World’s Top Airports: ವಿಶ್ವದ ಟಾಪ್ 50 ಏರ್ಪೋರ್ಟ್ನಲ್ಲಿ ದೆಹಲಿಗೆ ಸ್ಥಾನ, ಟಾಪ್ 100ರೊಳಗಿದೆ ಬೆಂಗಳೂರು
ವಿಶ್ವದ ಟಾಪ್ 50 ಏರ್ಪೋರ್ಟ್ಗಳ ಪಟ್ಟಿಯಲ್ಲಿ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಟಾಪ್ 100ರೊಳಗಿದೆ.
ವಿಶ್ವದ ಟಾಪ್ -50 ವಿಮಾನ ನಿಲ್ದಾಣಗಳು ಎಂಬ ಪಟ್ಟಿಯಲ್ಲಿ ಭಾರತದ ಏರ್ಪೋರ್ಟ್ವೊಂದಕ್ಕೆ ಸ್ಥಾನ ದಕ್ಕಿದೆ. ಸ್ಕೈಟ್ರ್ಯಾಕ್ಸ್ ಏರ್ಪೋರ್ಟ್ ಅವಾರ್ಡ್ Rankingನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈ ಅಗ್ಗಳಿಕೆ ಪಡೆದಿದೆ. ಹೀಗೆ ಸತತ ಮೂರನೇ ವರ್ಷ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಇದರ ಜತೆಗೆ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ವಿಶ್ವದ 100 ಅತ್ಯುತ್ತಮ ಏರ್ಪೋರ್ಟ್ಗಳು ಎನಿಸಿಕೊಂಡಿವೆ ಎಂದು ಯುನೈಟೆಡ್ ಕಿಂಗ್ಡಮ್ ಮೂಲದ ಏರ್ಲೈನ್ ಪರಿಶೀಲನಾ ಕನ್ಸಲ್ಟೆನ್ಸಿ ಸ್ಕೈಟ್ರ್ಯಾಕ್ಸ್ ಹೇಳಿದೆ.
2021ನೇ ಸಾಲಿನಲ್ಲಿ ಸ್ಕೈಟ್ರ್ಯಾಕ್ಸ್ ಸಿದ್ಧಪಡಿಸಿರುವ ಪಟ್ಟಿಯಂತೆ ದೆಹಲಿಯ ವಿಮಾನ ನಿಲ್ದಾಣಕ್ಕೆ 45ನೇ ಸ್ಥಾನ ಸಿಕ್ಕಿದೆ (2020ನೇ ಇಸವಿಯಲ್ಲಿ 50ನೇ ಸ್ಥಾನದಲ್ಲಿತ್ತು). ಹೈದರಾಬಾದ್ 64 (ಹಿಂದಿನ ವರ್ಷ 71ರಲ್ಲಿತ್ತು), ಮುಂಬೈ 65 (ಕಳೆದ ವರ್ಷ 52ನೇ ಸ್ಥಾನದಲ್ಲಿತ್ತು), ಇನ್ನು ಬೆಂಗಳೂರು 71 (2020ನೇ ಇಸವಿಯಲ್ಲಿ 68ನೇ ಸ್ಥಾನದಲ್ಲಿತ್ತು)ನೇ ಶ್ರೇಯಾಂಕದಲ್ಲಿ ಇದೆ. ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ ಕಾರ್ಯ ನಿರ್ವಹಣೆಯ ಹೊಣೆ ಜಿಎಂಆರ್ ಸಮೂಹದ್ದು. ಈಗಿನ ಪಟ್ಟಿ ಬಿಡುಗಡೆಯ ನಂತರ ಸಮೂಹದ ಪರವಾಗಿ ಮಾತನಾಡಿರುವ ಸಂಬಂಧಪಟ್ಟವರು, 2020ರಲ್ಲಿ 50ನೇ ಸ್ಥಾನದಲ್ಲಿ ಇದ್ದ ದೆಹಲಿಯು 2021ರಲ್ಲಿ 45ನೇ ಸ್ಥಾನಕ್ಕೆ ಬಂದಿದೆ. ಇಂಥ ಸಾಧನೆ (50ರ ಪಟ್ಟಿಯೊಳಗೆ ಬಂದಿರುವಂಥದ್ದು) ಮೊದಲ ಭಾರತೀಯ ವಿಮಾನ ನಿಲ್ದಾಣ ಇದು ಎಂದಿದ್ದಾರೆ.
ಇನ್ನು ಜಾಗತಿಕ ಮಟ್ಟದಲ್ಲಿ ವಿಶ್ವದ ಟಾಪ್ 5 ವಿಮಾನ ನಿಲ್ದಾಣಗಳು ಎನಿಸಿಕೊಂಡಿರುವಂಥವು: ದೋಹಾ ಹಮದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಟೋಕಿಯೋ ಹನೆಡಾ ನಿಲ್ದಾಣ, ಸಿಂಗಾಪೂರ್ನ ಚಂಗಿ ವಿಮಾನ ನಿಲ್ದಾಣ, ಸಿಯೋಲ್ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಟೋಕಿಯೋದ ನರಿಟಾ. ಅಂದ ಹಾಗೆ ಈ ಶ್ರೇಯಾಂಕಗಳನ್ನು ನೀಡಿರುವುದು ಗ್ರಾಹಕರ ರಿವ್ಯೂ ಆಧಾರದಲ್ಲಿ. 550 ವಿಮಾನ ನಿಲ್ದಾಣಗಳಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆ ಮತ್ತು ಇರುವಂಥ ವ್ಯವಸ್ಥೆಗಳನ್ನು ಅಳೆದು- ತೂಗಿದ ನಂತರ ಈ ಪಟ್ಟಿಯನ್ನು ಸ್ಕೈಟ್ರ್ಯಾಕ್ಸ್ನಿಂದ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: Adani Group: ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಅದಾನಿ ಸಮೂಹ
ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಒಂದು ವರ್ಷ; ಅಂದೇನಾಗಿತ್ತು? ಈಗ ಹೇಗಿದೆ?
(Delhi Indira Gandhi International Airport Ranked Among World’s Top 50 Airport Bengaluru Airport In Top 100)