- Kannada News Photo gallery Stock market futures and options trading, Government may put additional taxes, details in Kannada
ಆನ್ಲೈನ್ ಗೇಮಿಂಗ್ ರೀತಿಯಲ್ಲಿ ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲೆ ಅಧಿಕ ತೆರಿಗೆ ವಿಧಿಸುವ ಸಾಧ್ಯತೆ
ನವದೆಹಲಿ, ಜೂನ್ 20: ಮುಂದಿನ ತಿಂಗಳು ಮಂಡಿಸಲಾಗುವ ಬಜೆಟ್ನಲ್ಲಿ (Union Budget 2024) ಕೆಲ ಪ್ರಮುಖ ಕ್ರಮಗಳ ನಿರೀಕ್ಷೆ ಇದೆ. ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಹಳ ಹೆಚ್ಚುತ್ತಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವ್ಯವಹಾರಗಳಿಗೆ (F & O Trading) ಅಧಿಕ ತೆರಿಗೆ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ಒಂದು ವರದಿ.
Updated on: Jun 20, 2024 | 7:10 PM

ಷೇರು ಮಾರುಕಟ್ಟೆಯಲ್ಲಿ ಷೇರು ವಹಿವಾಟಿನ ಜೊತೆಗೆ ಕಾಲ್ಪನಿಕವಾದ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ (F & O Trading) ನಡೆಯುತ್ತಿರುವುದು ಇತ್ತೀಚೆಗೆ ಬಹಳ ಹೆಚ್ಚಾಗಿದೆ. ಸಾಕಷ್ಟು ಜನರು ಇಲ್ಲಿ ಟ್ರೇಡಿಂಗ್ಗೆ ಯತ್ನಿಸಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಕೂಡ ಇಂಥ ಟ್ರೇಡಿಂಗ್ಗೆ ಜನರು ಮುಗಿಬೀಳುವುದು ಮಾತ್ರ ಕಡಿಮೆ ಆಗಿಲ್ಲ.

ಕೇಂದ್ರ ಸರ್ಕಾರವು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಅನ್ನು ಲಾಟರಿ ಆಟಕ್ಕೆ ತುಲನೆ ಮಾಡಿದ್ದು, ಲಾಟರಿಗೆ ಇರುವಂತೆ ಎಫ್ ಅಂಡ್ ಒನಲ್ಲೂ ಅಧಿಕ ತೆರಿಗೆ ವಿಧಿಸಲು ನಿರ್ಧರಿಸಿರುವ ಸುದ್ದಿ ಕೇಳಿಬಂದಿದೆ. ಎಫ್ ಅಂಡ್ ಒದಿಂದ ಬಂದ ಆದಾಯವನ್ನು ಬಿಸಿನೆಸ್ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಬಜೆಟ್ ಬಳಿಕ ಇದನ್ನು ಸ್ಪೆಕ್ಯುಲೇಟಿವ್ ಇನ್ಕಮ್, ಅಥವಾ ಊಹಾತ್ಮಕ ಆದಾಯ (speculative income) ಎಂದು ವರ್ಗೀರಿಸಲಾಗಬಹುದು.

ಎಫ್ ಅಂಡ್ ಒದಲ್ಲಿ ಟಿಡಿಎಸ್ ವಿಧಿಸಬಹುದು. ಇದರಿಂದ ಹೂಡಿಕೆದಾರರ ಮೇಲೆ ನಿಗಾ ಇಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಟಿಡಿಎಸ್ನಿಂದಾಗಿ ಜನರು ಪದೇ ಪದೇ ಇಂಥ ಟ್ರೇಡಿಂಗ್ಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಬಹುದು. ಈ ಕಾರಣಕ್ಕೆ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ಗಳಿಗೆ ಹೆಚ್ಚು ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ.

ಕ್ರಿಪ್ಟೋ ಕರೆನ್ಸಿ ಹೂಡಿಕೆಗಳಿಂದ ಬರುವ ಲಾಭದ ಮೇಲೆ ಸರ್ಕಾರ ಶೇ. 30ರಷ್ಟು ತೆರಿಗೆ ವಿಧಿಸುತ್ತದೆ. ಎಫ್ ಅಂಡ್ ಒದಿಂದ ಬರುವ ಆದಾಯದ ಮೇಲೂ ಇಷ್ಟೇ ಪ್ರಮಾಣದ ತೆರಿಗೆ ವಿಧಿಸಬಹುದು ಎನ್ನುವಂತಹ ಸುದ್ದಿಗಳಿವೆ.

ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಅನ್ನು ಡಿರೈವೇಟಿವ್ಸ್ ಮಾರ್ಕೆಟ್ ಎನ್ನುತ್ತಾರೆ. ಕೆಲ ದಿನಗಳ ಹಿಂದೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕುತೂಹಲಕಾರಿ ಮಾಹಿತಿಯೊಂದನ್ನು ನೀಡಿದ್ದರು. ಈ ಡಿರೈವೇಟಿವ್ ಮಾರುಕಟ್ಟೆಯು ಭಾರತದ ನಾಮಿನಲ್ ಜಿಡಿಪಿಗಿಂತ ದೊಡ್ಡದಾಗಿದೆ ಎಂದು ಹೇಳಿದ್ದರು.

ಫ್ಯೂಚರ್ಸ್ ಮತ್ತು ಆಪ್ಷನ್ಸ್ ಎಂಬುದು ಒಂದು ರೀತಿಯಲ್ಲಿ ಬೆಟ್ಟಿಂಗ್ ಇದ್ದಂತೆ. ಫ್ಯೂಚರ್ಸ್ ಕಾಂಟ್ರಾಕ್ಟ್ನಲ್ಲಿ ಒಂದು ಷೇರನ್ನು ನಿರ್ದಿಷ್ಟ ದಿನಕ್ಕೆ ನಿರ್ದಿಷ್ಟ ಬೆಲೆಗೆ ಖರೀದಿಸಲು ಅಥವಾ ಮಾರಲು ಮಾಡಿಕೊಂಡಿರುವ ಒಪ್ಪಂದವಾಗಿರುತ್ತದೆ. ಆ ದಿನಕ್ಕೆ ಆ ಬೆಲೆಗೆ ವಹಿವಾಟು ಮಾಡಬೇಕಾಗುತ್ತದೆ.

ಇನ್ನು, ಆಪ್ಷನ್ಸ್ ಕಾಂಟ್ರಾಕ್ಟ್ನಲ್ಲೂ ಇದೇ ರೀತಿ ಬೆಲೆ ಏರಿಕೆ ಅಥವಾ ಇಳಿಕೆ ಮೇಲೆ ಬೆಟಿಂಗ್ ಆಗುತ್ತದೆ. ಫ್ಯೂಚರ್ಸ್ ಕಾಂಟ್ರಾಕ್ಟ್ ಮಾದರಿಯಲ್ಲಿ ಇಲ್ಲಿ ವಹಿವಾಟು ಮಾಡಲೇಬೇಕಾದ ಬಾಧ್ಯತೆ ಇರುವುದಿಲ್ಲ.




