Credit Card spend: ಜನವರಿಯಲ್ಲಿ ಕ್ರೆಡಿಟ್ ಕಾರ್ಡ್ನಿಂದ ಜನರ ವೆಚ್ಚ 1.84 ಲಕ್ಷ ಕೋಟಿ ರೂ
Credit card spend in January: 2025ರ ಜನವರಿ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಗ್ರಾಹಕರು ಮಾಡುತ್ತಿರುವ ವೆಚ್ಚ ಹಿಂದಿನ ವರ್ಷದಕ್ಕಿಂತ ಶೇ. 10.8ರಷ್ಟು ಹೆಚ್ಚಳ ಆಗಿದೆ. ಆರ್ಬಿಐ ದತ್ತಾಂಶದ ಪ್ರಕಾರ ಜನವರಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಜನರು ಮಾಡಿರುವ ವೆಚ್ಚ 1.84 ಕೋಟಿ ರೂ ಆಗಿದೆ. ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ಗಳು, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಿಂದ ಅತಿ ಹೆಚ್ಚು ವೆಚ್ಚವಾಗಿದೆ. ವೆಚ್ಚದಲ್ಲೂ ಅತಿಹೆಚ್ಚು ಏರಿಕೆ ಆಗಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುತ್ತಿರುವ ವೆಚ್ಚ ಕಳೆದ ತಿಂಗಳು (2025ರ ಜನವರಿ) 1.84 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ತಿಂಗಳಿಗೆ (2024ರ ಡಿಸೆಂಬರ್) ಹೋಲಿಸಿದರೆ ವೆಚ್ಚದಲ್ಲಿ ತುಸು ಇಳಿಕೆಯಾಗಿದೆಯಾದರೂ, ಹಿಂದಿನ ವರ್ಷದ ಇದೇ ತಿಂಗಳಿಗೆ (2024ರ ಜನವರಿ) ಹೋಲಿಸಿದರೆ ಕ್ರೆಡಿಟ್ ಕಾರ್ಡ್ ವೆಚ್ಚ ಶೇ. 10.8ರಷ್ಟು ಹೆಚ್ಚಳವಾಗಿದೆ. ಆರ್ಬಿಐ ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ಗಳಿಂದ ಜನರು ಮಾಡುತ್ತಿರುವ ವೆಚ್ಚ ಜನವರಿಯಲ್ಲಿ 50,664 ಕೋಟಿ ರೂ ಇದೆ. ಇದರಲ್ಲಿ ಶೇ. 15.91ರಷ್ಟು ಏರಿಕೆ ಆಗಿದೆ.
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೆಚ್ ಶೇ. 20.25ರಷ್ಟು ಹೆಚ್ಚಳವಾಗಿ 35,682 ಕೋಟಿ ರೂ ಆಗಿದೆ. ಇನ್ನೊಂದೆಡೆ ಎಸ್ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ವೆಚ್ಚದಲ್ಲಿ ಇಳಿಮುಖವಾಗಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ಗಳ ವೆಚ್ಚ ಶೇ. 6ರಷ್ಟು ಕುಸಿತವಾಗಿ 28,976 ಕೋಟಿ ರೂ ಆಗಿದೆ. ಎಕ್ಸಿಸ್ ಬ್ಯಾಂಕ್ ಶೇ. 7.38ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ಅದರ ಕ್ರೆಡಿಟ್ ಕಾರ್ಡ್ಗಳ ವೆಚ್ಚ 13,673.41 ಕೋಟಿ ರೂಗೆ ಇಳಿದಿದೆ.
ಪ್ರತೀ ಕಾರ್ಡ್ನ ಸರಾಸರಿ ವೆಚ್ಚದಲ್ಲಿ ಶೇ. 1.09ರಷ್ಟು ಏರಿಕೆ ಆಗಿದೆ. 2025ರ ಜನವರಿಯಲ್ಲಿ ಒಂದು ಕಾರ್ಡ್ಗೆ ಸರಾಸರಿಯಾಗಿ 16,910 ರೂ ಬಳಕೆ ಆಗಿರುವುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ. ಪ್ರಮುಖ ಕ್ರೆಡಿಟ್ ಕಾರ್ಡ್ಗಳ ಪೈಕಿ ಐಸಿಐಸಿಐ ಮಾತ್ರವೇ ಸರಾಸರಿ ಕಾರ್ಡ್ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡಿರುವುದು. ಜನವರಿ ತಿಂಗಳಲ್ಲಿ ಐಸಿಐಸಿಐ ಕಾರ್ಡ್ನ ಸರಾಸರಿ ಬಳಕೆ ಶೇ. 11.69ರಷ್ಟು ಏರಿಕೆ ಆಗಿ 19,730 ರೂ ಮುಟ್ಟಿದೆ. ಎಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ, ಎಕ್ಸಿಸ್ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ಗಳ ಸರಾಸರಿ ವೆಚ್ಚವು ಹಿಂದಿನ ವರ್ಷದಕ್ಕಿಂತ ಕಡಿಮೆ ಇದೆ.
ಹೊಸ ಕಾರ್ಡ್ಗಳ ವಿತರಣೆಯಲ್ಲಿ ಇಳಿಕೆ
ಜನವರಿ ತಿಂಗಳಲ್ಲಿ ಹೊಸ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ ಶೇ. 9.4ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಚಾಲನೆಯಲ್ಲಿರುವ ಒಟ್ಟು ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 10.9 ಕೋಟಿಗೆ ಏರಿದೆ. ಜನವರಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ 2,99,761 ಹೊಸ ಕಾರ್ಡ್ಗಳನ್ನು ಮಾರಿದೆ. ಎಸ್ಬಿಐ 2,34,537 ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಿದೆ. ಐಸಿಐಸಿಐ ಬ್ಯಾಂಕ್ನ 1,83,157 ಕ್ರೆಡಿಟ್ ಕಾರ್ಡ್ಗಳು ಮಾರಾಟವಾಗಿವೆ. ಆದರೆ, ಎಕ್ಸಿಸ್ ಬ್ಯಾಂಕ್ನ ಬಳಕೆ ಇರುವ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 14,862ರಷ್ಟು ಕಡಿಮೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ