ಮೀಟಿಂಗ್ ಅಟೆಂಡ್ ಮಾಡ್ಲಿಲ್ಲ ಎಂದು ಶೇ. 90ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಸಿಇಒ
ಅಮೆರಿಕ ಮೂಲದ ಕಂಪನಿಯೊಂದರ ಸಿಇಒ ಯಾವುದೋ ಕ್ಷುಲ್ಲಕ ಕಾರಣಕ್ಕೆ ಕಂಪನಿಯ ಬಹುಪಾಲು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟ ಘಟನೆ ನಡೆದಿದೆ. ಬೆಳಗಿನ ಮೀಟಿಂಗ್ನಲ್ಲಿ ಪಾಲ್ಗೊಳ್ಳಲಿಲ್ಲವೆಂದು 110 ಉದ್ಯೋಗಿಗಳ ಪೈಕಿ 99 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಸ್ಲ್ಯಾಕ್ ಪ್ಲಾಟ್ಫಾರ್ಮ್ನಲ್ಲಿ ಒಂದು ಮೆಸೇಜ್ ಹಾಕಿ ಅವರನ್ನು ಟರ್ಮಿನೇಟ್ ಮಾಡಲಾಗಿದೆ.
ವಾಷಿಂಗ್ಟನ್, ನವೆಂಬರ್ 18: ಕಂಪನಿಯ ಮೀಟಿಂಗ್ನಲ್ಲಿ ಪಾಲ್ಗೊಳ್ಳಲಿಲ್ಲವೆಂದು ಬಹುಪಾಲು ಉದ್ಯೋಗಿಗಳನ್ನು ಒಮ್ಮೆಗೇ ಕೆಲಸದಿಂದ ತೆಗೆದುಹಾಕಿದ ಘಟನೆ ಅಮೆರಿಕದಲ್ಲಿ ಆಗಿದೆ. ಅಮೆರಿಕ ಮೂಲದ ಕಂಪನಿಯೊಂದರ ಸಿಇಒ ತನ್ನ 111 ಮಂದಿ ಉದ್ಯೋಗಿಗಳ ಪೈಕಿ 99 ಮಂದಿಯನ್ನು ಒಂದೇ ಮೆಸೇಜ್ನಲ್ಲಿ ಟರ್ಮಿನೇಟ್ ಮಾಡಿದ್ದಾರೆ. ಸಿಇಒ ಅವರ ಹೆಸರು ಬಾಲ್ಡ್ವಿನ್ ಎಂದು ಗೊತ್ತಾಗಿದ್ದು, ಕಂಪನಿಯ ಹೆಸರು ಗೊತ್ತಾಗಿಲ್ಲ.
ಕಂಪನಿಗೆ ಹೊಸದಾಗಿ ಇಂಟರ್ನ್ ಆಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನನ್ನೂ ಸೇರಿದಂತೆ 99 ಮಂದಿಯನ್ನು ಸಿಇಒ ಕೆಲಸದಿಂದ ತೆಗೆದುಹಾಕಿದ ಘಟನೆಯನ್ನು ಆ ವ್ಯಕ್ತಿ ವಿವರಿಸಿದ್ದಾರೆ.
ಕಂಪನಿಯ ನಿಗದಿತ ಬೆಳಗಿನ ಮೀಟಿಂಗ್ನಲ್ಲಿ ಎಲ್ಲಾ 111 ಉದ್ಯೋಗಿಗಳೂ ಪಾಲ್ಗೊಳ್ಳಬೇಕಿತ್ತು. ಆದರೆ, 11 ಮಂದಿ ಮಾತ್ರವೇ ಇದ್ದರು. ಇದರಿಂದ ಕೆರಳಿ ಕೆಂಡವಾದ ಸಿಇಒ ಬಾಲ್ಡ್ವಿನ್ ಅವರು ಸ್ಲ್ಯಾಕ್ ಮೆಸೇಜಿಂಗ್ ಪ್ಲಾಟ್ಫಾರ್ಮ್ನಲ್ಲಿ ಮೆಸೇಜ್ ಹಾಕಿ ಎಲ್ಲ 99 ಮಂದಿಗೂ ಪಿಂಕ್ ಸ್ಲಿಪ್ ಕೊಟ್ಟಿದ್ದಾರೆ ಎಂದು ಇಂಟರ್ನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪತ್ನಿ ಕೈಗೆ ದೊಡ್ಡ ಬಿಸಿನೆಸ್ ಇತ್ತ ಮುಕೇಶ್ ಅಂಬಾನಿ; 70,000 ಕೋಟಿ ರೂ ಸಂಸ್ಥೆಯ ಒಡತಿ ನೀತಾ ಅಂಬಾನಿ ಅಡಿಯಲ್ಲಿ ಮೂವರು ಸಿಇಒಗಳು
‘ಬೆಳಗ್ಗೆ ಮೀಟಿಂಗ್ಗೆ ಯಾರು ಬಂದಿಲ್ಲವೋ, ನೀವು ಇದನ್ನು ಅಧಿಕೃತ ನೋಟೀಸ್ ಎಂದು ಪರಿಗಣಿಸಬೇಕು: ನೀವೆಲ್ಲರೂ ಕೆಲಸದಿಂದ ವಜಾಗೊಂಡಿದ್ದೀರಿ,’ ಸ್ಲ್ಯಾಕ್ ಮೆಸೇಜ್ನಲ್ಲಿ ಬಾಲ್ಡ್ವಿನ್ ಬರೆದಿದ್ದಾರೆ.
‘ಮೀಟಿಂಗ್ಗೆ ಗೈರಾಗಿರುವುದು ಉದ್ಯೋಗಿಗಳಿಗೆ ವೃತ್ತಿಪರತೆ ಮತ್ತು ಗಂಭೀರತೆಯ ಕೊರತೆ ಇರುವುದನ್ನು ತೋರಿಸುತ್ತದೆ. 110 ಜನರ ಪೈಕಿ 11 ಮಂದಿ ಮಾತ್ರ ಮೀಟಿಂಗ್ನಲ್ಲಿ ಇದ್ದರು. ಈ 11 ಜನರು ಕಂಪನಿಯಲ್ಲಿ ಉಳಿದುಕೊಳ್ಳುತ್ತಾರೆ. ಉಳಿದವರು ಟರ್ಮಿನೇಟ್ ಆಗಿದ್ದೀರಿ,’ ಎಂದು ಸಿಇಒ ತಮ್ಮ ಮೆಸೇಜ್ನಲ್ಲಿ ತಿಳಿಸಿದ್ದಾರೆ. ಅವರ ಸಿಟ್ಟು, ಆಕ್ರೋಶ ಮೆಸೇಜ್ನ ಕೊನೆಯಲ್ಲಿ ಇನ್ನಷ್ಟು ದಟ್ಟವಾಗಿದೆ. ಕೆಟ್ಟ ಶಬ್ದಗಳಲ್ಲಿ ಗೈರುಹಾಜರಿ ಉದ್ಯೋಗಿಗಳನ್ನು ಬಯ್ದಿದ್ದಾರೆ.
ಹಾಗೆಯೇ, ಉಚ್ಛಾಟಿತಗೊಂಡಿರುವ ಎಲ್ಲಾ ಉದ್ಯೋಗಿಗಳು ತಮ್ಮೊಂದಿಗಿನ ಕಂಪನಿಯ ವಸ್ತುಗಳನ್ನು ಮರಳಿಸಬೇಕು. ಕಂಪನಿಯ ಅಕೌಂಟ್ಗಳಿಂದ ಲಾಗೌಟ್ ಆಗಬೇಕು. ಸ್ಲ್ಯಾಕ್ ಗ್ರೂಪ್ನಿಂದ ಕೂಡಲೇ ನಿರ್ಗಮಿಸಬೇಕು ಎಂದೂ ಆದೇಶಿಸಿದ್ದಾರೆ. ಈ ಘಟನೆಯ ವಿವರ ಹಾಕಿದ ಇಂಟರ್ನ್ ಕೂಡ ಕೆಲಸ ಕಳೆದುಕೊಂಡಿದ್ದಾರೆ. ಕುತೂಹಲ ಎಂದರೆ ಈ ಇಂಟರ್ನ್ ಆ ಕಂಪನಿಗೆ ಸೇರಿ ಒಂದು ಗಂಟೆ ಮಾತ್ರವೇ ಆಗಿತ್ತಂತೆ.
ಸಿಇಒ ಬಾಲ್ಡ್ವಿನ್ ಅವರ ಈ ನಡತೆ ಬಗ್ಗೆ ರೆಡ್ಡಿಟ್ನಲ್ಲಿ ಸಹಜವಾಗಿ ಟೀಕೆಗಳು ವ್ಯಕ್ತವಾಗಿವೆ. ಕಂಪನಿಯು ಆರ್ಥಿಕವಾಗಿ ಬಳಲುತ್ತಿರಬೇಕು. ಹೀಗಾಗಿ ಲೇ ಆಫ್ ಮಾಡಲಾಗಿರಬಹುದು ಎಂದು ಕೆಲವರು ಕಾಮೆಂಟಿಸಿದ್ದಾರೆ. ಯಾವುದೇ ಕಾಂಪೆನ್ಸೇಶನ್ ಕೊಡದೆಯೇ ಉದ್ಯೋಗಿಗಳನ್ನು ಹೊರಕಳುಹಿಸುವ ಚಿತಾವಣಿ ಇದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ