ವಿಕಿಪೀಡಿಯಾ ಹೆಸರು ಬದಲಿಸಿದರೆ 8,000 ಕೋಟಿ ರೂ ಕೊಡ್ತೀನಿ ಎಂದು ಇಲಾನ್ ಮಸ್ಕ್ ಸವಾಲು
Elon Musk and Wikipedia: ವಿಕಿಪೀಡಿಯಾ ಹೆಸರನ್ನು ಡಿಕಿಪೀಡಿಯಾ ಎಂದು ಬದಲಾಯಿಸಿದರೆ ನಾನು 1 ಬಿಲಿಯನ್ ಡಾಲರ್ ಕೊಡುತ್ತೇನೆ ಎಂದು ಇಲಾನ್ ಮಸ್ಕ್ ಆಫರ್ ಕೊಟ್ಟಿದ್ದಾರೆ. ಹೆಸರು ಬದಲಿಸಿ ಹಣಪಡೆದು ಬಳಿಕ ಮತ್ತೆ ವಿಕಿಪೀಡಿಯಾ ಎಂದು ಮಾಡಿ ಎಂದೊಬ್ಬರು ಸಲಹೆಗೆ ಮಸ್ಕ್, ‘ಹೆಸರು ಬದಲಾವಣೆ ಕನಿಷ್ಠ ಒಂದು ವರ್ಷ ಇರಬೇಕು’ ಎಂದು ಷರತ್ತನ್ನೂ ವಿಧಿಸಿದ್ದಾರೆ.
ನವದೆಹಲಿ, ಅಕ್ಟೋಬರ್ 23: ಟ್ವಿಟ್ಟರ್ ಆಯ್ತು, ಈಗ ವಿಕಿಪೀಡಿಯಾ ಮೇಲೆ ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ (elon musk) ಕಣ್ಣು ಬಿದ್ದಂತಿದೆ. ಮಸ್ಕ್ ಅವರು ವಿಕಿಪೀಡಿಯಾ ಖರೀದಿಸಲು ಹೊರಟಿಲ್ಲ. ಟ್ವಿಟ್ಟರ್ ಖರೀದಿಸುವ ಮುನ್ನ ಅದರೊಂದಿಗೆ ಮಸ್ಕ್ ಸೋಷಿಯಲ್ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದು ನಿಮಗೆ ಗೊತ್ತಿರಬಹುದು. ಈಗ ವಿಕಿಪೀಡಿಯಾ ಹಾಗೂ ಅವರ ಮಧ್ಯೆ ವಾಗ್ಯುದ್ಧಗಳು ನಡೆಯುತ್ತಿವೆ. ವಿಕಿಪೀಡಿಯಾದ (wikipedia) ಕೆಲ ಬರಹಗಳ ಬಗ್ಗೆ ಅಸಮಾಧಾನಗೊಂಡಿರುವ ಇಲಾನ್ ಮಸ್ಕ್ ಇತ್ತೀಚೆಗೆ ಒಂದು ಸವಾಲು ಹಾಕಿದ್ದಾರೆ. ವಿಕಿಪೀಡಿಯಾ ತನ್ನ ಹೆಸರು ಬದಲಾಯಿಸಿಕೊಂಡರೆ 1 ಬಿಲಿಯನ್ ಡಾಲರ್ ಕೊಡುವುದಾಗಿ ಹೇಳಿದ್ದಾರೆ. ಇದಾದ ಬಳಿಕ ವಿಕಿಪೀಡಿಯಾ ಅಭಿಮಾನಿಗಳು ಹಾಗೂ ಇಲಾನ್ ಮಸ್ಕ್ ನಡುವೆ ಒಂದಷ್ಟು ಮಾತಿನ ಸಮರ ಏರ್ಪಟ್ಟಿತು.
‘ಅವರ ಹೆಸರನ್ನು ಡಿಕಿಪೀಡಿಯಾ ಎಂದು ಬದಲಾಯಿಸಿಕೊಂಡರೆ ಒಂದು ಬಿಲಿಯನ್ ಡಾಲರ್ (8,300 ಕೋಟಿ ರೂ) ಕೊಡುತ್ತೇವೆ. ನಿಖರ ಮಾಹಿತಿಯನ್ನು ರಕ್ಷಿಸಲು ಈ ಕೆಲಸ ಮಾಡುತ್ತೇನೆ,’ ಎಂದು ಸ್ಪೇಸ್ ಎಕ್ಸ್ ಸಂಸ್ಥಾಪಕರೂ ಆದ ಇಲಾನ್ ಮಸ್ಕ್ ಚಾಲೆಂಜ್ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಇದಕ್ಕೆ ಒಬ್ಬ ವಿಕಿಪೀಡಿಯಾ ಬಳಕೆದಾರ ಪ್ರತಿಕ್ರಿಯಿಸಿದ್ದು, ‘ವಿಕಿಪೀಡಿಯಾ ನೀವು ಈ ಸವಾಲು ಸ್ವೀಕರಿಸಿ. ಹಣ ಪಡೆದ ಬಳಿಕ ಹೆಸರನ್ನು ಮತ್ತೆ ಬದಲಾಯಿಸಿಕೊಳ್ಳಬಹುದು,’ ಎಂದಿದ್ದಾರೆ. ಇದಕ್ಕೂ ಇಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ; ಈ ವಿಮಾನ ಪ್ರಯಾಣದಲ್ಲಿ 350 ಎಂಬಿಪಿಎಸ್ ವೇಗದ ವೈಫೈ ಸೌಲಭ್ಯ
‘ಕನಿಷ್ಠ ಒಂದು ವರ್ಷ ಇರಬೇಕು. ನಾನೇನು ಮೂರ್ಖನಲ್ಲ,’ ಎಂದು ಇಲಾನ್ ಮಸ್ಕ್ ತಮ್ಮ ಸವಾಲಿಗೊಂದು ಷರತ್ತು ವಿಧಿಸಿದ್ದಾರೆ.
ಮಸ್ಕ್ ಇಷ್ಟಕ್ಕೆ ಸುಮ್ಮನಾಗಿಲ್ಲ. ಬಳಕೆದಾರರಿಂದ ವಿಕಿಪೀಡಿಯಾ ಹಣದ ದಾನ ಸಂಗ್ರಹಿಸುತ್ತಿರುವ ಬಗ್ಗೆ ಮಸ್ಕ್ ಕಿಡಿಕಾರಿದ್ದಾರೆ.
‘ವಿಕಿಮೀಡಿಯ ಫೌಂಡೇಶನ್ಗೆ ಯಾಕೆ ಇಷ್ಟು ಹಣ ಬೇಕು ಎಂದು ನಿಮಗೆ ಆಶ್ಚರ್ಯವೇ ಆಗಿಲ್ಲವಾ? ವಿಕಿಪೀಡಿಯಾವನ್ನು ನಿರ್ವಹಿಸಲಂತೂ ಅದು ಅವಶ್ಯಕತೆ ಇಲ್ಲ. ಇಡೀ ಪಠ್ಯದ ನಕಲನ್ನು ನೀವು ಫೋನ್ನಲ್ಲಿ ಹಾಕಿಬಿಡಬಹುದು. ಹಾಗಾದರೆ, ಆ ಹಣ ಯಾತಕ್ಕಾಗಿ? ಈ ಪ್ರಶ್ನೆಗೆ ಉತ್ತರ ಬೇಕು,’ ಎಂದು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮ ವಿಕಿಪೀಡಿಯಾ ಪೇಜ್ಗೆ ಹಸು ಮತ್ತು ಸೆಗಣಿಯ ಚಿತ್ರವನ್ನೂ ಸೇರಿಸುವಂತೆ ಮತ್ತೊಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
ವಿಕಿಪೀಡಿಯಾ ಮತ್ತು ಮಸ್ಕ್ ಸೆಣಸಾಟ ಯಾಕೆ?
ಟ್ವಿಟ್ಟರ್ ಬಲಪಂಥೀಯರ ವಿರೋಧಿ ಎಂಬ ಹಣೆಪಟ್ಟಿ ಇತ್ತು. ವಿಕಿಪೀಡಿಯಾ ಬಗ್ಗೆಯೂ ಅಂಥದ್ದೇ ಆರೋಪ ಇದೆ. ಇಲಾನ್ ಮಸ್ಕ್ ಬಹಿರಂಗವಾಗಿ ಈ ಬಗ್ಗೆ ಹೇಳಿಕೊಂಡಿದ್ದಿದೆ, ಆಗಾಗ ಟೀಕಿಸಿದ್ದಿದೆ. ಇದೇ ಮೇ ತಿಂಗಳಲ್ಲಿ ವಿಕಿಪೀಡಿಯಾ ಸಂಸ್ಥಾಪಕ ಜಿಮ್ಮಿ ವೇಲ್ಸ್ ಅವರು ಟರ್ಕಿ ಸರ್ಕಾರ ವಿರುದ್ದದ ಎದ್ದ ಧ್ವನಿಗಳನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಹತ್ತಿಕ್ಕಲಾಗುತ್ತಿದೆ ಎಂದು ಟೀಕಿಸಿದ್ದರು. ಈ ಬಗ್ಗೆ ಇಲಾನ್ ಮಸ್ಕ್ ಕೂಡ ತಿರುಗೇಟು ನೀಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ