Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿ ಇಳಿಕೆ; 2 ದಿನದಲ್ಲಿ ಶೇ 32ರಷ್ಟು ಬೆಲೆ ನೆಲ ಕಚ್ಚಿದ ಐಆರ್​ಸಿಟಿಸಿ

| Updated By: Srinivas Mata

Updated on: Oct 20, 2021 | 4:26 PM

ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 20ನೇ ತಾರೀಕಿನ ಮಂಗಳವಾರ ಇಳಿಕೆ ದಾಖಲಿಸಿದೆ. ಆ ಬಗ್ಗೆ ವಿವರ ಇಲ್ಲಿದೆ.

Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿ ಇಳಿಕೆ; 2 ದಿನದಲ್ಲಿ ಶೇ 32ರಷ್ಟು ಬೆಲೆ ನೆಲ ಕಚ್ಚಿದ ಐಆರ್​ಸಿಟಿಸಿ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 20ನೇ ತಾರೀಕಿನ ಬುಧವಾರ ಕುಸಿತ ಕಂಡಿವೆ. ಎಲ್ಲ ವಲಯಗಳಲ್ಲೂ ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಸತತ ಎರಡನೇ ಟ್ರೇಡಿಂಗ್ ಸೆಷನ್ ಕೂಡ ಇಳಿಕೆಯಾಗಿದೆ. ಬುಧವಾರದ ದಿನಾಂತ್ಯದ ಹೊತ್ತಿಗೆ ಸೆನ್ಸೆಕ್ಸ್ 456.09 ಪಾಯಿಂಟ್ಸ್ ಅಥವಾ ಶೇ 0.74ರಷ್ಟು ಇಳಿಕೆಯಾಗಿ, 61259.96 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಕ್ತಾಯಗೊಳಿಸಿತು. ಇನ್ನು ನಿಫ್ಟಿ 152.20 ಅಥವಾ ಶೇ 0.83ರಷ್ಟು ಕುಸಿತವಾಗಿ 18,266.60 ಪಾಯಿಂಟ್ಸ್​ನೊಂದಿಗೆ ಇಂದಿನ ವ್ಯವಹಾರವನ್ನು ಮುಕ್ತಾಯಗೊಳಿಸಿತು. ಇಂದಿನ ವಹಿವಾಟಿನಲ್ಲಿ 877 ಕಂಪೆನಿಯ ಷೇರುಗಳು ಮೇಲಕ್ಕೆ ಹೋಗಿದ್ದು, 2351 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದರೆ, 115 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲ ವಲಯದ ಸೂಚ್ಯಂಕಗಳೂ ಇಳಿಕೆಯಲ್ಲೇ ವ್ಯವಹಾರ ಮುಗಿಸಿವೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ತಲಾ ಶೇ 2ರಷ್ಟು ಕುಸಿದಿವೆ.

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್​ಸಿಟಿಸಿ) ಷೇರುಗಳು ಸತತ ಎರಡು ಸೆಷನ್​ನಲ್ಲಿ (ಮಂಗಳವಾರ ಮತ್ತು ಬುಧವಾರ) ಶೇ 32ರಷ್ಟು ಕುಸಿತ ಕಂಡಿದೆ. ಮಂಗಳವಾರದಂದು ಈ ಷೇರು ದಾಖಲೆಯ 6396.30 ರೂಪಾಯಿ ತಲುಪಿ, ಸಾರ್ವಕಾಲಿಕ ಎತ್ತರವನ್ನು ಮುಟ್ಟಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಈ ಷೇರಿನ ಬೆಲೆ ಶೇ 218ರಷ್ಟು ಏರಿಕೆ ಆಗಿತ್ತು. ಬುಧವಾರದಂದು ಇಂಟ್ರಾಡೇ ವಹಿವಾಟಿನಲ್ಲಿ ಶೇ 18.5ರಷ್ಟು ಬೆಲೆಯನ್ನು ಐಆರ್​ಸಿಟಿಸಿ ಕಳೆದುಕೊಂಡಿತು. ಇನ್ನು ಮಂಗಳವಾರದಂದು ದಾಖಲೆಯ ಎತ್ತರದಿಂದ ಶೇ 16.2ರಷ್ಟು ಕುಸಿತ ಕಂಡಿತು. ಅದಕ್ಕೂ ಮುನ್ನ ಐಆರ್​ಸಿಟಿಸಿ ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಭಾರ್ತಿ ಏರ್​ಟೆಲ್​ ಶೇ 4.02
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 2.40
ಟಾಟಾ ಮೋಟಾರ್ಸ್ ಶೇ 1.04
ಇಂಡಸ್​ಇಂಡ್ ಬ್ಯಾಂಕ್ ಶೇ 0.64
ಆಕ್ಸಿಸ್ ಬ್ಯಾಂಕ್ ಶೇ 0.39

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಹಿಂಡಾಲ್ಕೋ ಶೇ -3.90
ಟೈಟಾನ್ ಕಂಪೆನಿ ಶೇ -2.96
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಶೇ -2.68
ಬಿಪಿಸಿಎಲ್​ ಶೇ -2.64
ಬಜಾಜ್ ಫಿನ್​ಸರ್ವ್ ಶೇ -2.48

ಇದನ್ನೂ ಓದಿ: IRCTC: ಐಆರ್​ಸಿಟಿಸಿ ಷೇರು ಒಂದೇ ದಿನದಲ್ಲಿ ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ