ಸಾಂದರ್ಭಿಕ ಚಿತ್ರ
ದೀಪಾವಳಿಯ (Diwali) ಮೊದಲ ದಿನ ಅಥವಾ ಧನತೇರಸ್ನಂದು (Dhanteras) ಚಿನ್ನ ಖರೀದಿಸುವುದು ಶುಭವೆಂಬ ನಂಬಿಕೆ ಹೆಚ್ಚಿನ ಭಾರತೀಯರಲ್ಲಿದೆ. ಅಕ್ಟೋಬರ್ 22ರಂದು ಧನತೇರಸ್ ಅಥವಾ ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ ಆರಂಭವಾಗಲಿದೆ. ಈ ಶುಭ ಸಂದರ್ಭದಲ್ಲಿ ಅನೇಕರು ಚಿನ್ನ ಖರೀದಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಧನತೇರಸ್ ದಿನ ಚಿನ್ನ ಖರೀದಿಸುವುದರಿಂದ ವರ್ಷವಿಡೀ ಶುಭವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಬಾರಿ ನೀವು ಶುಭ ದಿನದಂದು ಆನ್ಲೈನ್ ಮೂಲಕವೂ ಚಿನ್ನ ಖರೀದಿಸಬಹುದು ಅಥವಾ ಹೂಡಿಕೆ ಮಾಡಬಹುದು. ಗೂಗಲ್ ಪೇ (Google Pay), ಪೇಟಿಎಂ (Paytm) ಮೂಲಕ ಡಿಜಿಟಲ್ ಚಿನ್ನವನ್ನೂ ಖರೀದಿಸಬಹುದು! ಈ ಎರಡು ಆನ್ಲೈನ್ ತಾಣಗಳ ಮೂಲಕ ಹೇಗೆ ಚಿನ್ನ ಖರೀದಿಸಬಹುದು ಎಂಬ ಕುರಿತು ಇಲ್ಲಿದೆ ಮಾಹಿತಿ.
ಇದನ್ನೂ ಓದಿ: Diwali 2022: ಹಬ್ಬ ಆಚರಿಸಲು ಊರಿಗೆ ಮರಳುತ್ತಿರುವವರಿಗೆ ಶುಭಸುದ್ದಿ, ಮೂರು ವಿಶೇಷ ರೈಲುಗಳ ಸಂಚಾರ
ಡಿಜಿಟಲ್ ಚಿನ್ನವು ಹೂಡಿಕೆಗೂ ಪ್ರಶಸ್ತವಾಗಿದೆ. ಹೂಡಿಕೆ ದೃಷ್ಟಿಯಿಂದ ಚಿನ್ನ ಖರೀದಿಸುವವರು ಆನ್ಲೈನ್ ಮೂಲಕ ಖರೀದಿ ಮಾಡಿದರೆ ಅದನ್ನು ನಿರ್ವಹಿಸುವುದು ಹಾಗೂ ಅಗತ್ಯಬಿದ್ದಾಗ ಮಾರಾಟ ಮಾಡುವುದು ಸುಲಭ. ಆದರೆ ಒಂದು ಅಂಶ ಗಮನಿಸಿ, ಎರಡೂ ಆ್ಯಪ್ ಮೂಲಕ ಚಿನ್ನ ಖರೀದಿಸಿದಾಗ ಶೇ 3ರ ಜಿಎಸ್ಟಿ ತೆರಬೇಕಾಗುತ್ತದೆ.
ಗೂಗಲ್ ಪೇನಲ್ಲಿ ಚಿನ್ನ ಖರೀದಿ ಹೇಗೆ?:
- ಗೂಗಲ್ ಪೇ ಓಪನ್ ಮಾಡಿ ಟೇಪ್ ಮಾಡಿ
- ಸರ್ಚ್ ಬಾರ್ನಲ್ಲಿ ‘ಗೋಲ್ಡ್ ಲಾಕರ್’ ಮೇಲೆ ಎಂಟರ್ ಮಾಡಿ ಸರ್ಚ್ ಕೊಡಿ
- ‘ಗೋಲ್ಡ್ ಲಾಕರ್’ ಮೇಲೆ ಕ್ಲಿಕ್ ಮಾಡಿ. ಅಷ್ಟರಲ್ಲಿ ಪ್ರಸಕ್ತ ಚಿನ್ನದ ದರ (ತೆರಿಗೆ ಸಹಿತ) ಡಿಸ್ಪ್ಲೇ ಆಗುತ್ತದೆ. ಖರೀದಿ ಪ್ರಕ್ರಿಯೆ ಆರಂಭಿಸಿದ 5 ನಿಮಿಷಗಳ ವರೆಗೆ ದರ ಲಾಕ್ ಆಗಿರುತ್ತದೆ. ಒಮ್ಮೆ ಖರೀದಿ ಪ್ರಕ್ರಿಯೆ ಮುಗಿದ ನಂತರ ದಿನದ ಆಯಾ ಸಂದರ್ಭಕ್ಕನುಸಾರ ದರ ಬದಲಾಗುತ್ತಿರುತ್ತದೆ.
- ಎಷ್ಟು ಮೊತ್ತದ ಚಿನ್ನ ಖರೀದಿಸಬೇಕು ಎಂದಿದ್ದೀರೋ ಆ ಮೊತ್ತವನ್ನು ನಮೂದಿಸಿ. ಇಲ್ಲಿ ನೀವು ಖರೀದಿಸಬಹುದಾದ ಚಿನ್ನದ ಒಟ್ಟು ಮೌಲ್ಯದ ಮೇಲೆ ಮಿತಿ ಇರುವುದಿಲ್ಲ. ಆದಾಗ್ಯೂ, ದಿನವೊಂದರಲ್ಲಿ 50,000 ರೂಪಾಯಿ ಮೌಲ್ಯದ ಚಿನ್ನವನ್ನು ಮಾತ್ರ ಖರೀದಿಸಬಹುದು. ಖರೀದಿಯ ಕನಿಷ್ಠ ದರ 1 ರೂಪಾಯಿ ಆಗಿದೆ.
- ಬಳಿಕ ಮೊತ್ತದ ಮೇಲೆ ಟಿಕ್ ಮಾಡಿ. ಇನ್ನೊಂದು ವಿಂಡೋ ತೆರೆದುಕೊಳ್ಳುತ್ತದೆ. ಇಲ್ಲಿ ಪಾವತಿಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.
- ಪಾವತಿ ಮಾಡಲು ಮುಂದುವರಿಯಿರಿ. ಹಣ ಪಾವತಿಯಾದ ಕೆಲವೇ ನಿಮಿಷಗಳಲ್ಲಿ ಚಿನ್ನ ನಿಮ್ಮ ಲಾಕರ್ನಲ್ಲಿರುತ್ತದೆ. ಒಮ್ಮೆ ಪಾವತಿ ಪ್ರಕ್ರಿಯೆ ಆರಂಭವಾದರೆ ಕ್ಯಾನ್ಸಲ್ ಆಯ್ಕೆ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದಾಗ್ಯೂ, ಪ್ರಸಕ್ತ ಮಾರುಕಟ್ಟೆ ದರಕ್ಕನುಗುಣವಾಗಿ ಮಾರಾಟ ಮಾಡಲು ನೀವು ಸ್ವತಂತ್ರರಾಗಿದ್ದೀರಿ.
ಪೇಟಿಎಂನಲ್ಲಿ ಚಿನ್ನ ಖರೀದಿ ಹೇಗೆ?:
- ಪೇಟಿಎಂ ಆ್ಯಪ್ ಓಪನ್ ಮಾಡಿ ‘ಆಲ್ ಸರ್ವೀಸ್ ಸೆಕ್ಷನ್’ಗೆ ನ್ಯಾವಿಗೇಟ್ ಮಾಡಿ.
- ಸರ್ಚ್ ಬಾರ್ಗೆ ತೆರಳಿ ‘ಗೋಲ್ಡ್’ ಎಂದು ಸರ್ಚ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ.
- ನೀವು ಎಷ್ಟು ಗ್ರಾಂ ಚಿನ್ನ ಖರೀದಿಸಲು ಉದ್ದೇಶಿಸಿದ್ದೀರೋ ಅದರ ಮೊತ್ತವನ್ನು ನಮೂದಿಸಿ. ನಂತರ ‘ಕಂಟಿನ್ಯೂ’ ಕ್ಲಿಕ್ ಮಾಡಿ.
- ಡಿಜಿಟಲ್ ಚಿನ್ನ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ. ಪೇಟಿಎಂ ವಾಲೆಟ್, ಯುಪಿಐ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು.