DMart Results: ಡಿಸೆಂಬರ್ ತ್ರೈಮಾಸಿಕಕ್ಕೆ ಡಿಮಾರ್ಟ್ ನಿವ್ವಳ ಲಾಭ ಶೇ 25ರಷ್ಟು ಏರಿಕೆಯಾಗಿ 586 ಕೋಟಿ ರೂ.
ಅವೆನ್ಯೂ ಮಾರ್ಟ್ (ಡಿಮಾರ್ಟ್) ಡಿಸೆಂಬರ್ ಕೊನೆ ತ್ರೈಮಾಸಿಕದಲ್ಲಿ ಶೇ 25ರಷ್ಟು ನಿವ್ವಳ ಲಾಭ ಹೆಚ್ಚಳವಾಗಿ 586 ಕೋಟಿ ರೂಪಾಯಿ ತಲುಪಿದೆ.
ಅವೆನ್ಯೂ ಸೂಪರ್‌ಮಾರ್ಟ್ಸ್ (DMart) ಶನಿವಾರ ಡಿಸೆಂಬರ್ 31, 2021ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ 586 ಕೋಟಿ ರೂಪಾಯಿಗಳ ಏಕೀಕೃತ ನಿವ್ವಳ ಲಾಭದಲ್ಲಿ ಶೇ 24.6ರಷ್ಟು ಏರಿಕೆಯನ್ನು ವರದಿ ಮಾಡಿದೆ. ರಾಧಾಕಿಶನ್ ದಮಾನಿ ಪ್ರಮೋಟರ್ ಆದ ಈ ರೀಟೇಲ್ ಸರಪಳಿಯು ಒಂದು ವರ್ಷದ ಹಿಂದೆ 470 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಕಾರ್ಯಾಚರಣೆಗಳಿಂದ ಸ್ವತಂತ್ರ ಆದಾಯವು ಶೇ 22ರಷ್ಟು ಏರಿಕೆಯಾಗಿದ್ದು, 9,065 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷದ ಹಿಂದೆ 7,432 ಕೋಟಿ ರೂಪಾಯಿ ಇತ್ತು. ಶುಕ್ರವಾರದಂದು ಬಿಎಸ್‌ಇಯಲ್ಲಿ ಅವೆನ್ಯೂ ಸೂಪರ್‌ಮಾರ್ಟ್ಸ್ ಸ್ಟಾಕ್ನಲ್ಲಿ ಶೇ 0.5ರಷ್ಟು ಹೆಚ್ಚಾಗಿ, 4,730 ರೂಪಾಯಿಗೆ ಕೊನೆಗೊಂಡಿತು.
ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ನೆವಿಲ್ಲೆ ನರೊನ್ಹಾ ಮಾತನಾಡಿ, “ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಪ್ರಸಕ್ತ ತ್ರೈಮಾಸಿಕದಲ್ಲಿ ಡಿಮಾರ್ಟ್ ಸ್ಟೋರ್‌ಗಳಲ್ಲಿನ ಆದಾಯವು ಶೇ 22ರಷ್ಟು ಹೆಚ್ಚಾಗಿದೆ. ಒಟ್ಟಾರೆ ಮಿಶ್ರಣದ ಇಳಿಕೆಯಿಂದಾಗಿ ಒಟ್ಟು ಮಾರ್ಜಿನ್ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸಾಮಾನ್ಯ ಸರಕುಗಳು ಮತ್ತು ಉಡುಪುಗಳ ವ್ಯಾಪಾರವು ತುಲನಾತ್ಮಕವಾಗಿ ಕಡಿಮೆ ಮಾರಾಟದ ಕೊಡುಗೆಯನ್ನು ಕಾಣುತ್ತಿದೆ. ಆದರೆ ಅಗತ್ಯ ವಸ್ತುಗಳು ಮತ್ತು ಎಫ್ಎಂಸಿಜಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಣದುಬ್ಬರ ಮತ್ತು ಹೊರಹೋಗಲು ಕಡಿಮೆ ಅವಕಾಶಗಳು ಇತರರಿಗಿಂತ ಕೆಲವು ವರ್ಗಗಳ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತವೆ. ಹೆಚ್ಚಿನ ಹಣದುಬ್ಬರವು ನಮ್ಮ ಖರೀದಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ನಮ್ಮ ವಿಂಗಡಣೆಯನ್ನು ತೀಕ್ಷ್ಣಗೊಳಿಸಲು ಹಾಗೂ ವೆಚ್ಚಗಳನ್ನು ಕಡಿಮೆ ಇರಿಸಿಕೊಳ್ಳಲು ಒಂದು ಅವಕಾಶವಾಗಿ ನೋಡುತ್ತಿದ್ದೇವೆ,” ಎಂದಿದ್ದಾರೆ.
“ಪ್ರಸ್ತುತ ಕೋವಿಡ್ ಅಲೆಯನ್ನು ಪರಿಗಣಿಸಿ, ನಮ್ಮ ಮಾರಾಟ ಮತ್ತು ಹೆಜ್ಜೆಗಳು ಸ್ಥಳೀಯ ನಿಯಮಗಳ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬ ಶಾಪರ್, ಉದ್ಯೋಗಿ ಮತ್ತು ಪಾಲುದಾರರು ಸುರಕ್ಷಿತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ,” ಎಂದಿದ್ದಾರೆ. Q3FY22ರಲ್ಲಿ 17 ಸ್ಟೋರ್‌ಗಳನ್ನು ಸೇರಿಸಿದೆ ಎಂದು ಕಂಪೆನಿಯು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 6,977.88 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಒಟ್ಟು ವೆಚ್ಚಗಳು 2021-22ರ Q3 FY21ರಲ್ಲಿ ಶೇ 72ರಷ್ಟು ಏರಿಕೆಯಾಗಿ, 8,493.55 ಕೋಟಿ ರೂಪಾಯಿ ಆಗಿದೆ.
ಕಂಪೆನಿಯ ಪ್ರಕಾರ, FY22ರ ಕಳೆದ ಒಂಬತ್ತು ತಿಂಗಳಲ್ಲಿ ಅದರ ಒಟ್ಟು ಆದಾಯವು 22,190 ಕೋಟಿ ರೂಪಾಯಿಗಳಷ್ಟಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 16,731 ಕೋಟಿ ರೂಪಾಯಿಗಳಿದ್ದವು. ನಿವ್ವಳ ಲಾಭವು 9M FY22ಗೆ 1,066 ಕೋಟಿ ರೂಪಾಯಿಗಳಷ್ಟಿತ್ತು, 9M FY21ಗೆ 686 ಕೋಟಿ ರೂಪಾಯಿ PAT ಮಾರ್ಜಿನ್ 9M FY21ರಲ್ಲಿ ಶೇ 4.1ಕ್ಕೆ ಹೋಲಿಸಿದರೆ 9M FY22ನಲ್ಲಿ ಶೇ 4.8ರಷ್ಟಿದೆ ಎಂದು ಅವೆನ್ಯೂ ಸೂಪರ್‌ಮಾರ್ಟ್ಸ್ ಪೋಸ್ಟ್ ಗಳಿಕೆಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: DMart: ಡಿಮಾರ್ಟ್ ಸಿಇಒ ಇಗ್ನೇಷಿಯಸ್ ನವಿಲ್ ನರೊನ್ಹಾ ಈಗ ಶತಕೋಟ್ಯಧಿಪತಿ