ನವದೆಹಲಿ: ಪ್ರತಿ ಚೀಲಕ್ಕೆ 10 ರೂ.ನಿಂದ 30 ರೂ. ವರೆಗೆ ದರ ಹೆಚ್ಚಿಸಲು ಸಿಮೆಂಟ್ ಉತ್ಪಾದನಾ ಕಂಪನಿಗಳು (Cement companies) ಚಿಂತನೆ ನಡೆಸಿವೆ ಎಂದು ಎಮ್ಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವೀಸಸ್ (Emkay Global) ವಲಯವಾರು ವರದಿ ತಿಳಿಸಿದೆ. ಅಕ್ಟೋಬರ್ನಲ್ಲಿ ಭಾರತದಲ್ಲಿ ಪ್ರತಿ ಚೀಲ ಸಿಮೆಂಟ್ ಬೆಲೆಯನ್ನು 3-4 ರೂ. ಹೆಚ್ಚಿಸಲಾಗಿತ್ತು. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ತಿಂಗಳಿನಿಂದ ತಿಂಗಳಿಗೆ ಸಿಮೆಂಟ್ ಬೆಲೆಯಲ್ಲಿ ಶೇಕಡಾ 2ರಿಂದ 3ರಷ್ಟು ಹೆಚ್ಚಳವಾಗಿದೆ. ಪಶ್ಚಿಮ ಭಾರತದಲ್ಲಿ ಶೇಕಡಾ 1ರಷ್ಟು ಹೆಚ್ಚಳವಾಗಿದೆ. ಕೇಂದ್ರ ಮತ್ತು ಉತ್ತರ ಭಾರತದಲ್ಲಿ 1ರಿಂದ 2ರಷ್ಟು ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
‘ಸಿಮೆಂಟ್ ಕಂಪನಿಗಳು ವಿವಿಧ ಪ್ರದೇಶಗಳಲ್ಲಿ ನವೆಂಬರ್ 22ರಿಂದ ಪ್ರತಿ ಚೀಲ ಸಿಮೆಂಟ್ಗೆ 10 ರೂ.ನಿಂದ 30 ರೂ.ವರೆಗೆ ದರ ಹೆಚ್ಚಳಕ್ಕೆ ಚಿಂತನೆ ನಡೆಸಿವೆ. ಮುಂದಿನ ಕೆಲವೇ ದಿನಗಳಲ್ಲಿ ದರ ಹೆಚ್ಚಳದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿವೆ’ ಎಂದು ಎಮ್ಕೆ ಗ್ಲೋಬಲ್ ತಿಳಿಸಿದೆ.
ಮಂದಗತಿಯ ನಿರ್ಮಾಣ ಚಟುವಟಿಕೆ; ಬೇಡಿಕೆ ಕುಸಿತ
ಮುಂಗಾರು ಮಳೆ ನಿರ್ಗಮನ ವಿಳಂಬವಾಗಿರುವುದು, ಕಾರ್ಮಿಕರ ಕೊರತೆ, ಹಬ್ಬದ ರಜೆಗಳು ನಿರ್ಮಾಣ ಚಟುವಟಿಕೆ ಮೇಲೆ ಪರಿಣಾಮ ಬೀರಿವೆ. ಇದರಿಂದಾಗಿ ಅಕ್ಟೋಬರ್ನಲ್ಲಿ ಸಿಮೆಂಟ್ ಬೇಡಿಕೆ ಕಡಿಮೆಯಾಗಿತ್ತು. ಮುಂಬರುವ ವಾರಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಹಬ್ಬದ ಅವಧಿಗಳು ಮುಗಿದಿರುವುದರಿಂದ ನಿರ್ಮಾಣ ಚಟುವಟಿಕೆಗಳಿಗೆ ವೇಗ ದೊರೆಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಉದ್ದಿಮೆಗಳ ವೆಚ್ಚದಲ್ಲಿ ಇಳಿಕೆ ನಿರೀಕ್ಷೆ
ಉದ್ದಿಮೆದಾರರಿಗೆ ಮುಂಬರುವ ತ್ರೈಮಾಸಿಕಗಳಲ್ಲಿ ವೆಚ್ಚದ ಒತ್ತಡವು ಕಡಿಮೆಯಾಗುವ ನಿರೀಕ್ಷೆಯಿದೆ. ಎರಡನೇ ತ್ರೈಮಾಸಿಕದಲ್ಲಿ ವೆಚ್ಚವು ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಉದ್ದಿಮೆಗಳ ಲಾಭಾಂಶದ ಮೇಲೆ ಪರಿಣಾಮ ಬೀರಿತ್ತು.
ಈ ಮಧ್ಯೆ, ಪೆಟ್ಕೋಕ್ (Petroleum coke / ತೈಲ ಸಂಸ್ಕರಣೆ ವೇಳೆ ಕೊನೆಯಲ್ಲಿ ದೊರೆಯುವ ಇಂಗಾಲದ ಅಂಶ ಹೊಂದಿರುವ ಘನ ವಸ್ತು) ದರದಲ್ಲಿ ಶೇಕಡಾ 30ರಷ್ಟು ಇಳಿಕೆಯಾಗಿದ್ದು, ಪ್ರತಿ ಟನ್ಗೆ 195 ಡಾಲರ್ ಆಗಿದೆ. ಇಂಧನ ದರದಲ್ಲಿ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಇದ್ದು ಕಂಪನಿಗಳ ಉಳಿತಾಯದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ