ನವದೆಹಲಿ, ಅಕ್ಟೋಬರ್ 11: ಅಮೆರಿಕದ ಉತ್ಪನ್ನಗಳಿಗೆ ಯಾವೆಲ್ಲಾ ದೇಶಗಳು ಎಷ್ಟು ತೆರಿಗೆ ವಿಧಿಸುತ್ತವೋ, ಅಷ್ಟೇ ತೆರಿಗೆಯನ್ನು ವಿಧಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾನು ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಮಾಡುವ ಕೆಲಸವೆಂದರೆ ಪ್ರತಿಕ್ರಮ ಎಂದಿರುವ ಟ್ರಂಪ್, ಅಮೆರಿಕವನ್ನು ಮತ್ತೊಮ್ಮೆ ಅಸಾಧಾರಣ ಶ್ರೀಮಂತ ರಾಷ್ಟ್ರವನ್ನಾಗಿ ಮಾಡುವ ತಮ್ಮ ಯೋಜನೆಯಲ್ಲಿ ಇದು ಬಹಳ ಮುಖ್ಯ ಕ್ರಮ ಎಂದಿದ್ದಾರೆ.
ಡೆಟ್ರಾಯ್ಟ್ ಎಕನಾಮಿಕ್ ಕ್ಲಬ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಅಮೆರಿಕವು ಆಮದು ಅಥವಾ ರಫ್ತಿಗೆ ಸಾಮಾನ್ಯವಾಗಿ ತೆರಿಗೆ ವಿಧಿಸುವುದಿಲ್ಲ. ಹಲವು ದೇಶಗಳು ತೆರಿಗೆ ಹೇರುತ್ತವೆ. ಅದರಲ್ಲೂ ಭಾರತ ಎಲ್ಲರಿಗಿಂತ ಹೆಚ್ಚು ಟಾರಿಫ್ ವಿಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೋದಿ ಅತ್ಯಂತ ಒಳ್ಳೆ ಮನುಷ್ಯ; “ಗೆಳೆಯ”ನನ್ನು ಹೊಗಳಿದ ಡೊನಾಲ್ಡ್ ಟ್ರಂಪ್
ಚೀನಾ 200 ಪರ್ಸೆಂಟ್ ತೆರಿಗೆ ಹಾಕುತ್ತದೆ. ಬ್ರೆಜಿಲ್ ಕೂಡ ಹೆಚ್ಚು ಚಾರ್ಜ್ ಮಾಡುತ್ತದೆ. ಆದರೆ, ಎಲ್ಲಕ್ಕಿಂತ ಹೆಚ್ಚು ತೆರಿಗೆ ವಿಧಿಸುವುದು ಭಾರತವೇ. ತಾನು ಅಧಿಕಾರಕ್ಕೆ ಬಂದರೆ ಈ ದೇಶಗಳಿಗೂ ಅಷ್ಟೇ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಭಾರತದೊಂದಿಗೆ ನಾವು ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ನಾನಿದ್ದಾಗ ಅದ್ಭುತ ಸಂಬಂಧ ಇಟ್ಟುಕೊಂಡಿದ್ದೆ. ಅದರಲ್ಲೂ ಮೋದಿಯದ್ದು ವಿಶೇಷತೆ. ಅವರೊಬ್ಬರ ಗ್ರೇಟ್ ಲೀಡರ್. ಶ್ರೇಷ್ಠ ವ್ಯಕ್ತಿತ್ವದವರು. ನಿಜಕ್ಕೂ ಶ್ರೇಷ್ಠ ವ್ಯಕ್ತಿ. ಅವರು ಎಲ್ಲವನ್ನೂ ಒಗ್ಗೂಡಿಸಿದ್ದೇನೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ತೀರಾ ಹೆಚ್ಚು ತೆರಿಗೆ ವಿಧಿಸುತ್ತಾರೆ,’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಾನೇನಾದರೂ ಅಧಿಕಾರಕ್ಕೆ ಬಂದರೆ ಬೇರೆ ಬೇರೆ ದೇಶಗಳಿಗೆ ಅವುಗಳಷ್ಟೇ ಸರಿಸಮಾನವಾಗಿ ಸುಂಕ ವಿಧಿಸುತ್ತೇನೆ. ಹಾಗೆಯೇ, ಅಮೆರಿಕದಲ್ಲಿ ಉತ್ಪಾದನೆ ಮಾಡುವ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 21ರಿಂದ ಶೇ. 15ಕ್ಕೆ ಇಳಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್ಡಿ ಇಡಲು ತ್ವರೆ ಮಾಡಿ
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ. ಇತರ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಆದರೆ, ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ನೇರ ಪೈಪೋಟಿ ನಡೆಯುತ್ತಿದೆ. ನವೆಂಬರ್ 5ರಂದು ಚುನಾವಣೆ ನಡೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ