DA Hike: ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ಡಿಎ, ಡಿಆರ್ ಹೆಚ್ಚಳ ಸಾಧ್ಯತೆ; ಮಾರ್ಚ್ನಲ್ಲಿ ನಿರ್ಧಾರ ಪ್ರಕಟ; ಸಂಬಳ ಹೆಚ್ಚಳ ಎಷ್ಟಾಗಬಹುದು?
7th Pay Commission Updates: ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗುತ್ತದೆ. ಜನವರಿ ಹೆಚ್ಚಳವನ್ನು ಮಾರ್ಚ್ನಲ್ಲಿ ಘೋಷಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಈ ಬಾರಿಯ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಲಾಗುತ್ತದೆ. ಇದರೊಂದಿಗೆ ಡಿಎ ಶೇ. 50ಕ್ಕೆ ಏರುತ್ತದೆ. ಡಿಎ ಮತ್ತು ಡಿಆರ್ ಹೆಚ್ಚಳದಿಂದ 1.18 ಮಂದಿ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ.
ನವದೆಹಲಿ, ಜನವರಿ 4: ಜನವರಿಯಿಂದ ಜೂನ್ವರೆಗಿನ ಅವಧಿಯ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳದ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯ ಸರ್ಕಾರಿ ಉದ್ಯೋಗಿಗಳಿಗೆ ಡಿಯರ್ನೆಸ್ ಅಲೋಯೆನ್ಸ್ ಶೇ. 46ರಷ್ಟು ಇದೆ. ಇನ್ನು ಪಿಂಚಣಿದಾರರಿಗೆ ಸಿಗುವ ಡಿಆರ್ ಕೂಡ ಶೇ. 46ರಷ್ಟು ಇದೆ. ಶೇ. 4ರಷ್ಟು ಹೆಚ್ಚಳವಾದರೆ ಡಿಎ ಮತ್ತು ಡಿಆರ್ ಶೇ. 50ಕ್ಕೆ ಏರುತ್ತದೆ.
ಡಿಎ ಹೆಚ್ಚಳವು ಸೇವೆಯಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನಕ್ಕೆ ಸೇರ್ಪಡೆಯಾಗುತ್ತದೆ. ಡಿಯರ್ನೆಸ್ ರಿಲೀಫ್ ಅಥವಾ ಡಿಆರ್ ಎಂಬುದು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ನಿವೃತ್ತರಾಗಿ ಪಿಂಚಣಿ ಪಡೆಯುವವರಿಗೆ ಅನ್ವಯ ಆಗುತ್ತದೆ. ಮಾರ್ಚ್ನಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳ ನಿರ್ಧಾರ ಪ್ರಕಟವಾದರೂ ಅದು ಜನವರಿ 1ರಿಂದ ಅನ್ವಯ ಆಗುತ್ತದೆ. ಅಂದರೆ, ಏಪ್ರಿಲ್ನಲ್ಲಿ ಕೈಗೆ ಸಿಗುವ ಸಂಬಳದಲ್ಲಿ ಮೂರು ತಿಂಗಳ ಅರಿಯರ್ಸ್ ಸಮೇತ ತುಟ್ಟಿಭತ್ಯೆ ಹಣ ಬರುತ್ತದೆ.
ಇದನ್ನೂ ಓದಿ: ಚೆನ್ನೈ: ತನ್ನ 50 ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಐಟಿ ಕಂಪನಿ
ಸರ್ಕಾರಿ ಉದ್ಯೋಗಿಗಳಿಗೆ ಯಾಕೆ ಸಿಗುತ್ತೆ ಡಿಎ ಮತ್ತು ಡಿಆರ್?
ವರ್ಷದಲ್ಲಿ ಶೇ. 4ರಿಂದ ಶೇ. 10ರಷ್ಟು ಬೆಲೆ ಹೆಚ್ಚಳ ಇರುತ್ತದೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಾದರೂ ಬೆಲೆ ಏರಿಕೆಯಿಂದಾಗಿ ಸಂಬಳ ಹೆಚ್ಚಳದ ಲಾಭ ಉದ್ಯೋಗಿಗೆ ಹೆಚ್ಚೇನೂ ಸಿಗುವುದಿಲ್ಲ. ಹೀಗಾಗಿ, ಬೆಲೆ ಏರಿಕೆಗೆ ಸರಿದೂಗಿಸುವಂತೆ ಭತ್ಯೆ ನೀಡಲಾಗುತ್ತದೆ. ಅದೇ ಡಿಯರ್ನೆಸ್ ಅಲೋಯನ್ಸ್ ಅಥವಾ ತುಟ್ಟಿಭತ್ಯೆ.
ದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಬೆಲೆ ಹೆಚ್ಚಳ ಆಗಿದೆ ಅದರ ಅಧಾರದ ಮೇಲೆ ಡಿಎ ಎಷ್ಟು ಹೆಚ್ಚಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅಂದರೆ ಗ್ರಾಹಕ ಬೆಲೆ ಅನುಸೂಚಿ ಅಥವಾ ಹಣದುಬ್ಬರ ದರ ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್
ಉದ್ಯೋಗಿಯ ಮೂಲ ವೇತನಕ್ಕೆ ಡಿಎ ನೀಡಲಾಗುತ್ತದೆ. ಮೂಲ ವೇತನ 20,000 ರೂ ಇದ್ದರೆ ಶೇ. 46ರಷ್ಟು ಡಿಎ ಎಂದರೆ 9,200 ರೂ ಆಗುತ್ತದೆ. ಶೇ. 4ರಷ್ಟು ಡಿಎ ಹೆಚ್ಚಿಸಿದರೆ ಶೇ. 50 ಡಿಎ ಆಗುತ್ತದೆ. ಅಂದರೆ ಡಿಎ ಮೊತ್ತ 10,000 ರೂ ಆಗುತ್ತದೆ. ಆ ಉದ್ಯೋಗಿಯ ಸಂಬಳದಲ್ಲಿ 800 ರೂನಷ್ಟು ಹೆಚ್ಚಳ ಆಗುತ್ತದೆ.
ಎಷ್ಟು ಮಂದಿ ಸರ್ಕಾರಿ ಉದ್ಯೋಗಿಗಳಿದ್ದಾರೆ?
ಕೇಂದ್ರ ಸರ್ಕಾರದ ಉದ್ಯೋಗಿಗಳ ಸಂಖ್ಯೆ 48.67 ಲಕ್ಷ ಇದೆ. ಇನ್ನು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರ ಸಂಖ್ಯೆ 67.95 ಲಕ್ಷ ಇದೆ. ಇದರೊಂದಿಗೆ ಡಿಎ ಮತ್ತು ಡಿಆರ್ ಹೆಚ್ಚಳದ ಲಾಭವನ್ನು 1.16 ಕೋಟಿ ಮಂದಿ ಹಾಗೂ ಅವರ ಕುಟುಂಬ ಪಡೆಯಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ