ನವದೆಹಲಿ, ಅಕ್ಟೋಬರ್ 16: ನಾಗರಿಕತೆಗಳ ಅಳಿವು ಉಳಿವಿಗೆ ನೀರಿನ ಪಾತ್ರ ಬಹಳ ದೊಡ್ಡದು. ಮನುಷ್ಯ ಮಾತ್ರವಲ್ಲ, ಈ ಭೂಮಿಯಲ್ಲಿರುವ ಸಕಲ ಜೀವಚರ್ಯಗಳಿಗೂ ನೀರು ಬಹಳ ಮುಖ್ಯ. ನೀರಿನ ವಿಚಾರಕ್ಕೆ ರಾಜ್ಯ ರಾಜ್ಯಗಳ, ದೇಶ ದೇಶಗಳ ಮಧ್ಯೆ ಯುದ್ಧವೇ ನಡೆದುಹೋಗುತ್ತದೆ. ನದಿ ಎಂಬುದು ನಿಸರ್ಗದತ್ತವಾಗಿ ಬಂದಿರುವ ಸಂಪತ್ತು. ಆ ನದಿ ಸಹಜವಾಗಿ ಹರಿದು ಹೋಗುವ ಪ್ರದೇಶಗಳಲ್ಲಿನ ಜನರಿಗೆ ಜೀವನಾಡಿಯಾಗಿರುತ್ತದೆ. ಈ ನೀರಿನ ವಿಚಾರದಲ್ಲಿ ರಾಜಕಾರಣ, ಸ್ವಾರ್ಥ ಬಂದರೆ ಅದು ಮನುಜ ತನಗೆ ತಾನೇ ಹಳ್ಳ ತೋಡಿಕೊಂಡಂತೆ. ಚೀನಾ ಇಂಥದ್ದೇ ಕುತಂತ್ರ ಮಾಡುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಾದ್ಯಂತ ಹರಿದುಹೋಗುವ ಬ್ರಹ್ಮಪುತ್ರ ನದಿಗೆ ಚೀನಾ ದೊಡ್ಡ ಅಣೆಕಟ್ಟು ನಿರ್ಮಿಸುತ್ತಿದೆ. ಚೀನಾದಲ್ಲಿ ಯಾರ್ಲುಂಗ್ ಟ್ಸಾಂಗ್ಪೋ (Yarlung Tsangpo river) ಎಂಬ ಹೆಸರಿನಿಂದ ಕರೆಯುವ ಈ ನದಿಗೆ ಈಗಾಗಲೇ ಹಲವು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಆದರೆ, ಈಗ ಭಾರೀ ದೊಡ್ಡ ಡ್ಯಾಮ್ ಕಟ್ಟಲು ಹೊರಟಿದೆ ಚೀನಾ.
ಯೂರೇಶಿಯನ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಯಾರ್ಲುಂಗ್ ಟ್ಸಾಂಗ್ಪೋ ಅರ್ಥಾತ್ ಬ್ರಹ್ಮಪುತ್ರ ನದಿಯಲ್ಲಿ 60,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಜಲವಿದ್ಯುತ್ ಘಟಕ ಸ್ಥಾಪಿಸುತ್ತಿದೆ ಚೀನಾ. ಅದಕ್ಕಾಗಿ ಇಲ್ಲಿ ಭಾರೀ ದೊಡ್ಡ ಅಣೆಕಟ್ಟು ಕಟ್ಟಲಿದೆ.
ಒಂದು ವೇಳೆ ಈ ಅಣೆಕಟ್ಟು ನಿರ್ಮಾಣವಾಯಿತೆಂದರೆ ಚೀನಾ ಒಂದೇ ಕಲ್ಲಿಗೆ ಎರಡು ಕಲ್ಲುಗಳನ್ನು ಹೊಡೆದಂತಾಗುತ್ತದೆ. ಮೊದಲನೆಯದು, ವಿದ್ಯುತ್ ಉತ್ಪಾದನೆ. ಎರಡನೆಯದು, ಭಾರತದ ಮೇಲೆ ದರ್ಪ ತೋರಲು ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಮಾರಕ 31 ಪ್ರಿಡೇಟರ್ ಡ್ರೋನ್ ಖರೀದಿಗೆ ಅಮೆರಿಕದೊಂದಿಗೆ ಭಾರತ ಒಪ್ಪಂದ; ಅಲ್ಖೈದಾ ನಾಯಕನನ್ನು ಸಂಹರಿಸಿದ್ದು ಇದೇ ಡ್ರೋನ್
ಪಶ್ಚಿಮ ಟಿಬೆಟ್ನಲ್ಲಿ ಹುಟ್ಟುವ ಯಾರ್ಲುಂಗ್ ಟ್ಸಾಂಗ್ಪೋ ನದಿ, ಭಾರತದ ಅರುಣಾಚಲಪ್ರದೇಶ, ಅಸ್ಸಾಮ್, ಭೂತಾನ್ ಮತ್ತು ಬಾಂಗ್ಲಾದೇಶಗಳಲ್ಲಿ ಹರಿದು ಸಮುದ್ರ ಸೇರುತ್ತದೆ. ಚೀನಾ, ಭಾರತ, ಭೂತಾನ್ ಮತ್ತು ಬಾಂಗ್ಲಾದೇಶದ 100 ಕೋಟಿಗೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಅಣೆಕಟ್ಟು ಕಟ್ಟಿದರೆ ಈ ನದಿ ನೀರಿನ ಹರಿವಿನ ನಿಯಂತ್ರಣ ಚೀನಾಗೆ ಸಿಕ್ಕುತ್ತದೆ.
ಮಳೆಯ ಅಭಾವ ಬಂದರೆ ಈ ಅಣೆಕಟ್ಟು ಚೀನಾಗೆ ನೀರನ್ನು ಹಿಡಿದಿಡಲು ಅವಕಾಶ ಕೊಡುತ್ತದೆ. ಅತಿಯಾಗಿ ಮಳೆ ಬಿದ್ದರೆ ಅಣೆಕಟ್ಟಿನ ನೀರನ್ನು ಹೊರಗೆ ಬಿಡಬಹುದು. ಇದರಿಂದ ಭಾರತಕ್ಕೆ ಬರ ಮತ್ತು ಪ್ರವಾಹ ಎರಡೂ ಅಪಾಯ ಎದುರಾಗುತ್ತದೆ. ಚೀನಾ ಪಾಲಿಗೆ ಈ ಅಣೆಕಟ್ಟು ಪ್ರಬಲ ಅಸ್ತ್ರವಾಗುತ್ತದೆ.
ಚೀನಾದ ಪ್ರಸ್ತಾಪಿತ ಅಣೆಕಟ್ಟಿನಿಂದ ನೀರಿನ ಪ್ರವಾಹ ಹರಿದುಬಂದು ನೆರೆ ಸೃಷ್ಟಿಯಾಗುವುದನ್ನು ತಪ್ಪಿಸಲು ಭಾರತ ಬೇರೊಂದು ಪ್ಲಾನ್ ಮಾಡಿದೆ. ಅರುಣಾಚಲಪ್ರದೇಶದ ಸಿಯಾಂಗ್ ಜಿಲ್ಲೆಯ ಉತ್ತರ ಭಾಗದಲ್ಲಿ ಸಿಯಾಂಗ್ ನದಿಯಲ್ಲಿ (ಬ್ರಹ್ಮಪುತ್ರ) ಭಾರತ 11,000 ಮೆಗಾವ್ಯಾಟ್ ಹೈಡ್ರೋಪವರ್ ಪ್ರಾಜೆಕ್ಟ್ ಸ್ಥಾಪಿಸಲು ಯೋಜಿಸಿದೆ. ಇಲ್ಲಿ 900 ಕೋಟಿ ಕ್ಯುಬಿಕ್ ಮೀಟರ್ ನೀರನ್ನು ಹಿಡಿದಿಡಬಹುದು. ಇದರಿಂದ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು ಭಾರತಕ್ಕೆ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ
ಬ್ರಹ್ಮಪುತ್ರ ನದಿ ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ನದಿ ವ್ಯವಸ್ಥೆಯಾಗಿದೆ. ಟಿಬೆಟ್ನಲ್ಲಿ ಇದಕ್ಕೆ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿದೆ. ಟಿಬೆಟ್ನಲ್ಲಿರುವ ಕೈಲಾಸ ಪರ್ವತ ಮತ್ತು ಮಾನಸಸರೋವರದ ಬಳಿ ಹುಟ್ಟುವ ಈ ನದಿ ಹಿಮಾಲಯದ ಮೂಲಕ ದಕ್ಷಿಣ ಟಿಬೆಟ್ನಾದ್ಯಂತ 2,900 ಕಿಮೀ ದೂರ ಸಾಗಿ ಭಾರತವನ್ನು ತಲುಪುತ್ತದೆ. ಭಾರತವನ್ನು ಸೇರುವ ಮುನ್ನ ಯಾರ್ಲುಂಗ್ ಟ್ಸಾಂಗ್ಪೋ ನದಿ ವಿಶ್ವದಲ್ಲೇ ಅತಿದೊಡ್ಡ ನದಿ ಕಣಿವೆ ಸೃಷ್ಟಿಸುತ್ತದೆ. ಇಲ್ಲಿಯೇ ಚೀನಾ ಬೃಹತ್ ಜಲವಿದ್ಯುತ್ ಯೋಜನೆ ಕೈಗೊಳ್ಳುತ್ತಿರುವುದು.
ಟಿಬೆಟ್ನಿಂದ ಈ ನದಿ ಅರುಣಾಚಲಪ್ರದೇಶಕ್ಕೆ ಹರಿದುಬರುತ್ತದೆ. ಅಲ್ಲಿ ಇದಕ್ಕೆ ಸಿಯಾಂಗ್ ಎಂಬ ಹೆಸರಿದೆ. ಇಲ್ಲಿಂದ ಅಸ್ಸಾಮ್ಗೆ ಹೋಗುತ್ತದೆ. ಅಲ್ಲಿ ಇದಕ್ಕೆ ಬ್ರಹ್ಮಪುತ್ರ ಹೆಸರಿದೆ. ಬಾಂಗ್ಲಾದೇಶದಲ್ಲಿ ಈ ನದಿಯ ಹೆಸರು ಜಮುನಾ ಎಂದಿದೆ.
ಇದನ್ನೂ ಓದಿ: ಚೀನಾದ ಶ್ರೀಮಂತರಿಗೆ ಹೆಚ್ಚಲಿರುವ ತೆರಿಗೆ ಸಂಕಟ; ಬೊಕ್ಕಸವೂ ತುಂಬೀತು, ಸಂಪತ್ತೂ ಮರುಹಂಚಿಕೆಯಾದೀತು
ಟಿಬೆಟ್ನಲ್ಲಿ ಹಲವು ದೊಡ್ಡ ನದಿಗಳು ಜನ್ಮಪಡೆಯುತ್ತವೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಈ ನದಿಗಳು ಹರಿದುಹೋಗುತ್ತವೆ. ಬ್ರಹ್ಮಪುತ್ರ, ಸಿಂಧು (ಇಂಡಸ್), ಘಾಗ್ರ, ಸಟ್ಲಜ್, ಮೆಕೋಂಗ್ ಇತ್ಯಾದಿ ನದಿಗಳು ಟಿಬೆಟ್ನಲ್ಲೇ ಹುಟ್ಟುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ