನೆಗಳನ್ನು ಎದುರಿಸಲು ಈ ಗುಣ ಮುಖ್ಯ. ನೈನ್ತ್ಮೋಶನ್ (NinthMotion) ಮತ್ತು ಡೂಗ್ರಾಫಿಕ್ಸ್ (DooGraphics) ಎಂಬೆರಡು ಕಂಪನಿಗಳ ಮಾಲೀಕನ ಕಥೆ ನಿಜಕ್ಕೂ ರೋಲ್ ಮಾಡೆಲ್ ಆಗಿದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ವೃತ್ತಿ ಬದುಕು ಆರಂಭಿಸಿದ ದಾದಾಸಾಹೇಬ್ ಭಗತ್ (Dadasaheb Bhagat) ಇವತ್ತು ಬಹಳ ಎತ್ತರಕ್ಕೆ ಬೆಳೆದಿರುವ ಕಥೆ ನಿಜಕ್ಕೂ ಸ್ಫೂರ್ತಿ ಕೊಡುವಂಥದ್ದು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾದ 29 ವರ್ಷದ ದಾದಾಸಾಹೇಬ್ ಭಗತ್ ಐಟಿಐ ಡಿಪ್ಲೊಮಾ ಓದಿದ್ದಾರೆ. ಯಾವುದಾದರೂ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಬೇಕಾದವರು ಪುಣೆಯಲ್ಲಿ ಇನ್ಫೋಸಿಸ್ನ ಗೆಸ್ಟ್ ಹೌಸ್ನಲ್ಲಿ ರೂಮ್ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಗೆಸ್ಟ್ ಹೌಸ್ಗೆ ಬಂದ ಅತಿಥಿಗಳಿಗೆ ಚಹಾ, ನೀರು ಇತ್ಯಾದಿ ಸೇವೆ ಒದಗಿಸುವುದು ಅವರ ಕಾಯಕವಾಗಿತ್ತು.
ರೂಮ್ ಬಾಯ್ ಆದರೂ ಹೊಸ ದಾರಿ ತುಳಿದ ಭಗತ್
ದಾದಾಸಾಹೇಬ್ ಭಗತ್ ಐಟಿಐ ಡಿಪ್ಲೊಮಾ ಮಾಡಿದ್ದರೂ ಇನ್ಫೋಸಿಸ್ನಲ್ಲಿ ರೂಮ್ ಬಾಯ್ ಆಗಿದ್ದರು. ಅಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಸಾಫ್ಟ್ವೇರ್ ಕ್ಷೇತ್ರದ ಮೌಲ್ಯದ ಬಗ್ಗೆ ತಿಳಿದುಕೊಂಡು ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ, ಕಾಲೇಜು ಮೆಟ್ಟಿಲು ಹತ್ತದ ಅವರಿಗೆ ಸಾಫ್ಟ್ವೇರ್ ಎಂಜಿನಿಯರ್ ಆಗುವುದು ಗಗನಕುಸುಮವೇ ಆಗಿತ್ತು.
ಆಗ ಅವರಿಗೆ ಅನಿಮೇಶನ್ ಮತ್ತು ಡಿಸೈನ್ ಕೋರ್ಸ್ ಕಲಿಯಲು ಕೆಲವರು ಸಲಹೆ ಕೊಟ್ಟರು. ರಾತ್ರಿ ಹೊತ್ತು ಕೆಲಸ ಮಾಡುತ್ತಲೇ ಬೆಳಗಿನ ಅವಧಿಯಲ್ಲಿ ಅನಿಮೇಶನ್ ಕೋರ್ಸ್ ಮಾಡತೊಡಗಿದರು ಭಗತ್. ಕೋರ್ಸ್ ಮುಗಿದ ಬಳಿಕ ಮುಂಬೈನಲ್ಲಿ ಅವರಿಗೆ ಕೆಲಸ ಸಿಕ್ಕಿತು. ಬಳಿಕ ಹೈದರಾಬಾದ್ನಲ್ಲಿ ಕೆಲಸ ಮಾಡಿದರು. ಇಲ್ಲಿ ಕೆಲಸ ಮಾಡುವಾಗಲೇ ಪೈಥಾನ್ ಮತ್ತು ಸಿ++ ಸಾಫ್ಟ್ವೇರ್ ಕಲಿಯಲು ಆರಂಭಿಸಿದರು.
ಆನ್ಲೈನ್ ಟೆಂಪ್ಲೇಟ್ ವಿನ್ಯಾಸ
ಹೈದರಾಬಾದ್ನಲ್ಲಿ ಕೆಲಸ ಮಾಡುವಾಗ ಭಗತ್ ಅವರಿಗೆ ವಿಶುವಲ್ ಎಫೆಕ್ಟ್ಸ್ ನಿರ್ಮಾಣದಲ್ಲಿ ಬಹಳ ಸಮಯ ಹಿಡಿಯುವುದು ಅರಿವಿಗೆ ಬಂದಿತು. ಆಗ ಅವರಿಗೆ ಮರುಬಳಕೆಯ ಟೆಂಪ್ಲೇಟ್ನ ಒಂದು ಸಂಗ್ರಹ ರಚಿಸುವ ಅವಶ್ಯಕತೆ ಕಾಣಿಸಿತು. ಅಂತೆಯೇ, ಅವರು ಆನ್ಲೈನ್ನಲ್ಲಿ ಟೆಂಪ್ಲೇಟ್ ಡಿಸೈನ್ ಮಾಡತೊಡಗಿದರು.
ಅಪಘಾತಗೊಂಡು ಹಾಸಿಗೆ ಹಿಡಿದರೂ ತಮ್ಮ ಟೆಂಪ್ಲೇಟ್ ವಿನ್ಯಾಸ ಕಾರ್ಯ ಬಿಡಲಿಲ್ಲ. 2015ರಲ್ಲಿ ಅವರು ನೈನ್ತ್ಮೋಶನ್ ಎಂಬ ಕಂಪನಿ ಸ್ಥಾಪಿಸಿದರು. ಬಿಬಿಸಿ ಸ್ಟುಡಿಯೋಸ್, 9ಎಕ್ಸ್ಎಂ ಮ್ಯೂಸಿಕ್ ಚಾನಲ್ ಸೇರಿದಂತೆ ಜಾಗತಿಕವಾಗಿ 6,000 ಕ್ಲಯಂಟ್ಗಳನ್ನು ಭಗತ್ ಗಿಟ್ಟಿಸಿದರು.
ಡೂಗ್ರಾಫಿಕ್ಸ್ ಕಂಪನಿ
ವಿಶುವಲ್ ಟೆಂಪ್ಲೇಟ್ ಲೈಬ್ರರಿ ಬಳಿಕ ಭಗತ್ ದಾದಾಸಾಹೇಬ್ ಅವರು ಆನ್ಲೈನ್ ಗ್ರಾಫಿಕ್ಸ್ ಡಿಸೈನ್ಗೂ ಕ್ಯಾನ್ವಾ ರೀತಿಯಲ್ಲಿ ಸಿದ್ಧ ಟೆಂಪ್ಲೇಟ್ಗಳನ್ನು ನಿರ್ಮಿಸುವ ಆಲೋಚನೆ ಮಾಡಿದರು. ಅಂತೆಯೇ ಪುಣೆಯಲ್ಲಿ ಡೂ ಗ್ರಾಫಿಕ್ಸ್ ಕಂಪನಿ ಸ್ಥಾಪನೆ ಆಯಿತು.
ಕೋವಿಡ್-19ರ ಸಂದರ್ಭದಲ್ಲಿ ಲಾಕ್ ಡೌನ್ ಇದ್ದರಿಂದ ಭಗತ್ ಅವರು ಪುಣೆ ಬಿಟ್ಟು ತಮ್ಮ ಹಳ್ಳಿಗೆ ಹೋಗಬೇಕಾಯಿತು. ಊರಿನಲ್ಲಿ ನೆಟ್ವರ್ಕ್ ಸರಿಯಾಗಿರಲಿಲ್ಲ. ಊರಿನಾಚೆ ಗುಡ್ಡದ ಮೇಲೆ ದನದ ಕೊಟ್ಟಿಗೆಯಲ್ಲಿ ಭಗತ್ ಸಿಂಗ್ ಕೆಲಸ ಮಾಡತೊಡಗುತ್ತಾರೆ. ತಾವು ಅನಿಮೇಶನ್ ಮತ್ತು ಡಿಸೈನ್ ಹೇಳಿಕೊಟ್ಟ ಸ್ನೇಹಿತರನ್ನು ಸೇರಿಸಿ ಆ ಶೆಡ್ನಲ್ಲಿ ಕೆಲಸ ಮಾಡುತ್ತಾರೆ. ಗ್ರಾಮದ ಹಲವು ಮಕ್ಕಳಿಗೂ ಇವರು ತರಬೇತಿ ಕೊಡುತ್ತಾರೆ. ಅಂತೆಯೇ ಇವರ ಕಂಪನಿ ಬೆಳೆಯುತ್ತಾ ಹೋಗುತ್ತದೆ.
ಇನ್ನು, ಡೂಗ್ರಾಫಿಕ್ಸ್ ಕಂಪನಿಯನ್ನು ವಿಶ್ವದ ಅತಿದೊಡ್ಡ ಡಿಸೈನ್ ಪೋರ್ಟಲ್ ಆಗಿ ರೂಪಿಸುವ ಹೆಗ್ಗುರಿಯಲ್ಲಿ ಭಗತ್ ದಾದಾಸಾಹೇಬ್ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ