ಟಾಟಾ ಗ್ರೂಪ್ಗೆ ಮುಂದಿನ ವಾರಸುದಾರ ಯಾರೆಂದು ಇವತ್ತು ನಿರ್ಧರಿಸಲಿದೆ ಟಾಟಾ ಟ್ರಸ್ಟ್
Tata trusts may meet today: ಟಾಟಾ ಗ್ರೂಪ್ನ ಮುಂದಿನ ನಾಯಕತ್ವ ಯಾರಿಗೆ ವಹಿಸುವುದು ಎಂಬುದನ್ನು ಟಾಟಾ ಟ್ರಸ್ಟ್ಗಳು ಇಂದು ಶುಕ್ರವಾರ (ಅ. 11) ನಿರ್ಧರಿಸಲಿವೆ. ರತನ್ ಟಾಟಾ ಅವರಿಗೆ ಸಂತಾನ ಇರಲಿಲ್ಲವಾದ್ದರಿಂದ ಅವರ ತಂದೆಯ ಎರಡನೆ ಪತ್ನಿ ಮಗ ನೋಯಲ್ ಟಾಟಾ ಅವರ ಮೂವರು ಮಕ್ಕಳ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಮುಂಬೈ, ಅಕ್ಟೋಬರ್ 11: ಮೊನ್ನೆ ಬುಧವಾರ ರತನ್ ಟಾಟಾ ನಿಧನದ ಬಳಿಕ ಅವರ ಕುಟುಂಬದಿಂದ ಟಾಟಾ ಗ್ರೂಪ್ಗೆ ಯಾರು ಮುಂದಿನ ನಾಯಕತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಇದೆ. ಇದಕ್ಕೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಬ್ಲೂಮ್ಬರ್ಗ್ ವರದಿ ಪ್ರಕಾರ ಮುಂಬೈನಲ್ಲಿ ಟಾಟಾ ಟ್ರಸ್ಟ್ಗಳು ಇಂದು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಈ ವರದಿಯು ಮೂಲಗಳನ್ನು ಉಲ್ಲೇಖಿಸಿ ಹೇಳುತ್ತಿದೆ.
ಟಾಟಾ ಕುಟುಂಬದ ಟ್ರಸ್ಟ್ಗಳಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಪ್ರಮುಖವಾದುವು. ಟಾಟಾ ಸನ್ಸ್ ಸಂಸ್ಥೆಯಲ್ಲಿ ಇವುಗಳು ಹೊಂದಿರುವ ಷೇರುಪಾಲು ಶೇ. 66ರಷ್ಟಿದೆ. ಇದೇ ಟಾಟಾ ಸನ್ಸ್ ಅಡಿಯಲ್ಲಿ ಟಾಟಾ ಗ್ರೂಪ್ ಬರುತ್ತದೆ. ಈ ಗ್ರೂಪ್ನಲ್ಲಿ ಸುಮಾರು 90ರಿಂದ 100 ಕಂಪನಿಗಳು ಅಸ್ತಿತ್ವದಲ್ಲಿವೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ವ್ಯವಹಾರಗಳನ್ನು ಹೊಂದಿವೆ. ಒಟ್ಟಾರೆ ಎಲ್ಲಾ ಟಾಟಾ ಗ್ರೂಪ್ ಕಂಪನಿಗಳ ಆದಾಯ ಸೇರಿಸಿದರೆ ವರ್ಷಕ್ಕೆ 165 ಬಿಲಿಯನ್ ಡಾಲರ್ಗೂ ಅಧಿಕ ಆಗುತ್ತದೆ. ಅಂದರೆ 12 ಲಕ್ಷ ಕೋಟಿ ರೂ ಆಸುಪಾಸಿನ ವರಮಾನವನ್ನು ಹೊಂದಿರುವ ಟಾಟಾ ಗ್ರೂಪ್ನಿಂದ 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಕ್ಕಿದೆ.
ಟಾಟಾ ಗ್ರೂಪ್ನ ಮುಂದಿನ ವಾರಸುದಾರರು ಯಾರು?
ರತನ್ ಟಾಟಾ ಅವರು ಮುಂದಿನ ವಾರಸುದಾರಿಕೆ ವಿಚಾರದ ಬಗ್ಗೆ ಯಾವುದಾದರೂ ಉಯಿಲು ಬರೆದಿದ್ದಾರಾ ಅಥವಾ ಯಾರೊಂದಿಗಾದರೂ ಚರ್ಚಿಸಿದ್ದಾರಾ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಟಾಟಾ ಸನ್ಸ್ಗೆ ಸದ್ಯಕ್ಕೆ ಛೇರ್ಮನ್ ಆಗಿರುವುದು ಎನ್ ಚಂದ್ರಶೇಖರನ್. ಇವರು ಟಾಟಾ ಕುಟುಂಬಕ್ಕೆ ಸೇರಿದವರಲ್ಲ. ಟಾಟಾ ಕುಟುಂಬದಲ್ಲಿ ಸದ್ಯಕ್ಕೆ ಉಳಿದಿರುವವರೆಂದರೆ ನೋಯಲ್ ಟಾಟಾ ಹಾಗೂ ಅವರ ಮೂವರು ಮಕ್ಕಳಾದ ಮಾಯಾ, ಲಿಯಾ ಮತ್ತು ನೆವಿಲ್ಲೆ ಟಾಟಾ ಅವರುಗಳು.
ಇದನ್ನೂ ಓದಿ: ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ
ನೋಯಲ್ ಟಾಟಾ ಅವರು ರತನ್ ಅವರ ತಂದೆಯ ಎರಡನೇ ಪತ್ನಿಯ ಮಗ. ರತನ್ ಟಾಟಾ ಅವಿವಾಹಿತರಾಗಿದ್ದರು. ಅವರ ಕಿರಿಯ ಸಹೋದರ ಬಿಸಿನೆಸ್ನಿಂದ ದೂರ ಇದ್ದಾರೆ. ಹೀಗಾಗಿ, ನೋಯಲ್ ಟಾಟಾ ಕುಟುಂಬದಲ್ಲಿ ಒಬ್ಬರಿಗೆ ನಾಯಕತ್ವ ಸಿಗಬಹುದು. ಈ ಪೈಕಿ ಮಾಯಾ ಟಾಟಾ ಮತ್ತು ನೆವಿಲ್ಲೆ ಟಾಟಾ ಅವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ