Fiscal Deficit: ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಏಪ್ರಿಲ್ನಿಂದ ಜೂನ್ ಮಧ್ಯೆ ಶೇ 58ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಳಿಕೆ
ಕಳೆದ ಹಣಕಾಸು ವರ್ಷದ ಏಪ್ರಿಲ್ನಿಂದ ಜೂನ್ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 58ಕ್ಕೂ ಹೆಚ್ಚು ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಕಡಿಮೆ ಆಗಿದೆ.
ಭಾರತ ಸರ್ಕಾರದ ವಿತ್ತೀಯ ಕೊರತೆಯ (Fiscal Deficit) ಪ್ರಮಾಣವು ಏಪ್ರಿಲ್ನಿಂದ ಜೂನ್ ತ್ರೈಮಾಸಿಕಕ್ಕೆ 2.74 ಲಕ್ಷ ಕೋಟಿ ರೂಪಾಯಿ ಆಗಿದೆ (36.83 ಬಿಲಿಯನ್ ಅಮೆರಿಕನ್ ಡಾಲರ್). ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 58ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂಬ ಅಂಶವು ಸರ್ಕಾರವು ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದು ಬಂದಿದೆ. ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಈ ಬೆಳವಣಿಗೆ ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ವಿತ್ತೀಯ ಕೊರತೆಯು 6.62 ಲಕ್ಷ ಕೋಟಿ ರೂಪಾಯಿ ಆಗಿತ್ತು. ಕೊರೊನಾ ಲಾಕ್ಡೌನ್ ಹೇರಿದ್ದರಿಂದ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಕುಸಿತವಾಗಿ, ಏಳು ದಶಕದಲ್ಲಿ ಕಾಣದಂಥ ಕೆಟ್ಟ ಆರ್ಥಿಕ ಕುಸಿತಕ್ಕೆ ಸಾಕ್ಷಿ ಆಗಿತ್ತು.
ಏಪ್ರಿಲ್ನಿಂದ ಜೂನ್ನ ಮೂರು ತಿಂಗಳ ಅವಧಿಗೆ, ಜೂನ್ ತಿಂಗಳಾಂತ್ಯಕ್ಕೆ ನಿವ್ವಳ ತೆರಿಗೆ ಸ್ವೀಕೃತಿಯು 4.13 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಗೆ 1.35 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗಿತ್ತು. ಇನ್ನು ಸರ್ಕಾರ ಮಾಡಿದ ವೆಚ್ಚದ ಪ್ರಮಾಣವು ಕಳೆದ ವರ್ಷದಲ್ಲಿ 8.16 ಲಕ್ಷ ಕೋಟಿ ಇದ್ದದ್ದು, ಈ ಬಾರಿ 821 ಕೋಟಿ ರೂಪಾಯಿ ಹೆಚ್ಚಳ ಆಗಿದೆ ಎಂಬ ಅಂಶವನ್ನು ಡೇಟಾದಲ್ಲಿ ತೋರಿಸಲಾಗಿದೆ. ಅಂದಹಾಗೆ ಸರ್ಕಾರದ ವಿತ್ತೀಯ ಕೊರತೆ ಅಂದರೆ ಏನು ಎಂಬುದನ್ನು ಸಹ ತಿಳಿದುಕೊಳ್ಳುವುದು ಉತ್ತಮ.
ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಸರ್ಕಾರಕ್ಕೆ ಬರಬಹುದಾದ ಅಂದಾಜು ಆದಾಯ ಮತ್ತು ಅಂದಾಜು ವೆಚ್ಚವನ್ನು ಜನರ ಮುಂದಿಡಲಾಗುತ್ತದೆ. ಇದು ಕೇವಲ ಅಂದಾಜಷ್ಟೇ ಆಗಿರುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಕೊರೊನಾ ಲಾಕ್ಡೌನ್ ಕಾರಣಕ್ಕೆ ನಿರೀಕ್ಷಿತ ಆದಾಯಗಳು ಬಂದಿರಲಿಲ್ಲ. ಜತೆಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ಸಹ ಮಾಡಬೇಕಾಗಿತ್ತು. ಆದಾಯಕ್ಕಿಂತ ಖರ್ಚು ಇಷ್ಟು ಹೆಚ್ಚಾಗುತ್ತದೆ ಅಂದಾಗ ವಿತ್ತೀಯ ಕೊರತೆ ಎನ್ನಲಾಗುತ್ತದೆ. ಅಷ್ಟು ಹಣವನ್ನು ಸರಿತೂಗಿಸಲು ಸರ್ಕಾರವು ಸಾಲ ಮಾಡುತ್ತದೆ, ಬಾಂಡ್ ವಿತರಣೆ ಮಾಡುತ್ತದೆ. ಹೀಗೆ ಬೇರೆ ಬೇರೆ ಮಾರ್ಗ ಅನುಸರಿಸುತ್ತದೆ. ಈಗ ಮೊದಲ ತ್ರೈಮಾಸಿಕ (ಏಪ್ರಿಲ್ನಿಂದ ಜೂನ್) ಹೋಲಿಕೆ ಮಾಡಲಾಗಿದೆ. ಹಾಗೆ ನೋಡಿದಾಗ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಈ ಬಾರಿ ವಿತ್ತೀಯ ಕೊರತೆ ಪ್ರಮಾಣ ಗಣನೀಯವಾಗಿ ಇಳಿಕೆ ಆಗಿದೆ.
ಇದನ್ನೂ ಓದಿ: Budget Deficit: ಸತತ ಐದನೇ ವರ್ಷ ಅಂದುಕೊಂಡಿದ್ದಕ್ಕಿಂತ ಮೀರಿ ಹೋಗಲಿದೆ ಕೇಂದ್ರದ ಬಜೆಟ್ ಕೊರತೆ
(Central Government Fiscal Deficit Down More Than 58 Percent For April To June Quarter Compare To Last Financial Year Same Period )
Published On - 9:02 pm, Fri, 30 July 21