ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

Chemists and Druggists nation-wide strike on May 20th: ಮೇ 20ರಂದು ದೇಶಾದ್ಯಂತ ಔಷಧ ವ್ಯಾಪಾರಿಗಳು ಇ-ಫಾರ್ಮಸಿಗಳ ವಿರುದ್ಧ ಮುಷ್ಕರ ನಡೆಸಲಿದ್ದಾರೆ. ಅನಿಯಂತ್ರಿತ ಆನ್‌ಲೈನ್ ಮಾರಾಟ, ಅನ್ಯಾಯದ ರಿಯಾಯಿತಿಗಳು ಮತ್ತು ನಕಲಿ ಪ್ರಿಸ್ಕ್ರಿಪ್ಷನ್‌ನಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. AIOCD ಈ ಬಂದ್‌ಗೆ ಕರೆ ನೀಡಿದ್ದು, ಕೆಲವು ರಾಜ್ಯಗಳು ಇದರಲ್ಲಿ ಭಾಗವಹಿಸುವುದಿಲ್ಲ. ಅನಿವಾರ್ಯ ಔಷಧಗಳಿಗೆ ಜನರು ಮುಂಚಿತವಾಗಿ ಸಿದ್ಧರಾಗಿರಲು ಸಲಹೆ ನೀಡಲಾಗಿದೆ.

ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?
ಮೆಡಿಕಲ್ ಸ್ಟೋರ್
Image Credit source: PTI

Updated on: May 19, 2026 | 1:15 PM

ನವದೆಹಲಿ, ಮೇ 19: ಆನ್‌ಲೈನ್ ಔಷಧ ಮಾರಾಟ ವೇದಿಕೆಗಳು (e-pharmacies) ಮತ್ತು ಇ-ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ಪ್ರತಿಭಟಿಸಿ, ಮೇ 20ರಂದು ದೇಶಾದ್ಯಂತ ಔಷಧ ವ್ಯಾಪಾರಿಗಳು (Chemists) ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗಿಸ್ಟ್ಸ್ (AIOCD) ಎನ್ನುವ ಸಂಘಟನೆಯ ನೇತೃತ್ವದಲ್ಲಿ ಈ ಬಂದ್ ನಡೆಯುತ್ತಿದ್ದು, ದೇಶದ ಸುಮಾರು 12 ರಿಂದ 15 ಲಕ್ಷ ಔಷಧ ವ್ಯಾಪಾರಿಗಳು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಈ ಸುದ್ದಿಯ ಮುಖ್ಯಾಂಶಗಳು

  • ಆನ್ಲೈನ್ ಪ್ಲಾಟ್​ಫಾರ್ಮ್​ಗಳಿಂದ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಔಷಧ ವ್ಯಾಪಾರಿಗಳು ಮೇ 20ರಂದು ಮುಷ್ಕರ ನಡೆಸಲಿದ್ದಾರೆ.
  • ಆಸ್ಪತ್ರೆಗಳ ಒಳಗೆ ಮತ್ತು ಹೊರಗಿನ ಆವರಣಗಳಲ್ಲಿರುವ ಮೆಡಿಕಲ್ ಸ್ಟೋರ್​ಗಳು ತೆರೆದಿರುತ್ತವೆ. ತುರ್ತು ಔಷಧ ಸೇವೆಗಳು ಲಭ್ಯ ಇರುತ್ತವೆ.
  • ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ಔಷಧ ವ್ಯಾಪಾರಿಗಳ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಜನೌಷಧ ಸೆಂಟರ್​ಗಳು ತೆರೆದಿರುತ್ತವೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಔಷಧ ವ್ಯಾಪಾರಿಗಳ ಮುಷ್ಕರಕ್ಕೆ ಪ್ರಮುಖ ಕಾರಣಗಳೇನು?

  1. ಅನಿಯಂತ್ರಿತ ಇ-ಫಾರ್ಮಸಿಗಳು: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಔಷಧ ವಿತರಣೆಗೆ ಸರ್ಕಾರ ನೀಡಿದ್ದ ತಾತ್ಕಾಲಿಕ ಸಡಿಲಿಕೆಗಳನ್ನು (GSR 220E ಮತ್ತು 817E ನಿಯಮಗಳು) ಈಗಲೂ ಮುಂದುವರಿಸಲಾಗುತ್ತಿದ್ದು, ಆನ್‌ಲೈನ್ ಕಂಪನಿಗಳು ಇದರ ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಕೆಮಿಸ್ಟ್ ಸಂಘಟನೆಗಳು ಆರೋಪಿಸಿವೆ.
  2. ಅನ್ಯಾಯದ ಸ್ಪರ್ಧೆ ಮತ್ತು ಭಾರಿ ರಿಯಾಯಿತಿ: ದೊಡ್ಡ ಕಾರ್ಪೊರೇಟ್ ಆನ್‌ಲೈನ್ ಸಂಸ್ಥೆಗಳು ಶೇಕಡಾ 20 ರಿಂದ 50 ರಷ್ಟು ಭಾರಿ ರಿಯಾಯಿತಿಗಳನ್ನು (Discounts) ನೀಡುತ್ತಿರುವುದರಿಂದ ಸಣ್ಣ ಮತ್ತು ಸ್ಥಳೀಯ ಮೆಡಿಕಲ್ ಸ್ಟೋರ್‌ಗಳ ವ್ಯವಹಾರಕ್ಕೆ ಭಾರಿ ಹೊಡೆತ ಬಿದ್ದಿದೆ.
  3. ನಕಲಿ ಪ್ರಿಸ್ಕ್ರಿಪ್ಷನ್ ಮತ್ತು ಸುರಕ್ಷತೆಯ ಆತಂಕ: ಆನ್‌ಲೈನ್‌ನಲ್ಲಿ ಸೂಕ್ತ ವೈದ್ಯರ ಚೀಟಿ (Prescription) ಇಲ್ಲದೆ ಅಥವಾ ಎಐ (AI) ಮೂಲಕ ಸೃಷ್ಟಿಸಿದ ನಕಲಿ ಚೀಟಿಗಳನ್ನು ಬಳಸಿ ಆಂಟಿಬಯೋಟಿಕ್ಸ್ ಮತ್ತು ಮಾದಕ ಶೈಲಿಯ ಔಷಧಗಳನ್ನು ಸುಲಭವಾಗಿ ಆರ್ಡರ್ ಮಾಡಲಾಗುತ್ತಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಸರ್ಕಾರಕ್ಕೆ ಪ್ರತಿಭಟನಾಕಾರರು ಮುಂದಿಟ್ಟಿರುವ ಬೇಡಿಕೆಗಳು

  • ಆನ್‌ಲೈನ್ ಔಷಧ ಮಾರಾಟದ ಮೇಲೆ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಬೇಕು.
  • ಕೋವಿಡ್ ಸಮಯದಲ್ಲಿ ನೀಡಲಾಗಿದ್ದ ಇ-ಫಾರ್ಮಸಿ ಸಡಿಲಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು.
  • ಸ್ಥಳೀಯ ಔಷಧ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸೂಕ್ತ ನೀತಿಗಳನ್ನು ರೂಪಿಸಬೇಕು.

ಇದನ್ನೂ ಓದಿ: ದಿಲ್ಲಿಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಂದ 3 ದಿನ ಮುಷ್ಕರ; ಏನಿವೆ ಅವರ ಬೇಡಿಕೆಗಳು?

12 ರಾಜ್ಯಗಳಲ್ಲಿ ಇಲ್ಲವಾ ಮುಷ್ಕರ?

ಎನ್​ಡಿಟಿವಿ ವರದಿ ಪ್ರಕಾರ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ 12ಕ್ಕೂ ಹೆಚ್ಚು ರಾಜ್ಯಗಳ ಔಷಧ ವ್ಯಾಪಾರಿಗಳ ಸಂಘಟನೆಗಳು ಈ ಮೇ 20ರ ಮುಷ್ಕರದಿಂದ ದೂರ ಉಳಿಯಲು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಈ ರಾಜ್ಯಗಲ್ಲಿರುವ ಜನರು ಆತಂಕಪಡಬೇಕಿಲ್ಲ.

ಮೇ 20ರಂದು ನಿಮ್ಮ ಮನೆಯ ಹತ್ತಿರದ ಸಾಮಾನ್ಯ ಮೆಡಿಕಲ್ ಸ್ಟೋರ್‌ಗಳು ಮುಚ್ಚುವ ಸಾಧ್ಯತೆ ಇಲ್ಲದೇ ಇಲ್ಲ. ಆದ್ದರಿಂದ ನಿಮಗೆ ಅಗತ್ಯವಿರುವ ನಿಯಮಿತ ಅಥವಾ ತುರ್ತು ಜೀವರಕ್ಷಕ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿ ಇಟ್ಟುಕೊಳ್ಳುವುದು ಉತ್ತಮ. ತುರ್ತು ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಅಥವಾ ಪ್ರಮುಖ ಆಸ್ಪತ್ರೆಗಳ ಔಷಧಾಲಯಗಳನ್ನು ಸಂಪರ್ಕಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us