ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?

China unwilling to fund Pakistan's 60 billion USD CPEC project: ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಪೂರ್ಣಗೊಳಿಸುವ ಹತಾಶೆಯಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಕೈಕೊಟ್ಟಂತಿದೆ. ಯೋಜನೆಯ ಕಾಮಗಾರಿಗಳಿಗೆ ವೆಚ್ಚ ಮಾಡಲು ಪಾಕಿಸ್ತಾನಕ್ಕೆ 60 ಬಿಲಿಯನ್ ಡಾಲರ್ ಬೇಕಿದೆ. ಇಷ್ಟು ಸಾಲ ನೀಡಲು ಚೀನಾ ನಿರಾಕರಿಸಿದೆ. ಚೀನಾಗೂ ಬಹಳ ಮುಖ್ಯವಾಗಿರುವ ಈ ಸಿಪೆಕ್ ಯೋಜನೆ ಜಾರಿಗೆ ಪಾಕಿಸ್ತಾನಕ್ಕೆ ಅದು ಯಾಕೆ ಸಹಾಯ ಮಾಡುತ್ತಿಲ್ಲ?

ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?
ಸಿಪೆಕ್ ಕಾರಿಡಾರ್

Updated on: Nov 11, 2025 | 7:28 PM

ನವದೆಹಲಿ, ನವೆಂಬರ್ 11: ಹಲವು ವರ್ಷಗಳಿಂದ ಪೂರ್ಣಗೊಳಿಸಲು ಆಗದೆ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಈ ಹತಾಶೆಯ ಪರಿಸ್ಥಿತಿ ಮುಂದುವರಿಯುವಂತಿದೆ. ಅದರ ಸಿಪೆಕ್ ಯೋಜನೆಗೆ ಫಂಡಿಂಗ್ ಕೊಡಲು ಚೀನಾ (China) ಹಿಂದೇಟು ಹಾಕುತ್ತಿದೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಇತ್ತೀಚಿನ ಚೀನಾ ಭೇಟಿಯಲ್ಲಿ ಹೆಚ್ಚೇನೂ ಗೀಟಿದಂತಿಲ್ಲ. ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (CPEC- China Pakistan Economic Corridor) ಎರಡನೇ ಹಂತದ ಯೋಜನೆಗೆ ಚೀನಾದ ಫಂಡಿಂಗ್ ಸಿಗದೆ ಷರೀಫ್ ವಾಪಸ್ಸಾಗಿದ್ದಾರೆ.

ಪಾಕಿಸ್ತಾನದಲ್ಲಿ ಕೃಷಿ, ಎಲೆಕ್ಟ್ರಿಕ್ ವಾಹನ, ಸೌರಶಕ್ತಿ, ಆರೋಗ್ಯ, ಉಕ್ಕು ಮೊದಲಾದ ಕೆಲ ಕ್ಷೇತ್ರಗಳಲ್ಲಿ 8.5 ಬಿಲಿಯನ್ ಡಾಲ್ ಮೌಲ್ಯದ ಯೋಜನೆಗಳಿಗೆ ಚೀನಾದ ವಿವಿಧ ಕಂಪನಿಗಳು ಎಂಒಯು ಒಪ್ಪಂದಗಳನ್ನು ಮಾಡಕೊಂಡಿವೆ. ಇದು ಬಿಟ್ಟರೆ ಪ್ರಮುಖ ಹೂಡಿಕೆಗಳು ಚೀನಾದಿಂದ ಪಾಕಿಸ್ತಾನಕ್ಕೆ ಸಿಗುತ್ತಿಲ್ಲ.

ಏನಿದು ಸಿಪೆಕ್ ಯೋಜನೆ?

ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯು ಪಾಕಿಸ್ತಾನದೊಳಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಪ್ರಾಜೆಕ್ಟ್​​ನ ಒಂದು ಪ್ರಮುಖ ಭಾಗವಾಗಿದೆ ಇದು. ಚೀನಾದ ಶಿನ್​ಜಿಯಾಂಗ್ ಪ್ರಾಂತ್ಯದಿಂದ ಪಾಕಿಸ್ತಾನದ ಗ್ವಾದರ್ ಪೋರ್ಟ್​​ವರೆಗೆ ದೀರ್ಘ ಕಾರಿಡಾರ್ ನಿರ್ಮಿಸುವುದು ಸಿಪೆಕ್ ಯೋಜನೆಯ ಉದ್ದೇಶ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು

ಬರೋಬ್ಬರಿ 3,000 ಕಿಮೀ ಉದ್ದದ ಈ ಕಾರಿಡಾರ್​ನಲ್ಲಿ ರಸ್ತೆ, ರೈಲ್ವೆ, ಪೈಪ್​​ಲೈನ್ ನೆಟ್ವರ್ಕ್​ಗಳು ಇರಲಿವೆ. ಚೀನಾದಿಂದ ಸರಕುಗಳನ್ನು ಈ ಕಾರಿಡಾರ್ ಮೂಲಕ ಗ್ವಾದರ್ ಪೋರ್ಟ್​ಗೆ ಕಳುಹಿಸಿ, ಅಲ್ಲಿಂದ ಮಧ್ಯಪ್ರಾಚ್ಯ, ಸೆಂಟ್ರಲ್ ಏಷ್ಯಾ, ಆಫ್ರಿಕಾ ದೇಶಗಳಿಗೆ ರಫ್ತು ಮಾಡುವುದು ಚೀನಾದ ಉದ್ದೇಶ. ಹೀಗಾಗಿ, ರಸ್ತೆ ಮತ್ತು ರೈಲು ಸಂಪರ್ಕ ಜಾಲವನ್ನು ಬಲಪಡಿಸಲಾಗುತ್ತಿದೆ.

ಸಿಪೆಕ್ ಯೋಜನೆಯ ಕಾಮಗಾರಿಗಳು ಕಳೆದ ಕೆಲ ವರ್ಷಗಳಿಂದ ಬಹಳ ಮಂದಗತಿಯಲ್ಲಿ ಸಾಗಿದೆ. ಎರಡನೇ ಹಂತದ ಯೋಜನೆಯನ್ನು ಜಾರಿಗೆ ತರಲು 60 ಬಿಲಿಯನ್ ಡಾಲರ್ ಹಣ ಪಾಕಿಸ್ತಾನಕ್ಕೆ ಬೇಕಿದೆ. ಚೀನಾ ಬೆಂಬಲಿತ ಯೋಜನೆಯಾದರೂ ಈ ಎಲ್ಲಾ ಕಾಮಗಾರಿಗಳ ವೆಚ್ಚವನ್ನು ಪಾಕಿಸ್ತಾನವೇ ಭರಿಸಬೇಕು. ಚೀನಾ ಈ ಹಿಂದೆ ಸಾಕಷ್ಟು ಸಾಲಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದೆ. ಈಗ ಸಾಲ ಕೊಡಲು ಹಿಂದೇಟು ಹಾಕುತ್ತಿದೆ. ಪಾಕಿಸ್ತಾನಕ್ಕೆ ಈಗ ಒಂದು ರೀತಿಯಲ್ಲಿ ನಡುನೀರಲ್ಲಿ ಕೈಬಿಟ್ಟಂತಹ ಸ್ಥಿತಿ ಬಂದಿದೆ.

ಚೀನಾ ಸಿಪೆಕ್ ಯೋಜನೆಗೆ ಫಂಡಿಂಗ್ ಕೊಡಲು ಹಿಂದೇಟು ಹಾಕುತ್ತಿರಬಹುದು?

ಪಾಕಿಸ್ತಾನದಲ್ಲಿ ಸಿಪೆಕ್ ಯೋಜನೆ ಜಾರಿಗೆ ಫಂಡಿಂಗ್ ನೀಡಲು ಚೀನಾ ಒಲ್ಲೆ ಎನ್ನಲು ಕೆಲ ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:

  • ಯೋಜನೆ ಕಾಮಗಾರಿ ಸ್ಥಳಗಳಲ್ಲಿ ಉಗ್ರರ ಉಪಟಳ ಹೆಚ್ಚಿರುವುದು
  • ಅಮೆರಿಕದ ಜೊತೆ ಪಾಕಿಸ್ತಾನ ಮತ್ತೆ ಸರಸವಾಡುತ್ತಿರುವುದು.
  • ಭಾರತದ ಜೊತೆ ಚೀನಾದ ಒಡನಾಟ ಹೆಚ್ಚುತ್ತಿರುವುದು.
  • ಚೀನಾದ ಹಿಂದಿನ ಸಾಲಗಳನ್ನೇ ಪಾಕಿಸ್ತಾನ ತೀರಿಸಿದಲ್ಲದೇ ಇರುವುದು.
  • ಹೊಸ ಸಾಲ ಕೊಟ್ಟರೆ ಅದು ಮರಳಬಹುದು ಎನ್ನುವ ವಿಶ್ವಾಸ ಚೀನಾಗೆ ಇಲ್ಲದಿರುವುದು.
  • ಚೀನಾದ ಆರ್ಥಿಕತೆಯೇ ಬಿಗಿ ಪರಿಸ್ಥಿತಿಯಲ್ಲಿ ಇರುವುದರಿಂದ ಪಾಕಿಸ್ತಾನಕ್ಕೆ ಸಹಾಯ ಮಾಡಲು ಆಗದೇ ಇರಬಹುದು.

ಇದನ್ನೂ ಓದಿ: ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

60 ಬಿಲಿಯನ್ ಡಾಲರ್ ಸಣ್ಣ ಮೊತ್ತವಲ್ಲ. ಚೀನಾದ ಆರ್ಥಿಕ ಪರಿಸ್ಥಿತಿ ಮೊದಲಿನಷ್ಟು ಸಲೀಸಾಗಿಲ್ಲ. ದೊಡ್ಡದೊಡ್ಡ ಯೋಜನೆಗಳಿಗೆ ಫಂಡಿಂಗ್ ಕೊಡುವುದು ಇವತ್ತಿನ ಸಂದರ್ಭದಲ್ಲಿ ಚೀನಾಗೆ ರಿಸ್ಕಿ ಎನಿಸಿದೆ. ಅದರಲ್ಲೂ ಹಣಕಾಸು ಶಿಸ್ತು ಹೊಂದಿಲ್ಲದ ಪಾಕಿಸ್ತಾನಕ್ಕೆ ಸಾಲ ಕೊಟ್ಟರೆ ಅದು ಮರಳುತ್ತದೆ ಎನ್ನುವ ನಂಬಿಕೆ ಚೀನಾಗೆ ಇದ್ದಂತಿಲ್ಲ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ 60 ಬಿಲಿಯನ್ ಡಾಲರ್ ಪಡೆಯಲು ಎಡಿಬಿಗೆ ಸಾಲದ ಅರ್ಜಿ ಹಾಕಿ ಕಾದು ಕುಳಿತುಕೊಳ್ಳುವುದೇ ಉಳಿದಿರುವ ಮಾರ್ಗ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Tue, 11 November 25