AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ

JM Financial's expectations from Union Budget 2026-27: ಈ ಬಾರಿಯ ಬಜೆಟ್​ನಲ್ಲಿ ಸರ್ಕಾರವು ಬಂಡವಾಳ ವೆಚ್ಚ ಮತ್ತು ಅನುಭೋಗದಲ್ಲಿ ಸಮತೋಲನ ತರಲಿ ಎಂದು ಬ್ರೋಕರೇಜ್ ಸಂಸ್ಥೆಯಾದ ಜೆಎಂ ಫೈನಾನ್ಷಿಯಲ್ ನಿರೀಕ್ಷಿಸುತ್ತಿದೆ. ಬಂಡವಾಳ ವೆಚ್ಚವು ಕ್ರಮೇಣವಾಗಿ ಜಿಡಿಪಿಯ ಶೇ. 3ರಷ್ಟು ಪ್ರಮಾಣಕ್ಕೆ ಏರಿಕೆ ಆಗಲಿ ಎಂದು ಅದು ಹೇಳಿದೆ. ಹಾಗೆಯೇ, ಬಂಡವಾಳ ವೆಚ್ಚದಲ್ಲಿ ಏರಿಕೆ ಮಾಡುವುದರ ಜೊತೆಗೆ ವಿತ್ತೀಯ ಶಿಸ್ತಿನ ಕಡೆಗೂ ಸರ್ಕಾರ ಗಮನ ಕೊಡಬೇಕು ಎಂಬುದು ಅದರ ಸಲಹೆ.

ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2026 | 12:50 PM

Share

ನವದೆಹಲಿ, ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್​ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ.

ಕಳೆದ ಬಜೆಟ್​ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ ಪ್ರಾಶಸ್ತ್ಯ ಕೊಟ್ಟಂತಿತ್ತು. ಆದಾಯ ತೆರಿಗೆ ಮತ್ತು ಜಿಎಸ್​ಟಿ ದರಗಳನ್ನು ಇಳಿಸುವ ಮೂಲಕ ಅನುಭೋಗ ಹೆಚ್ಚಿಸಲು ಕ್ರಮ ತೆಗೆದುಕೊಂಡಿತ್ತು. ಅದರ ಫಲವೆಂಬಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನುಭೋಗ ಹೆಚ್ಚಿದೆ. ಬ್ರೋಕರೇಜ್ ಸಂಸ್ಥೆಯಾದ ಜೆಎಂ ಫೈನಾನ್ಷಿಯಲ್ ಈ ಅಂಶವನ್ನು ಗಮನಿಸಿದೆ. ಹಾಗೆಯೇ, ನಗರ ಭಾಗಗಳಲ್ಲಿ ಅನುಭೋಗ ದುರ್ಬಲವಾಗಿರುವ ಸಂಗತಿಯನ್ನೂ ಅದು ಎತ್ತಿ ತೋರಿಸಿದೆ.

ಇದನ್ನೂ ಓದಿ: ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ!

ನಗರ ಭಾಗದಲ್ಲಿ ಅನುಭೋಗ ಹೆಚ್ಚುವುದು ಬಹಳ ಮುಖ್ಯ. ಇಲ್ಲಿ ಅನುಭೋಗ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿರುವುದರಿಂದ ಉತ್ಪಾದಕರು ತಮ್ಮ ಘಟಕ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯೂ ಏರಿಳಿತ ಆಗುತ್ತದೆ. ಆರ್​ಬಿಐ ದತ್ತಾಂಶದ ಪ್ರಕಾರ ಭಾರತದ ಉತ್ಪಾದಕ ಸಂಸ್ಥೆಗಳಲ್ಲಿ ಈಗಿರುವ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 75ಕ್ಕಿಂತ ಕಡಿಮೆ ಬಳಕೆ ಆಗುತ್ತಿದೆ.

ಆರ್​ಬಿಐನ ಈ ಡಾಟಾವನ್ನು ಉಲ್ಲೇಖಿಸಿರುವ ಜೆಎಂ ಫೈನಾನ್ಷಿಯಲ್, ಈ ಬಾರಿಯ ಬಜೆಟ್​ನಲ್ಲಿ ಸರ್ಕಾರವು ಅನುಭೋಗ ಹಾಗೂ ಬಂಡವಾಳ ವೆಚ್ಚದಲ್ಲಿ ಸಮತೋಲನ ತರಲು ಯತ್ನಿಸಬಹುದು ಎಂದು ಅಪೇಕ್ಷಿಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ರೆವಿನ್ಯೂ ಎಕ್ಸ್​ಪೆಂಡಿಚರ್ ಅಥವಾ ಆದಾಯ ವೆಚ್ಚದಂದ ಅನುಭೋಗವು ಅಲ್ಪಾವಧಿಗೆ ಏರಿಕೆ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಅಥವಾ ಬಂಡವಾಳ ವೆಚ್ಚದಿಂದ ಜಿಡಿಪಿಗೆ ಮೂರು ಪಟ್ಟು ಪುಷ್ಟಿ ಕೊಡುತ್ತದೆ. ಸರ್ಕಾರವು ಕ್ರಮೇಣವಾಗಿ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 3ರಷ್ಟು ಮಟ್ಟಕ್ಕೆ ಏರಿಸಬಹುದು ಎಂದು ಜೆಎಂ ಫೈನಾನ್ಷಿಯಲ್ ನಿರೀಕ್ಷಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ