Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

|

Updated on: Jun 21, 2024 | 12:49 PM

World Gold Council report: ವಿಶ್ವಾದ್ಯಂತ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರ್​ಬಿಐ ಸೇರಿದಂತೆ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿ ಹೆಚ್ಚಿಸಿವೆ. ಇದು ಬೆಲೆ ಏರಿಕೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು. ಮುಂದಿನ ಒಂದು ವರ್ಷದಲ್ಲಿ ಇದೇ ರೀತಿ ಚಿನ್ನದ ಖರೀದಿ ಮಾಡುವುದಾಗಿ ಹೆಚ್ಚಿನ ಸೆಂಟ್ರಲ್ ಬ್ಯಾಂಕುಗಳು ಹೇಳಿವೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿಯಲ್ಲಿ ಈ ಅಂಶಗಳಿವೆ.

Gold Rates: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ
ಆಭರಣ ಮಳಿಗೆ
Follow us on

ನವದೆಹಲಿ, ಜೂನ್ 21: ಕಳೆದ ಎರಡು ವರ್ಷದಿಂದ ವಿವಿಧ ದೇಶಗಳು ಚಿನ್ನ ಖರೀದಿಯ (gold buying) ಭರಾಟೆಯಲ್ಲಿವೆ. ಆರ್​ಬಿಐ ಸೇರಿದಂತೆ ಹಲವು ದೇಶಗಳ ಸೆಂಟ್ರಲ್ ಬ್ಯಾಂಕ್​ಗಳು ಸಾಕಷ್ಟು ಚಿನ್ನವನ್ನು ಖಜಾನೆಗೆ ತುಂಬಿಸಿಕೊಳ್ಳುತ್ತಿವೆ. 2022ರಲ್ಲಿ 1,082 ಟನ್ ಚಿನ್ನವನ್ನು ಸೆಂಟ್ರಲ್ ಬ್ಯಾಂಕುಗಳು ಖರೀದಿ ಮಾಡಿದ್ದವು. 2023ರಲ್ಲಿ 1,037 ಟನ್ ಚಿನ್ನ ಖರೀದಿಯಾಗಿದೆ. ವಿಶ್ವಾದ್ಯಂತ ಉದ್ವಿಗ್ನತೆ ಮತ್ತು ಆರ್ಥಿಕ ಅಸ್ಥಿರತೆ ಪರಿಸ್ಥಿತಿಯಿಂದಾಗಿ (Economic uncertainty) ಚಿನ್ನದ ಬೇಡಿಕೆಯಲ್ಲಿ ಈ ಹೆಚ್ಚಳ ಕಂಡುಬರುತ್ತಿದೆ.

ಈ ಹಳದಿ ಲೋಹದ ಈ ಪರಿ ಖರೀದಿ ಆಗುತ್ತಿರುವುದು ಗಮನಿಸಿದರೆ ಚಿನ್ನ ಒಂದು ಉತ್ತಮ ಮೀಸಲು ಸಂಪತ್ತು ಎಂದು ಜಾಗತಿಕವಾಗಿ ಮಾನ್ಯವಾಗಿರುವುದನ್ನು ತೋರಿಸುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ, ವಿಶ್ವ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ ಮುಂದಿನ 12 ತಿಂಗಳಲ್ಲಿ ಈ ಕೇಂದ್ರೀಯ ಬ್ಯಾಂಕುಗಳು ಚಿನ್ನ ಖರೀದಿಯ ಭರಾಟೆ ಮುಂದುವರಿಸಬಹುದು ಎನ್ನಲಾಗಿದೆ. ಇದರಿಂದ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಹಮಾಲಿ ಆಡಿದ ಆ ಒಂದು ಮಾತು ಜೀವನದ ದಿಕ್ಕನ್ನೇ ಬದಲಿಸಿತು..!’- ಎನ್​ವಿಡಿಯಾ ಸಿಇಒ ಜೆನ್ಸನ್ ಬಿಚ್ಚಿಟ್ಟ ಅಚ್ಚರಿಯ ಕಥೆ

ಸೆಂಟ್ರಲ್ ಬ್ಯಾಂಕ್ ಹೆಚ್ಚು ಚಿನ್ನವನ್ನು ಖರೀದಿಸಲಿದೆ

ವರ್ಲ್ಡ್ ಗೋಲ್ಡ್ ಕೌನ್ಸಿಲ್ 2024 ರ ಸೆಂಟ್ರಲ್ ಬ್ಯಾಂಕ್ ಗೋಲ್ಡ್ ರಿಸರ್ವ್ ಸರ್ವೆ ವರದಿಯನ್ನು ಬಿಡುಗಡೆ ಮಾಡಿದೆ. 2024ರ ಫೆಬ್ರುವರಿ 19 ಮತ್ತು ಏಪ್ರಿಲ್ 30ರ ನಡುವೆ ನಡೆಸಲಾದ ಈ ಸಮೀಕ್ಷೆಯಲ್ಲಿ 70 ಸೆಂಟ್ರಲ್ ಬ್ಯಾಂಕ್‌ಗಳಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇಕಡಾ 29 ರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ಮುಂದಿನ 12 ತಿಂಗಳಲ್ಲಿ ಹೆಚ್ಚಿನ ಚಿನ್ನವನ್ನು ಖರೀದಿಸುತ್ತೇವೆ ಮತ್ತು ತಮ್ಮ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತೇವೆ ಎಂದು ಹೇಳಿವೆ.

ಶೇ. 81ರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನದ ಸಂಗ್ರಹ ಹೆಚ್ಚಿಸಲಿವೆ

ಸಮೀಕ್ಷೆಯಲ್ಲಿ ಭಾಗವಹಿಸಿದ 81 ಪ್ರತಿಶತ ಸೆಂಟ್ರಲ್ ಬ್ಯಾಂಕ್​ಗಳು ಚಿನ್ನದ ಸಂಗ್ರಹದಲ್ಲಿ ಹೆಚ್ಚಳ ಮಾಡುವುದಾಗಿ ಹೇಳಿವೆ. ಶೇಕಡಾ 19 ರಷ್ಟು ಬ್ಯಾಂಕಗಳು ಯಾವ ವ್ಯತ್ಯಯ ಆಗದು ಎಂದಿವೆ. ಶೇ. 71 ರಷ್ಟು ಕೇಂದ್ರೀಯ ಬ್ಯಾಂಕ್‌ಗಳು 2023 ರಲ್ಲಿ ಚಿನ್ನದ ಸಂಗ್ರಹ ಹೆಚ್ಚಿಸುವ ಬಗ್ಗೆ ಮಾತನಾಡಿದ್ದವು. 69 ರಷ್ಟು ಕೇಂದ್ರೀಯ ಬ್ಯಾಂಕ್‌ಗಳು ಮುಂದಿನ ಐದು ವರ್ಷಗಳಲ್ಲಿ ಒಟ್ಟು ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ಹೆಚ್ಚಿಸುವುದಾಗಿ ಹೇಳಿವೆ.

ಕೇಂದ್ರೀಯ ಬ್ಯಾಂಕ್‌ಗಳು ಯೋಜಿತವಾಗಿ ಚಿನ್ನದ ಖರೀದಿಸಲು ನೀಡಿರುವ ಕಾರಣಗಳು ಇಂಟರೆಸ್ಟಿಂಗ್ ಇವೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯ ಅಪಾಯಕ್ಕೆ ಪ್ರತಿಯಾಗಿ ಚಿನ್ನವನ್ನು ಸಂಗ್ರಹಿಸಲಾಗುತ್ತಿದೆ. ಚೀನಾ, ಭಾರತ ಮೊದಲಾದ ದೇಶಗಳು ಮಾತ್ರ ಚಿನ್ನಕ್ಕೆ ಆದ್ಯತೆ ಕೊಡುತ್ತಿಲ್ಲ, ಮುಂದುವರಿದ ದೇಶಗಳೂ ಕೂಡ ಚಿನ್ನವನ್ನು ಪ್ರಮುಖ ಮೀಸಲು ಸಂಪತ್ತನ್ನಾಗಿ ಪರಿಗಣಿಸತೊಡಗಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಬ್ರಿಟನ್​ನಿಂದ 100 ಟನ್ ಚಿನ್ನ ಸಾಗಿಸಿ ತಂದ ಭಾರತ; 1991ರ ಬಳಿಕ ಇಷ್ಟೊಂದು ಪ್ರಮಾಣದ ಚಿನ್ನ ಸಾಗಾಣಿಕೆ ಇದೇ ಮೊದಲು

ಅತಿಹೆಚ್ಚು ಚಿನ್ನ ಖರೀದಿಸಿರುವ ಸೆಂಟ್ರಲ್ ಬ್ಯಾಂಕುಗಳ ಪಟ್ಟಿಯಲ್ಲಿ ಆರ್​ಬಿಐ ಐದನೇ ಸ್ಥಾನದಲ್ಲಿದೆ. ಗೋಲ್ಡ್ ಕೌನ್ಸಿಲ್​ನ ಈ ವರದಿಯಲ್ಲಿ ಇನ್ನೊಂದು ಗಮನಾರ್ಹ ಅಂಶವೆಂದರೆ, ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸುವ ಈ ಟ್ರೆಂಡ್ ಮುಂದುವರಿಯಬಹುದಾದರೂ ಕಳೆದ ಒಂದು ವರ್ಷದಲ್ಲಿ ಇದ್ದ ಪ್ರಮಾಣದಷ್ಟು ಖರೀದಿ ಮಾಡುವುದು ಅನುಮಾನ.

ಹೆಚ್ಚಿನ ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸುತ್ತಿರುವುದರಿಂದ ಸ್ವಾಭಾವಿಕವಾಗಿ ಬೆಲೆ ಏರಿಕೆ ಹೆಚ್ಚೇ ಇರುತ್ತದೆ. ಈ ಕಾರಣಕ್ಕೆ ಯಥೇಚ್ಛವಾಗಿ ಚಿನ್ನದ ಖರೀದಿ ಆಗದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ