LPG Cylinder Price: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿಗೂ ಹೆಚ್ಚು ಇಳಿಕೆ ಮಾಡಿದ ತೈಲ ಕಂಪೆನಿಗಳು
ವಾಣಿಜ್ಯ ಬಳಕೆಯ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಜೂನ್ 1, 2021ರಿಂದ ಅನ್ವಯ ಆಗುವಂತೆ ರೂ. 100ಕ್ಕೂ ಹೆಚ್ಚು ಬೆಲೆ ಇಳಿದಿದೆ.
ತೈಲ ಮಾರ್ಕೆಟಿಂಗ್ ಕಂಪೆನಿಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ 100 ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಇಂದು (ಜೂನ್ 1, 2021) ಇಳಿಕೆ ಮಾಡಿವೆ. ಆದರೆ ಬೆಲೆ ಇಳಿಕೆ ಆಗಿರುವುದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬಳಕೆದಾರರ ಪಾಲಿಗೆ ಇದು ಅತಿ ದೊಡ್ಡ ಪ್ರಮಾಣದಲ್ಲಿ ನಿರಾಳ ತಂದಿದೆ. ಐಒಸಿ ಬಳಕೆದಾರರಿಗೆ 19 ಕೇಜಿ ತೂಕದ ಸಿಲಿಂಡರ್ ಬೆಲೆಯಲ್ಲಿ ರೂ. 122 ಕಡಿಮೆ ಆಗಿದೆ. ಈಗಿನ ಬೆಲೆ ಕಡಿತದ ನಂತರ ಜೂನ್ 1ರಿಂದ ದರ ಪರಿಷ್ಕರಣೆ ಆದ ಮೇಲೆ ಒಂದು ಸಿಲಿಂಡರ್ಗೆ ರೂ. 1473.50 ಆಗುತ್ತದೆ. ಈ ಹಿಂದೆ ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್ 1595.50 ಇತ್ತು.
ಮೇ ತಿಂಗಳಲ್ಲಿ ತೈಲ ಕಂಪೆನಿಗಳು ಎಲ್ಪಿಜಿ ಅನಿಲ ದರವನ್ನು ಪ್ರತಿ ಸಿಲಿಂಡರ್ಗೆ ರೂ. 45 ಇಳಿಕೆ ಮಾಡಿದ್ದವು. ಅಂದಹಾಗೆ ಈ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾಗೂ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ದೆಹಲಿಯಲ್ಲಿ ಎಲ್ಪಿಜಿ ಅನಿಲ ಬೆಲೆ ಒಂದು ಸಿಲಿಂಡರ್ಗೆ ರೂ. 1473.50 ಇದೆ. ಮುಂಬೈನಲ್ಲಿ 1422.50 ಇದ್ದರೆ, ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್ಗೆ 1544.50 ಇದೆ. ಚೆನ್ನೈನಲ್ಲಿ 19 ಕೇಜಿ ತೂಕದ ಸಿಲಿಂಡರ್ ಬೆಲೆ 1603 ರೂಪಾಯಿ ಇದೆ.
ಮೇ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1595.50 ರೂಪಾಯಿ ಇತ್ತು. ಮುಂಬೈನಲ್ಲಿ ರೂ. 1545 ಇತ್ತು. ಕೋಲ್ಕತ್ತಾದಲ್ಲಿ 1667.50 ಇದ್ದರೆ, ಚೆನ್ನೈನಲ್ಲಿ ಕಳೆಆದ ತಿಂಗಳು 1725.50 ಇತ್ತು. ಆದರೆ ಗೃಹ ಬಳಕೆ ಎಲ್ಪಿಜಿ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ. ಅಂದರೆ 14.2 ಕೇಜಿ ತೂಕದ ಸಿಲಿಂಡರ್ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ.
ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್
(Commercial LPG cylinder price reduced by more than Rs 100 on June 1, 2021)
Published On - 1:17 pm, Tue, 1 June 21