CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ
Canada Rules Out Free Trade Agreement With China After Trump's 100% Tariff Threat: ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಕೆನಡಾ ಆತ್ಮಹತ್ಯೆ ಮಾಡಿಕೊಂಡಂತೆ ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ. ಈ ವಿಚಾರದಲ್ಲಿ ಕೆನಡಾ ಪ್ರಧಾನಿ ಸ್ಪಷ್ಟನೆ ನೀಡಿದ್ದು, ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ. CUSMA ನಿಯಮಗಳಿಗೆ ಬದ್ಧರಾಗಿದ್ದು, ಪೂರ್ವಸೂಚನೆ ಇಲ್ಲದೇ ನಾನ್ ಮಾರ್ಕೆಟ್ ಎಕನಾಮಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳೋದಿಲ್ಲ ಎಂದಿದ್ದಾರೆ.

ನವದೆಹಲಿ, ಜನವರಿ 26: ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಕೆನಡಾ ಹೇಳಿದೆ. ಚೀನಾದೊಂದಿಗೆ ಕೆನಡಾ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಲ್ಲಿ, ಆ ದೇಶದ ಮೇಲೆ ಶೇ. 100 ಟ್ಯಾರಿಫ್ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆನಡಾದಿಂದ ಈ ಸ್ಪಷ್ಟನೆ ಬಂದಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ (Mark Carney) ಅವರು ಈ ಸ್ಪಷ್ಟನೆ ನೀಡಿದ್ದಾರೆ.
‘ಮುಂಚಿತವಾಗಿ ಸೂಚನೆ ಇಲ್ಲದೆ, ಮುಕ್ತ ಮಾರುಕಟ್ಟೆಯಲ್ಲದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎನ್ನುವ CUSMA (Canada US Mexico Agreement) ನಿಯಮಗಳಿಗೆ ಬದ್ಧರಾಗಿದ್ದೇವೆ. ಚೀನಾ ಆಗಲೀ ಬೇರೆ ಇತರ ನಾನ್ ಮಾರ್ಕೆಟ್ ಎಕನಾಮಿಯ (Non-market economy) ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವ ಉದ್ದೇಶವೂ ಇಲ್ಲ’ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೀ ಹೇಳಿದ್ದಾರೆ.
ಇದನ್ನೂ ಓದಿ: ಯೂರೋಪ್ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?
ಏನಿದು CUSMA ಒಪ್ಪಂದ?
ಇದು ಕೆನಡಾ, ಅಮೆರಿಕ ಮತ್ತು ಮೆಕ್ಸಿಕೋ ದೇಶಗಳ ಮಧ್ಯೆ ಇರುವ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಮಾರುಕಟ್ಟೆ ನಿರ್ದೇಶಿತ ಆರ್ಥಿಕತೆ ಅಲ್ಲದ ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮುನ್ನ ತಮಗೆ ಮುಂಚಿತವಾಗಿ ತಿಳಿಸಬೇಕು ಈ ಮೂರೂ ದೇಶಗಳು ಪರಸ್ಪರ ನಿರ್ಬಂಧಗಳನ್ನು ಹಾಕಿಕೊಂಡಿವೆ. ಅಂದರೆ, ಚೀನಾ, ಉತ್ತರ ಕೊರಿಯಾ, ಇರಾನ್ ಇತ್ಯಾದಿ ಮುಕ್ತವಲ್ಲದ ಮಾರುಕಟ್ಟೆ ಇರುವ ದೇಶಗಳೊಂದಿಗೆ ಟ್ರೇಡ್ ಡೀಲ್ ಮಾಡಿಕೊಳ್ಳಲು ನಿರ್ಬಂಧಗಳಿವೆ.
‘ಅಮೆರಿಕ ಮತ್ತು ಮೆಕ್ಸಿಕೋ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿರುವ ನಿಯಮಗಳಿಗೆ ಕೆನಡಾ ಬದ್ಧವಾಗಿಯೇ ಇದೆ. ಕಳೆದ ಒಂದೆರಡು ವರ್ಷದಲ್ಲಿ ಚೀನಾದೊಂದಿಗೆ ಉದ್ಭವಿಸಿದ ಕೆಲ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇವಷ್ಟೇ’ ಎಂದು ಕೆನಡಾ ಪ್ರಧಾನಿಗಳು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್ನಲ್ಲಿ ಸುಳಿವು ಕೊಟ್ಟ ಸಚಿವರು
ಕೆನಡಾವನ್ನು ಚೀನಾ ನುಂಗಿ ನೀರು ಕುಡಿಯುತ್ತೆ ಎಂದ ಟ್ರಂಪ್
ಚೀನಾದೊಂದಿಗೆ ಕೆನಡಾ ನಡೆಸುತ್ತಿದೆ ಎನ್ನಲಾದ ಮಾತುಕತೆಗಳ ವಿಚಾರದಲ್ಲಿ ಅಮೆರಿಕ ಕೆಂಗಣ್ಣು ಬೀರಿದೆ. ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡರೆ ಕೆನಡಾ ಕಥೆ ಮುಗಿಯುತ್ತದೆ. ಅದು ವ್ಯವಸ್ಥಿತವಾಗಿ ಸ್ವನಾಶ ಮಾಡಿಕೊಳ್ಳುತ್ತಿದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ಗಲ್ಲಿ ತಿಳಿಸಿದ್ದಾರೆ.
‘ಕೆನಡಾವನ್ನು ಚೀನಾ ಜೀವಂತವಾಗಿ ತಿಂದು ಪೂರ್ಣ ನುಂಗಿ ಹಾಕುತ್ತದೆ. ಅದರ ವ್ಯವಹಾರಗಳು, ಸಾಮಾಜಿಕ ವ್ಯವಸ್ಥೆ, ಜನಜೀವನ ಎಲ್ಲವನ್ನೂ ನಾಶ ಮಾಡುತ್ತದೆ. ಒಂದು ಕಾಲದಲ್ಲಿ ಶ್ರೇಷ್ಠ ದೇಶವೆನಿಸಿದ್ದ ಕೆನಡಾವನ್ನು ಚೀನಾ ಪೂರ್ಣವಾಗಿ ಸ್ವಾಹ ಮಾಡುತ್ತಿರುವುದನ್ನು ನೋಡಲು ಕಷ್ಟವೆನಿಸುತ್ತಿದೆ’ ಎಂದು ಅಮೆರಿಕ ಅಧ್ಯಕ್ಷರು ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
