Big Salary: ಎಐ, ಚ್ಯಾಟ್ಜಿಪಿಟಿ ಗೊತ್ತಿದ್ದವರಿಗೆ ಭರ್ಜರಿ ಡಿಮ್ಯಾಂಡ್; ಕೋಟಿಗಟ್ಟಲೆ ಸಂಬಳ ಕೊಡಲು ಕಾರ್ಪೊರೇಟ್ ಕಂಪನಿಗಳು ತಯಾರು
Demand For ChatGPT Experts: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡವರಿಗೆ ಕಾರ್ಪೊರೇಟ್ ವಲಯದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಎಐನ ತಜ್ಞರಿಗೆ ದೊಡ್ಡದೊಡ್ಡ ಸಂಬಳದ ಪ್ಯಾಕೇಜ್ ಕೊಡಲು ಕಂಪನಿಗಳು ಸಿದ್ಧ ಇವೆಯಂತೆ.
ನವದೆಹಲಿ: ಚ್ಯಾಟ್ಜಿಪಿಟಿ ಅಪ್ಲಿಕೇಶನ್ (ChatGPT) ಬಂದ ಬಳಿಕ ಹೆಚ್ಚಿನ ಜನರ ಕಿವಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನತ್ತ ನಿಮಿರಿದೆ. ಮುಂದಿನ ವರ್ಷಗಳಲ್ಲಿ ಎಐ ಹಲವು ಕ್ಷೇತ್ರಗಳಲ್ಲಿ ಬಹಳಷ್ಟು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂದು ವಿಶ್ವದ ಕೆಲ ತಜ್ಞರು ಹೇಳುತ್ತಿದ್ದಾರೆ. ಮತ್ತಿನ್ನೂ ಕೆಲವರು ಎಐ ತಂತ್ರಜ್ಞಾನ (AI Technology) ಆವಿಷ್ಕಾರಗೊಂಡಂತೆಲ್ಲಾ ಹೊಸ ಮಾದರಿಯ ಉದ್ಯೋಗಗಳ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಾರೆ. ಇದರ ನಡುವೆ ವಿವಿಧ ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ಕೆಲಸ ಹೋಗುವ ಭೀತಿಯಲ್ಲೇ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಇದೇ ವೇಳೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡವರಿಗೆ ಕಾರ್ಪೊರೇಟ್ ವಲಯದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಎಐನ ತಜ್ಞರಿಗೆ ದೊಡ್ಡದೊಡ್ಡ ಸಂಬಳದ ಪ್ಯಾಕೇಜ್ ಕೊಡಲು ಕಂಪನಿಗಳು ಸಿದ್ಧ ಇವೆ ಎಂದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದುಬಂದಿದೆ.
ರೆಸ್ಯೂಮ್ಬಿಲ್ಡರ್ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಶೇ. 91ರಷ್ಟು ಕಂಪನಿಗಳು ಚ್ಯಾಟ್ಜಿಪಿಟಿ ಬಗ್ಗೆ ಒಳ್ಳೆಯ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿವೆಯಂತೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ನಾನಾ ಸ್ತರಗಳಲ್ಲಿ ಒಂದು ವ್ಯವಹಾರಕ್ಕೆ ಸಹಾಯಕವಾಗುವುದರಿಂದ ಎಐ ತಜ್ಞರಿಗೆ ಒಳ್ಳೆಯ ಬೇಡಿಕೆ ಇದೆ.
ಮತ್ತೊಂದು ವರದಿ ಪ್ರಕಾರ ಲಿಂಕ್ಡ್ಇನ್ನಲ್ಲಿರುವ ವಿವಿಧ ಕಂಪನಿಗಳು ಚ್ಯಾಟ್ ಜಿಪಿಟಿ ತಜ್ಞರಿಗೆ 1,85,000 ಡಾಲರ್ವರೆಗೂ ಸಂಬಳ ಕೊಡಲು ಸಿದ್ದ ಇವೆಯಂತೆ. ಅಂದರೆ ವರ್ಷಕ್ಕೆ ಒಂದೂವರೆ ಕೋಟಿ ರೂವರೆಗೂ ಸಂಬಳದ ಆಫರ್ ಇದೆ.
ರೆಸ್ಯೂಮ್ಬಿಲ್ಡರ್ ಸಂಸ್ಥೆ ಲಿಂಕ್ಡ್ಇನ್ನಲ್ಲಿ 1,187 ಕಂಪನಿಗಳ ಸಮೀಕ್ಷೆ ಮಾಡಿದೆ. ಅವುಗಳ ಪೈಕಿ ಶೇ. 91ರಷ್ಟು ಕಂಪನಿಗಳು ಚ್ಯಾಟ್ಜಿಪಿಟಿ ಅನುಭವ ಹೊಂದಿರುವ ಉದ್ಯೋಗಿಗಳನ್ನು ನೇಮಕ ಮಾಡಲು ತುದಿಗಾಲಿನಲ್ಲಿವೆ. ಶೇ. 30ರಷ್ಟು ಕಂಪನಿಗಳಿಗೆ ಈ ತಜ್ಞರು ತೀರಾ ತುರ್ತಾಗಿ ಬೇಕಾಗಿದ್ದಾರಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ