
ನವದೆಹಲಿ, ಜುಲೈ 8: ಅಮೆರಿಕ ಸರ್ಕಾರ ಜಪಾನ್, ಬಾಂಗ್ಲಾದೇಶ, ಸೌತ್ ಕೊರಿಯಾ ಸೇರಿ 14 ದೇಶಗಳ ಮೇಲೆ ಹೊಸ ಆಮದು ಸುಂಕ ದರಗಳನ್ನು (US tariffs) ಪ್ರಕಟಿಸಿದ್ದಾರೆ. ಇದರಲ್ಲಿ ಭಾರತವನ್ನು ಸೇರಿಸಲಾಗಿಲ್ಲ. ಭಾರತದ ಜೊತೆ ಒಪ್ಪಂದ ಕುದುರಿಸುವ ಹಂತದಲ್ಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 14 ದೇಶಗಳ ಮೇಲಿನ ಹೊಸ ಟ್ಯಾರಿಫ್ ಆಗಸ್ಟ್ 1ರಿಂದ ಚಾಲನೆಗೆ ಬರುತ್ತದೆ.
ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ನ ಅಕೌಂಟ್ನಲ್ಲಿ, ಜಪಾನ್ ಮತ್ತು ಸೌತ್ ಕೊರಿಯಾ ಮೇಲೆ ಶೇ. 25 ಟ್ಯಾರಿಫ್ ಹಾಕುತ್ತಿರುವುದಾಗಿ ಬರೆದಿದ್ದರು. ಅದರ ಬೆನ್ನಲ್ಲೇ ಇನ್ನೂ 12 ದೇಶಗಳ ಮೇಲೆ ಟ್ಯಾರಿಫ್ ಹಾಕುತ್ತಿರುವುದನ್ನು ತಿಳಿಸಿ, ಟ್ಯಾರಿಫ್ ಪತ್ರಗಳನ್ನು ಹಂಚಿಕೊಂಡಿದ್ದಾರೆ.
ಜಪಾನ್, ಸೌತ್ ಕೊರಿಯಾ, ಮಯನ್ಮಾರ್, ಲಾವೋಸ್, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಕಜಕಸ್ತಾನ್, ಇಂಡೋನೇಷ್ಯಾ, ಟುನಿಶಿಯಾ, ಮಲೇಷ್ಯಾ, ಸರ್ಬಿಯಾ, ಕಾಂಬೋಡಿಯಾ, ಬೋಸ್ನಿಯಾ ಹರ್ಜೆಗೊವಿನಾ ದೇಶಗಳಿಗೆ ಅಮೆರಿಕ ಹೊಸ ಆಮದು ಸುಂಕಗಳನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಇದು ಚಾಲನೆಗೆ ಬರುತ್ತದೆ.
ಇದನ್ನೂ ಓದಿ: ವಿಶ್ವದ ಈ ನಾಲ್ಕನೇ ಶ್ರೀಮಂತ ವ್ಯಕ್ತಿಗೆ ಬೆಳಗಿನ ಸಮಯ ಮುಖ್ಯ; ತಲೆಗೆ ಕೆಲಸ ಕೊಡೋ ಮೀಟಿಂಗ್ಗಳೆಲ್ಲಾ ಬೆಳಗ್ಗೆಯೇ
ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶಗಳ ಮೇಲೆ ಟ್ಯಾರಿಫ್ ಹೇರಿಕೆಗೆ ಬೆದರಿಕೆ ಹಾಕುತ್ತಿರುವ ಉದ್ದೇಶವೇ ಟ್ಯಾಕ್ಸ್ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಗಿಟ್ಟಿಸಲು. ಅಮೆರಿಕದ ಟ್ರೇಡ್ ಡೆಫೆಸಿಟ್ ಅಧಿಕ ಇದ್ದು, ಅದನ್ನು ತಗ್ಗಿಸುವ ಯೋಜನೆ ಟ್ರಂಪ್ರದ್ದು. ಹೀಗಾಗಿ, ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಎಲ್ಲಾ ದೇಶಗಳನ್ನೂ ಆಹ್ವಾನಿಸಿದ್ದಾರೆ. ಒಪ್ಪಂದ ಮಾಡಿಕೊಳ್ಳುವ ಮತ್ತು ಒಪ್ಪಂದ ಮಾಡಿಕೊಂಡಿರುವ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಅವರು ಆಮದು ಸುಂಕ ವಿಧಿಸುತ್ತಿದ್ದಾರೆ. ಅದರ ಮೊದಲ ಭಾಗವಾಗಿ 14 ದೇಶಗಳ ಮೇಲೆ ಟ್ಯಾರಿಫ್ ಪ್ರಕಟಿಸಿದ್ದಾರೆ.
ಭಾರತವು ಕಳೆದ ಕೆಲ ವಾರಗಳಿಂದ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಕುದುರಿಸಲು ನಿರಂತರ ಮಾತುಕತೆಯಲ್ಲಿ ತೊಡಗಿದೆ. ಇತ್ತೀಚೆಗಷ್ಟೇ ಭಾರತದಿಂದ ನಿಯೋಗವೊಂದು ಅಮೆರಿಕಕ್ಕೆ ಹೋಗಿ ಬಂದಿತ್ತು. ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಭಾರತ ಹೇಳಿತ್ತು. ಡೊನಾಲ್ಡ್ ಟ್ರಂಪ್ ಕೂಡ ಇದನ್ನು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಬ್ರಿಕ್ಸ್ ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ, ಅಮೆರಿಕ ವಿರೋಧಿ ನೀತಿಗಳ ಬೆಂಬಲಿಸುವ ದೇಶಗಳ ಮೇಲೆ ಶೇ.10 ಹೆಚ್ಚುವರಿ ಸುಂಕ
‘ನಾವು ಎಲ್ಲರೊಂದಿಗೂ ಮಾತನಾಡಿದ್ದೇವೆ. ಡೀಲ್ ಮಾಡಿಕೊಳ್ಳೋಣ ಎಂದು ತಿಳಿಸಿದ್ದೇವೆ. ನೀವು ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ದೇಶದೊಂದಿಗೆ ಸಹಭಾಗಿತ್ವ ಹೊಂದಲು ಬಯಸುತ್ತಿದ್ದರೆ ನಿಮಗೆ ಅಮೆರಿಕಕ್ಕೆ ಸ್ವಾಗತ… ಬ್ರಿಟನ್ ಜೊತೆ ಡೀಲ್ ಮಾಡಿಕೊಂಡಿದ್ದೇವೆ. ಚೀನಾ ಜೊತೆ ಡೀಲ್ ಮಾಡಿಕೊಂಡಿದ್ದೇವೆ. ಭಾರತದೊಂದಿಗೆ ಡೀಲ್ ಅಂತಿಮಗೊಳ್ಳಲು ಬಹಳ ಹತ್ತಿರದಲ್ಲಿದ್ದೇವೆ. ಯಾರು ಒಪ್ಪಂದ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಪತ್ರ ಕಳುಹಿಸುತ್ತೇವೆ. ಅದರಲ್ಲಿ ಟ್ಯಾರಿಫ್ ಎಷ್ಟು ಎಂದು ತಿಲಿಸುತ್ತೇವೆ. ಅವರು ಅದನ್ನು ಕಟ್ಟಬೇಕು ಅಷ್ಟೇ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ