ನವದೆಹಲಿ, ಮೇ 12: ಭಾರತದ ಜೊತೆ ಅತಿಹೆಚ್ಚು ವ್ಯಾಪಾರ ವಹಿವಾಟು (bilateral trade) ನಡೆಸುವ ದೇಶಗಳ ಪೈಕಿ ಚೀನಾ ಅಗ್ರಸ್ಥಾನಕ್ಕೆ ಹೋಗಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ 118.4 ಬಿಲಿಯನ್ ಡಾಲರ್ಗೆ ಏರಿದೆ. ಈ ವೇಳೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಟ್ರೇಡಿಂಗ್ 118.3 ಬಿಲಿಯನ್ ಡಾಲರ್ಗೆ ಇಳಿದಿರುವುದು ತಿಳಿದುಬಂದಿದೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ, ಅಂದರೆ 2021-22 ಮತ್ತು 2022-23ರಲ್ಲಿ ಭಾರತಕ್ಕೆ ಅಮೆರಿಕವೇ ಅಗ್ರಮಾನ್ಯ ಟ್ರೇಡಿಂಗ್ ಪಾರ್ಟ್ನರ್ ಆಗಿತ್ತು.
ಚೀನಾದಿಂದ ಭಾರತದ ರಫ್ತು ಗಣನೀಯವಾಗಿ ಹೆಚ್ಚಿದೆ. ದತ್ತಾಂಶದ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ ಚೀನಾದ ಆದ ರಫ್ತು ಶೇ. 8.7ರಷ್ಟು ಹೆಚ್ಚಾಗಿ 16.67 ಬಿಲಿಯನ್ ಡಾಲರ್ ತಲುಪಿದೆ. ಚೀನಾದಿಂದ ಭಾರತ ಮಾಡಿಕೊಂಡ ಆಮದು ಬರೋಬ್ಬರಿ 101.3 ಬಿಲಿಯನ್ ಡಾಲರ್ನಷ್ಟಿದೆ. ಕಳೆದ ಬಾರಿ ಇದು 100 ಬಿಲಿಯನ್ ಡಾಲರ್ಗಿಂತ ಕಡಿಮೆ ಇತ್ತು. 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಚೀನಾದಿಂದ ಭಾರತ ಮಾಡಿಕೊಂಡ ಆಮದು ಶೇ. 3.24ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ದೆಹಲಿ, ಮುಂಬೈಗಿಂತ ಬೆಂಗಳೂರಿನ ಕಂಪನಿಗಳಿಂದ ಹೆಚ್ಚು ಮ್ಯಾಟರ್ನಿಟಿ ಸೌಲಭ್ಯ
ಬೇರೆ ಬೇರೆ ಕಾರಣಗಳಿಗೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ವಹಿವಾಟು 2023-24ರಲ್ಲಿ ಕಡಿಮೆ ಆಗಿದೆ. ಅದರಲ್ಲೂ ಅಮೆರಿಕದಿಂದ ಭಾರತ ಮಾಡಿಕೊಂಡ ಆಮದು ಶೇ. 20ರಷ್ಟು ಕಡಿಮೆ ಆಗಿದೆ. ಅಮೆರಿಕಕ್ಕೆ ಭಾರತ ಮಾಡಿದ ರಫ್ತು ಶೇ. 1.32ರಷ್ಟು ಮಾತ್ರವೇ ಕಡಿಮೆ ಆಗಿರುವುದು.
ದತ್ತಾಂಶದ ಪ್ರಕಾರ 2022-23ರಲ್ಲಿ ಅಮೆರಿಕಕ್ಕೆ ಭಾರತ ಮಾಡಿದ ರಫ್ತು 78.54 ಬಿಲಿಯನ್ ಇತ್ತು. 2023-24ರಲ್ಲಿ ಅದು 77.5 ಬಿಲಿಯನ್ ಡಾಲರ್ಗೆ ಇಳಿದಿದೆ. ಇನ್ನು, ಭಾರತ ಮಾಡಿಕೊಂಡ ಆಮದು 40.8 ಬಿಲಿಯನ್ ಡಾಲರ್ಗೆ ಇಳಿದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಸತತ ಮೂರು ವಾರ ಕುಸಿತ ಕಂಡಿದ್ದ ಫಾರೆಕ್ಸ್ ಮೀಸಲು ನಿಧಿ 641.59 ಬಿಲಿಯನ್ ಡಾಲರ್ಗೆ ಹೆಚ್ಚಳ
ಭಾರತ ಈ ಹಿಂದೆ ಯುಎಇ ಜೊತೆ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿತ್ತು. 2013-14ರಿಂದ 2020-21ರವರೆಗೂ ಹೆಚ್ಚು ವರ್ಷ ಚೀನಾ ಭಾರತದ ಜೊತೆ ಅತಿಹೆಚ್ಚು ವ್ಯಾಪಾರ ಹೊಂದಿತ್ತು. ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಚೀನಾದೊಂದಿಗಿನ ವ್ಯಾಪಾರ ವಹಿವಾಟು ಸಂಬಂಧವನ್ನು ಭಾರತ ಕಡಿಮೆಗೊಳಿಸಿತ್ತು. ಪರಿಣಾಮವಾಗಿ ಅಮೆರಿಕದ ಜೊತೆ ಟ್ರೇಡಿಂಗ್ ಹೆಚ್ಚಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ