ನವದೆಹಲಿ, ನವೆಂಬರ್ 18: ಭಾರತದಲ್ಲಿ ಅಧಿಕೃತ ಷೇರು ಬಜಾರಿಗೆ ಮತ್ತು ಸರ್ಕಾರಕ್ಕೆ ತಲೆನೋವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ತಲೆ ಎತ್ತುತ್ತಿದೆ. ಷೇರುಪೇಟೆ ದಿನೇ ದಿನೇ ಕುಸಿತ ಕಾಣುತ್ತಿದ್ದು ಅದರ ಪರಿಣಾಮವು ಎಫ್ ಅಂಡ್ ಒ ಟ್ರೇಡಿಂಗ್ನಂತಹ ಡಿರೈವೇಟಿವ್ ಮಾರುಕಟ್ಟೆಗಳಲ್ಲಿ ವ್ಯವಹಾರ ಕಡಿಮೆ ಆಗುತ್ತಿದೆ. ಇದರ ಬೆನ್ನಲ್ಲೇ ಕಾಳಸಂತೆಯಂತೆ ಕಾಣದ ಕಣ್ಮರೆ ನಡೆಯುವ ಡಬ್ಬಾ ಟ್ರೇಡಿಂಗ್ ಹೊಸ ಹುರುಪಿನೊಂದಿಗೆ ಕಂಬ್ಯಾಕ್ ಮಾಡಿದೆ. ಷೇರು ಮಾರುಕಟ್ಟೆಯ ನಿರಂತರ ಕುಸಿತದಿಂದ ಜರ್ಝರಿತರಾದ ಹಲವು ಹೂಡಿಕೆದಾರರು ಈ ಡಬ್ಬಾ ಮಾರುಕಟ್ಟೆಗೆ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಈ ಅನಧಿಕೃತ ಟ್ರೇಡಿಂಗ್ಗಳಲ್ಲಿ ಒಂದು ದಿನಕ್ಕೆ ಬರೋಬ್ಬರಿ 100 ಲಕ್ಷ ಕೋಟಿ ರೂ ಮೊತ್ತದ ವಹಿವಾಟು ನಡೆಯುತ್ತಿದೆಯಂತೆ.
ಮಾರುಕಟ್ಟೆ ತಜ್ಞರ ಪ್ರಕಾರ ಡಬ್ಬಾ ಟ್ರೇಡಿಂಗ್ನಲ್ಲಿ ಆಗುತ್ತಿರುವ ವಹಿವಾಟು ಎಫ್ ಅಂಡ್ ಒ ಟ್ರೇಡಿಂಗ್ನ ಶೇ. 20ರಷ್ಟಿದೆ ಎನ್ನಲಾಗಿದೆ. ತೊಂಬತ್ತರ ದಶಕ ಮತ್ತು 2000ದ ದಶಕದಲ್ಲಿ ಡಬ್ಡಾ ಟ್ರೇಡಿಂಗ್ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಎಫ್ ಅಂಡ್ ಒದ ವಹಿವಾಟಿನ ಶೇ. 30ರಿಂದ 35ರಷ್ಟು ಮೊತ್ತದ ಹಣವು ಆಗ ಡಬ್ಬಾ ಟ್ರೇಡಿಂಗ್ನಲ್ಲಿ ಚಲಾವಣೆ ಆಗುತ್ತಿತ್ತಂತೆ. ಈಗ ಅದು ಶೇ. 20ರಷ್ಟಿದೆ. ಇದು ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಪರಿಣಿತರು.
ಇದನ್ನೂ ಓದಿ: ಜನರಿಂದ, ಜನರಿಗೋಸ್ಕರ ಇರುವ ಸಂಸ್ಥೆಯಾಗಬೇಕು; 500 ವರ್ಷ ನಡೆಯಬೇಕು: ಕನಸು ಬಿಚ್ಚಿಟ್ಟ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್
ಡಬ್ಬಾ ಟ್ರೇಡಿಂಗ್ ಅನಧಿಕೃತವಾಗಿ ನಡೆಯುವ ಮಾರುಕಟ್ಟೆ. ಅಧಿಕೃತ ಷೇರು ಬಜಾರಿನಂತೆಯೇ ಇದೂ ಕಾರ್ಯನಿರ್ವಹಿಸುತ್ತದೆ. ವಿನಿಮಯ ಕೇಂದ್ರಗಳಿರುತ್ತವೆ. ಬ್ರೋಕರ್ಗಳೂ ಇರುತ್ತಾರೆ. ಆದರೆ, ಇವರಿಗೆಲ್ಲಾ ಕಾನೂನು ಕಟ್ಟಳೆಗಳಿರುವುದಿಲ್ಲ. ಹಣ ಲಪಟಾಯಿಸಿದರೆ ಹೇಳುವವರು, ಕೇಳುವವರು ಇರುವುದಿಲ್ಲ.
ಡಬ್ಬಾ ಟ್ರೇಡಿಂಗ್ ಮಾರುಕಟ್ಟೆಯು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲವಾದ್ದರಿಂದ ನಿಯಮಗಳೆಲ್ಲವೂ ಆಕರ್ಷಕವಾಗಿರುತ್ತವೆ. ತೆರಿಗೆ ಇರುವುದಿಲ್ಲ, ಶುಲ್ಕ ಇರುವುದಿಲ್ಲ. ಷೇರುಗಳ ಲಾಟ್ ಕೂಡ ಕಡಿಮೆ ಇರುತ್ತದೆ. ಟ್ರೇಡರ್ಗಳು ಗೌಪ್ಯವಾಗಿ ವ್ಯವಹಾರ ನಡೆಸಬಹುದು.
ಡಬ್ಬಾ ಟ್ರೇಡರ್ವೊಬ್ಬ ಭಾರಿ ನಷ್ಟ ಕಂಡು ಕಣ್ಮರೆಯಾಗಿಬಿಟ್ಟರೆ, ಹೂಡಿಕೆದಾರರಿಗೆ ಅವರ ಹಣ ಹಿಂಪಡೆಯುವ ದಾರಿಯೇ ಇರುವುದಿಲ್ಲ.
ಇನ್ನೊಂದೆಡೆ ಷೇರು ಮಾರುಕಟ್ಟೆಯಲ್ಲಿ ಅಧಿಕೃತವಾಗಿರುವ ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಸೆಬಿ ಕಠಿಣ ನಿಯಮ, ಶುಲ್ಕಗಳನ್ನು ಹಾಕುತ್ತಿದೆ. ಹೀಗಾಗಿ, ಇಲ್ಲಿ ಶೇ. 40ರಷ್ಟು ಟ್ರೇಡಿಂಗ್ ಕಡಿಮೆ ಆಗುತ್ತಿದೆ. ಇಲ್ಲಿಂದ ಹೊರಹೋಗುತ್ತಿರುವ ಟ್ರೇಡರ್ಗಳು ಡಬ್ಬಾ ಟ್ರೇಡಿಂಗ್, ಗೇಮಿಂಗ್ ಇತ್ಯಾದಿ ಕಡೆ ವಾಲುತ್ತಿರಬಹುದು ಎನ್ನಲಾಗಿದೆ.
ಅಧಿಕೃತ ಷೇರು ಮಾರುಕಟ್ಟೆಯಲ್ಲಿ ಸರ್ಕಾರ ತೆರಿಗೆ ಮೊತ್ತವನ್ನು ಕಡಿಮೆ ಮಾಡಿದರೆ ಅನಧಿಕೃತ ಟ್ರೇಡಿಂಗ್ ಭೂತ ಆವರಿಸದಂತೆ ನಿಯಂತ್ರಿಸಬಹುದು ಎನ್ನುವುದು ಕೆಲ ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ