Cognizant: ಕಾಗ್ನೈಜೆಂಟ್ನಲ್ಲಿ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ 6 ಮಹಿಳೆಯರ ನೇಮಕ; ಉನ್ನತ ಹಂತದಲ್ಲಿ ಪರಿವರ್ತನೆ
6 Women Appointed As Senior Vice President: ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಕಾಗ್ನೈಜೆಂಟ್ ಇದೀಗ ತನ್ನ ಉನ್ನತ ಸ್ತರದ ಆಡಳಿತದಲ್ಲಿ ಗಮನಾರ್ಹ ಬದಲಾವಣೆ ತಂದಿದ್ದು, ಆರು ಮಂದಿ ಮಹಿಳೆಯರನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.
ಚೆನ್ನೈ, ಜುಲೈ 19: ಭಾರತದ ಐಟಿ ದಿಗ್ಗಜ ಸಂಸ್ಥೆ ಕಾಗ್ನೈಜೆಂಟ್ ತನ್ನ ಉನ್ನತ ಹಂತದ (Executive Level Job) ಆಡಳಿತ ವ್ಯವಹಾರದಲ್ಲಿ ಮಾರ್ಪಾಡು ಮಾಡಿದೆ. ಆರು ಮಂದಿ ಮಹಿಳೆಯರನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ. ತನ್ನ ಎಕ್ಸಿಕ್ಯೂಟಿವ್ ತಂಡದಲ್ಲಿ ವೈವಿಧ್ಯತೆ (Diverse) ತರಲು ಕಾಗ್ನೈಜೆಂಟ್ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಸೀನಿಯರ್ ವೈಸ್ ಪ್ರೆಸಿಡೆಂಟ್ ಸ್ಥಾನಕ್ಕೆ ಮಾತ್ರವಲ್ಲ, ಕಾಗ್ನೈಜೆಂಟ್ನ ಪ್ರತಿಯೊಂದು ನೇಮಕಾತಿಯಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಸೂಚನೆ ಇದೆ.
‘ಈ ನೇಮಕಾತಿಗಳು ನಾವೆಲ್ಲಾ ಒಟ್ಟಾಗಿ ಸಂಭ್ರಮಿಸುವಂಥವು. ನಾವು ಹೇಗೆ ನೇಮಕಾತಿ ಮಾಡಿಕೊಳ್ಳುತ್ತೇವೆ, ಪ್ರತಿಭೆಗಳನ್ನು ಹೇಗೆ ಬೆಳೆಸುತ್ತೇವೆ, ಉಳಿಸಿಕೊಳ್ಳುತ್ತೇವೆ ಇತ್ಯಾದಿ ನಮ್ಮ ಎಲ್ಲಾ ಕಾರ್ಯದಲ್ಲೂ ವೈವಿಧ್ಯತೆಯನ್ನು ವ್ಯವಸ್ಥಿತವಾಗಿ ತರಬೇಕು’ ಎಂದು ಕಾಗ್ನೈಜೆಂಟ್ ಸಿಇಒ ರವಿಕುಮಾರ್ ಎಸ್ ಹೇಳಿದ್ದಾರೆ.
ಕಾಗ್ನೈಜೆಂಟ್ನ ನೂತನ ಹಿರಿಯ ಉಪಾಧ್ಯಕ್ಷೆಯರು
- ಎಲಿಸಾ ಡೀ ರೋಚ್ಚಾ ಸೆರಾ, ಸಿಎಲ್ಆರ್ಎಂ ವಿಭಾಗ
- ತಿಯಾ ಹೇಡನ್, ಗ್ಲೋಬಲ್ ಮಾರ್ಕೆಟಿಂಗ್
- ಪ್ಯಾಟ್ರಿಶಿಯಾ ಹಂಟರ್ ಡೆನೆಹಿ, ಹೆಲ್ತ್ಕೇರ್ ಬ್ಯುಸಿನೆಸ್ ಯೂನಿಟ್
- ಶೈಲಜಾ ಜೋಸ್ಯುಲಾ, ಬಿಎಫ್ಎಸ್ಐ ಸೆಕ್ಟರ್
- ಅರ್ಚನಾ ರಮಣಕುಮಾರ್, ಇಂಡಸ್ಟ್ರಿ ಸಲ್ಯೂಷನ್ಸ್ ಗ್ರೂಪ್
- ಸ್ಯಾಂಡ್ರಾ ನಟಾರ್ಡೋನಾಟೋ, ಪಾರ್ಟ್ನರ್ಶಿಪ್ಸ್ ಅಂಡ್ ಅಲಾಯನ್ಸಸ್
ಇದನ್ನೂ ಓದಿ: Indian Passport: ಭಾರತದ ಪಾಸ್ಪೋರ್ಟ್ಗೆ ಇನ್ನಷ್ಟು ಬಲ; ವೀಸಾ ಇಲ್ಲದೇ 57 ದೇಶಗಳಿಗೆ ಹೋಗಲು ಅವಕಾಶ; ಇಲ್ಲಿದೆ ಪಟ್ಟಿ
ಈ ಮೇಲಿನ ಆರು ಮಂದಿ ಮಹಿಳಾ ಎಸ್ವಿಪಿಗಳಲ್ಲಿ ಇಬ್ಬರು ಭಾರತೀಯರಿದ್ದಾರೆ. ಶೈಲಜಾ ಜೋಸ್ಯುಲಾ ಉತ್ತರ ಅಮೆರಿಕದ ಬ್ಯಾಂಕಿಂಗ್, ಇನ್ಷೂರೆನ್ಸ್, ಫೈನಾನ್ಷಿಯಲ್ ಸರ್ವಿಸ್ ಸೆಕ್ಟರ್ಗಳಲ್ಲಿ ಕಾಗ್ನೈಜೆಂಟ್ ನೀಡುವ ಇಂಟ್ಯೂಟಿವ್ ಆಪರೇಷನ್ಸ್ ಮತ್ತು ಆಟೊಮೋಟಿವ್ ಸೇವೆಗಳನ್ನು ನೋಡಿಕೊಳ್ಳುತ್ತಾರೆ. ಹಾಗೆಯೇ ಇವರು ಹೈದರಾಬಾದ್ನಲ್ಲಿ ಬರೋಬ್ಬರಿ 56,000 ಉದ್ಯೋಗಿಗಳು ಇರುವ ಡೆಲಿವರಿ ಸೆಂಟರ್ನ ಮುಖ್ಯಸ್ಥೆಯೂ ಹೌದು.
ಭಾರತದಲ್ಲಿ 1994ರಲ್ಲಿ ಆರಂಭಗೊಂಡ ಕಾಗ್ನೈಜೆಂಟ್ ಸದ್ಯ ಅಮೆರಿಕದ ನ್ಯೂಯಾರ್ಕ್ನಲ್ಲಿ ಮುಖ್ಯ ಕಚೇರಿ ಹೊಂದಿದೆ. ಇನ್ಫೋಸಿಸ್ನ ಮಾಜಿ ಅಧ್ಯಕ್ಷ ರವಿಕುಮಾರ್ ಎಸ್ ಈಗ ಕಾಗ್ನೈಜೆಂಟ್ನ ಸಿಇಒ ಆಗಿದ್ದಾರೆ. ಬಹುತೇಕ ಉನ್ನತ ಸ್ತರಗಳಲ್ಲಿ ಪುರುಷ ಉದ್ಯೋಗಿಗಳೇ ಇದ್ದಾರೆ.
ಸಿಎಫ್ಒ, ಸಿಎಂಒ ಅಲ್ಲದೇ ಏಳು ಮಂದಿ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ಗಳಿದ್ದಾರೆ. ಅವರೆಲ್ಲರೂ ಪುರುಷರೇ ಆಗಿರುವುದು ಗಮನಾರ್ಹ. ಇದೀಗ ಈ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ 6 ಮಹಿಳೆಯರನ್ನು ನೇಮಕ ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ