ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ

|

Updated on: Dec 24, 2024 | 11:56 AM

Farmer helpline centre at Delhi NCR: ರೈತರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಸಹಾಯವಾಣಿ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಸ್ಟ್​ನಲ್ಲಿ ಹೇಳಿದ್ದರು. ವರದಿಗಳ ಪ್ರಕಾರ 2025ರಲ್ಲಿ 100 ಸೀಟರ್​ನ ಹೆಲ್ಪ್​ಲೈನ್ ಸೆಂಟರ್ ಅನ್ನು ದಹಲಿ ಎನ್​ಸಿಆರ್ ಪ್ರದೇಶದಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ. ಕೆಲ ತಿಂಗಳಲ್ಲಿ ಬಿಡ್ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಪಿಎಂ ಕಿಸಾನ್ ಸೇರಿದಂತೆ ವಿವಿಧ ಕೃಷಿ ಯೋಜನೆಗಳ ವಿಚಾರದಲ್ಲಿ ಸಮಸ್ಯೆ, ದೂರುಗಳಿದ್ದರೆ ಸಹಾಯವಾಣಿಯಲ್ಲಿ ದಾಖಲಿಸಬಹುದು.

ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ
ರೈತ
Follow us on

ನವದೆಹಲಿ, ಡಿಸೆಂಬರ್ 24: ಪಿಎಂ ಕಿಸಾನ್ ಇತ್ಯಾದಿ ಯೋಜನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಸಜ್ಜಾಗಿದೆ. ಸಿಎನ್​ಎನ್ ನ್ಯೂಸ್18 ವಾಹಿನಿಯಲ್ಲಿ ಪ್ರಕಟವಾದ ವರದಿ ಪ್ರಕಾರ ಮುಂಬರುವ ವರ್ಷದಲ್ಲಿ ರೈತರಿಗಾಗಿ ರಾಷ್ಟ್ರೀಯ ಸಹಾಯವಾಣಿ ಸೇವೆ ಆರಂಭಿಸುವ ಸಾಧ್ಯತೆ ಇದೆ. ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಇದಕ್ಕಾಗಿ ಬೃಹತ್ ಕಾಲ್ ಸೆಂಟರ್ ಸ್ಥಾಪನೆಯಾಗಲಿದೆ. ಇದು ಟೋಲ್ ಫ್ರೀ ಹೆಲ್ಪ್​ಲೈನ್ ಆಗಿರಲಿದ್ದು ದೇಶದ ಯಾವುದೇ ಮೂಲೆಯಿಂದಲಾದರೂ ಹೆಲ್ಪ್​ಲೈನ್​ಗೆ ಬರುವ ರೈತರ ಕರೆಗಳಿಗೆ ದಿನದ 24 ಗಂಟೆಯೂ ಸ್ಪಂದನೆ ಸಿಗಲಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಕೃಷಿ ಸಚಿವರೂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಹತ್ವಾಕಾಂಕ್ಷಿ ಐಡಿಯಾ ಇದಾಗಿದೆ. ಕೃಷಿ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ, ಹಾಗೂ ಈ ಯೋಜನೆಗಳಲ್ಲಿ ರೈತರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲು ಸಹಾಯವಾಣಿ ರೂಪಿಸಲಾಗಿದೆ. ಇಡೀ ದೇಶಕ್ಕೆ ಒಂದೇ ಸಹಾಯವಾಣಿ ಸಂಖ್ಯೆ ಇರುತ್ತದೆ.

ಇದನ್ನೂ ಓದಿ: ಕುಗ್ಗದ ಅದಾನಿ; ವಾಯುಯಾನ ಕ್ಷೇತ್ರಕ್ಕೆ ಇನ್ನೊಂದು ಹೆಜ್ಜೆ; ಬೃಹತ್ ಸೂಪರ್ ವಿದ್ಯುತ್ ಸ್ಥಾವರ ಸ್ಥಾಪನೆಗೂ ಯೋಜನೆ

ಶಿವರಾಜ್ ಸಿಂಗ್ ಚೌಹಾಣ್ ಅವರು ಕೆಲ ತಿಂಗಳ ಹಿಂದೆಯೇ ಇಂಥದ್ದೊಂದು ರೈತ ಸಹಾಯವಾಣಿ ಯೋಜನೆ ಬಗ್ಗೆ ಸುಳಿವು ನೀಡಿದ್ದರು. 2025ರ ಮೊದಲ ಕ್ವಾರ್ಟರ್​ನೊಳಗೆ ಈ ಯೋಜನೆಗೆ ಬಿಡ್​ಗಳನ್ನು ಅಂತಿಮಗೊಳಿಸಬಹುದು. ಟೆಲಿಕಮ್ಯೂನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಎನ್ನುವ ಸಂಸ್ಥೆ ಈ ಯೋಜನೆಗೆ ಆಸಕ್ತಿ ತೋರಿದೆ.

ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ?

ರೈತರ ಈ ಸಹಾಯವಾಣಿಯ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 100 ಸೀಟರ್​ಗಳ ಕಾಲ್ ಸೆಂಟರ್ ಸ್ಥಾಪನೆಯಾಗಲಿದ್ದು, ವಾರದ ಏಳೂ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಹಾಯವಾಣಿ ಚಾಲನೆಯಲ್ಲಿರುತ್ತದೆ. ದೇಶದ ಯಾವುದೇ ಮೂಲೆಯಿಂದಲಾದರೂ ಲ್ಯಾಂಡ್​ಲೈನ್ ಮತ್ತು ಮೊಬೈಲ್ ನಂಬರ್​ಗಳಿಂದ ಇದಕ್ಕೆ ಕರೆ ಮಾಡಬಹುದು. ಕನ್ನಡವೂ ಸೇರಿದಂತೆ 22 ಭಾಷೆಗಳಲ್ಲಿ ಸೇವೆ ಇರಲಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್​ಗಳಲ್ಲಿ ಸಖತ್ ಹೆಚ್ಚಳ

ವಿವಿಧ ಪ್ರದೇಶಗಳಿಗೆ ನಿರ್ದಿಷ್ಟ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಉದಾಹರಣೆಗೆ, ಕರ್ನಾಟಕದಿಂದ ರೈತರೊಬ್ಬರು ಕರೆ ಮಾಡಿದಾಗ, ಕರ್ನಾಟಕಕ್ಕೆಂದು ನಿಯೋಜಿಸಲಾಗಿರುವ ಟೆಲಿ ಅಡ್ವೈಸರ್​ಗಳ ವಿಭಾಗಕ್ಕೆ ಸ್ವಯಂಚಾಲಿತವಾಗಿ ಕರೆಯು ವರ್ಗಾವಣೆ ಆಗುತ್ತದೆ. ಇದರಿಂದ ಕರ್ನಾಟಕದ ರೈತರು ಕನ್ನಡದಲ್ಲೇ ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಪಡೆಯಲು ಯತ್ನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ