ನವದೆಹಲಿ, ಡಿಸೆಂಬರ್ 17: ಸೆಮಿಕಂಡಕ್ಟರ್ ಕ್ಷೇತ್ರದ ಜಾಗತಿಕ ಮೌಲ್ಯ ಸರಪಳಿಯಲ್ಲಿ (global value chain) ಭಾರತ ಪ್ರಧಾನ ಪಾತ್ರ ವಹಿಸಲು ಚಿಪ್ ಡಿಸೈನ್ ಬಹಳ ಮುಖ್ಯ. ಬೆಂಗಳೂರಿನ ಸಾವಿರಾರು ಚಿಪ್ ಡಿಸೈನರ್ಗಳು ಭಾರತದ ಸೆಮಿಕಂಡಕ್ಟರ್ ಓಟಕ್ಕೆ ಪುಷ್ಟಿ ಕೊಡುತ್ತಾರೆ ಎಂದು ಚಿಪ್ ವಾರ್ ಪುಸ್ತಕದ ಲೇಖಕ ಕ್ರಿಸ್ ಮಿಲ್ಲರ್ ಅಭಿಪ್ರಾಯಪಟ್ಟಿದ್ದಾರೆ. ಸಿಎನ್ಬಿಸಿ ಟಿವಿ18 ಮತ್ತು ಮನಿಕಂಟ್ರೋಲ್ ವತಿಯಿಂದ ನಿನ್ನೆ ಡಿಸೆಂಬರ್ 16ರಂದು ನಡೆದ ಗ್ಲೋಬಲ್ ಎಐ ಕಾಂಕ್ಲೇವ್ನಲ್ಲಿ ಮಾತನಾಡುತ್ತಿದ್ದ ಲೇಖಕರು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಚಿಪ್ ಡಿಸೈನ್ ಎಷ್ಟು ಮೌಲ್ಯಯುತ ಎಂಬುದನ್ನು ವಿವರಿಸಿದ್ದಾರೆ.
‘ಚಿಪ್ ಡಿಸೈನ್ ಬಹಳ ಮೌಲ್ಯಯುತವಾದುದು. ನೀವು ಕೆಳಗಿನ ಸ್ತರದ ಕಾರ್ಮಿಕರಿಗೆ ಹೆಚ್ಚೆಚ್ಚು ಕೆಲಸ ನೀಡಬೇಕೆಂದರೆ ಚಿಪ್ ಪ್ಯಾಕೇಜಿಂಗ್ ಉತ್ತಮ ಎನಿಸುತ್ತದೆ. ಆದರೆ, ಇವತ್ತು ಚಿಪ್ ಉದ್ಯಮವನ್ನು ನೋಡಿದಾಗ, ಚಿಪ್ ಡಿಸೈನ್ನಲ್ಲೇ ಈಗಲೂ ಹೆಚ್ಚಿನ ಮೌಲ್ಯ ಇರುವುದು ಕಂಡು ಬರುತ್ತದೆ,’ ಎಂದು ಕ್ರಿಸ್ ಮಿಲ್ಲರ್ ಹೇಳಿದ್ದಾರೆ.
ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ
‘ಬೃಹತ್ ಚಿಪ್ ಡಿಸೈನ್ ಅಥವಾ ಫ್ಯಾಬ್ಲೆಸ್ ಸಂಸ್ಥೆಗೆ ಎರಡು ಸಂಗತಿ ಮುಖ್ಯವಾದುದು. ಒಂದು, ಹೆಚ್ಚಿನ ಬಳಕೆದಾರ ವರ್ಗವನ್ನು ನಂಬಿ ಹಣ ಹಾಕುವ ವಿಡಿ ಇಕೋಸಿಸ್ಟಂ. ಮತ್ತೊಂದು, ಬಂಡವಾಳ ಮಾರುಕಟ್ಟೆ,’ ಎಂದು ತಿಳಿಸಿದ ಚಿಪ್ ವಾರ್ ಲೇಖಕರು, ಭಾರತ ಚಿಪ್ ಡಿಸೈನ್ನತ್ತ ಹೆಚ್ಚು ಗಮನ ಹರಿಸುವುದು ಉತ್ತಮ ತಂತ್ರಗಾರಿಕೆ ಆಗಬಹುದು ಎಂದು ಸಲಹೆ ನೀಡಿದ್ದಾರೆ.
ಭಾರತ ಕೈಗೊಂಡಿರುವ ಪಿಎಲ್ಐ ಯೋಜನೆಯಲ್ಲಿ ಒಳಗೊಳ್ಳಲಾಗಿರುವ ಹಲವು ಸೆಕ್ಟರ್ಗಳಲ್ಲಿ ಸೆಮಿಕಂಡಕ್ಟರ್ ಒಂದು. ಈ ಸೆಮಿಕಂಡಕ್ಟರ್ ಪಿಎಲ್ಐ ಸ್ಕೀಮ್ನಲ್ಲಿ ಹತ್ತು ಬಿಲಿಯನ್ ಡಾಲರ್ ಮೊತ್ತವನ್ನು ಮೀಸಲಿರಿಸಲಾಗಿದೆ. ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಅಮೆರಿಕದ ಮೈಕ್ರೋನ್ ಈಗಾಗಲೇ ಘಟಕ ನಿರ್ಮಾಣಕ್ಕೆ ಮುಂದಾಗಿದೆ.
ಇದನ್ನೂ ಓದಿ: Vedanta: ಡಿಸ್ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ
ಇನ್ನು, ಕ್ರಿಸ್ ಮಿಲ್ಲರ್ ಅವರ ‘ಚಿಪ್ ವಾರ್’ ಪುಸ್ತಕ 2022ರಲ್ಲಿ ಮುದ್ರಣಗೊಂಡಿದೆ. ಮೈಕ್ರೋಚಿಪ್ ಟೆಕ್ನಾಲಜಿಯಲ್ಲಿ ಪ್ರಾಬಲ್ಯ ಸಾಧಿಸಲು ದಶಕಗಳ ಕಾಲ ನಡೆದ ಪೈಪೋಟಿಯ ರೋಚಕ ವಿದ್ಯಮಾನಗಳನ್ನು ತಮ್ಮ ಪುಸ್ತಕದಲ್ಲಿ ಅವರು ದಾಖಲಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ