ಉನ್ನತ ಮಟ್ಟದ ಕೆಲಸಗಾರರು ಅಮೆರಿಕಕ್ಕೆ ಬರಬೇಕು, ಎಚ್​1ಬಿ ವೀಸಾ ಬೇಕು: ಡೊನಾಲ್ಡ್ ಟ್ರಂಪ್

|

Updated on: Jan 22, 2025 | 11:47 AM

H-1B visa and Donald Trump: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣಗೊಂಡ ಬಳಿಕ ಹಲವು ನೀತಿಗಳನ್ನು ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ಎಚ್1ಬಿ ವೀಸಾ ಪದ್ಧತಿ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿಯುವ ಸುಳಿವು ಸಿಕ್ಕಿದೆ. ಪ್ರಮುಖ ಉದ್ಯಮಿಗಳೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್, ಎಚ್1ಬಿ ವೀಸಾ ಪರವಾಗಿ ಮಾತನಾಡಿದ್ದಾರೆ.

ಉನ್ನತ ಮಟ್ಟದ ಕೆಲಸಗಾರರು ಅಮೆರಿಕಕ್ಕೆ ಬರಬೇಕು, ಎಚ್​1ಬಿ ವೀಸಾ ಬೇಕು: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Follow us on

ವಾಷಿಂಗ್ಟನ್, ಜನವರಿ 22: ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್1ಬಿ ವೀಸಾ ನಿಯಮವನ್ನು ಕಠಿಣಗೊಳಿಸಬಹುದು ಎನ್ನುವ ಸುದ್ದಿ ಕೇವಲ ವದಂತಿ ಆಗಿರುವಂತಿದೆ. ಡೊನಾಲ್ಡ್ ಟ್ರಂಪ್ ಅವರು ಎಚ್1ಬಿ ವೀಸಾ ಪರ ಒಲವು ವ್ಯಕ್ತಪಡಿಸಿದ್ದಾರೆ. ಪದಗ್ರಹಣದ ಬಳಿಕ ವಿಶ್ವದ ಕೆಲ ಪ್ರಮುಖ ಉದ್ಯಮಿಗಳೊಂದಿಗೆ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಎಚ್1ಬಿ ವೀಸಾ ಯೋಜನೆಯಿಂದ ದೇಶಕ್ಕೆ ಗುಣಮಟ್ಟದ ಕೆಲಸಗಾರರು ಬರಲು ಸಾಧ್ಯವಾಗುತ್ತೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಉತ್ಕೃಷ್ಟ ಎಂಜಿನಿಯರುಗಳು ಮಾತ್ರವಲ್ಲ, ಎಲ್ಲಾ ಸ್ತರಗಳಿಂದಲೂ ಗುಣಮಟ್ಟದ ಕೆಲಸಗಾರರು ಬರುವಂತಾಗಬೇಕು ಎಂಬುದು ಅವರ ಅನಿಸಿಕೆ. ‘ನನಗೆ ಎರಡೂ ಕಡೆಯ ವಾದದಲ್ಲಿ ಒಪ್ಪಿಗೆ ಇದೆ. ಆದರೆ, ನಮ್ಮ ದೇಶಕ್ಕೆ ಸ್ಪರ್ಧಾತ್ಮಕ ಜನರು ಬರಬೇಕೆಂದು ಬಯಸುತ್ತೇನೆ. ಇತರ ಜನರಿಗೆ ಅವರು ಬಂದು ತರಬೇತಿ ಕೊಡುತ್ತಾರೆಂದೂ ಸರಿ. ನನಗೆ ಇದನ್ನು (ಎಚ್1ಬಿ ವೀಸಾ) ನಿಲ್ಲಿಸುವುದು ಬೇಕಿಲ್ಲ. ಎಂಜಿನಿಯರುಗಳಿಗೆ ಮಾತ್ರವೇ ಈ ವಲಸೆ ಸೀಮಿತವಾಗದೆ, ಎಲ್ಲಾ ಮಟ್ಟದ ವ್ಯಕ್ತಿಗಳೂ ಬರುವಂತಾಗಬೇಕು’ ಎಂದು ಅಮೆರಿಕದಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಯಾರು ಯಾರಿಗೂ ಬಲವಂತಪಡಿಸದಿರಿ… ಕೆಲಸದ ಕಾಮೆಂಟ್​ಗಳಿಗೆ ತೆರೆ ಎರೆಯಲು ಇನ್ಫೋಸಿಸ್ ಮೂರ್ತಿ ಯತ್ನ

‘ನನಗೆ ಎಚ್1ಬಿ ವೀಸಾ ಯೋಜನೆ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನೂ ಕೂಡ ಇದನ್ನು ಬಳಸುತ್ತೇನೆ. ವೈನ್ ಎಕ್ಸ್​ಪರ್ಟ್ಸ್, ಒಳ್ಳೆಯ ವೇಟರ್ಸ್ ಹೀಗೆ ಅತ್ಯುತ್ತಮ ಕೆಲಸಗಾರರನ್ನು ಕರೆಸಬಹುದು. ಲ್ಯಾರಿಯಂತಹ ಜನರಿಗೆ ಉತ್ತಮ ಎಂಜಿನಿಯರುಗಳ ಅಗತ್ಯ ಇದೆ,’ ಎಂದು ಟ್ರಂಪ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಒರೇಕಲ್ ಸಿಟಿಒ ಲ್ಯಾರಿ ಎಲಿಸನ್, ಸಾಫ್ಟ್​ಬ್ಯಾಂಕ್ ಸಿಇಒ ಮಸಾಯೋಶಿ ಸೋನ್, ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರೂ ಇದ್ದರು.

ಎಚ್​-1ಬಿ ವೀಸಾ ಪರವಾಗಿ ಮಾತನಾಡಿದ ಇಲಾನ್ ಮಸ್ಕ್

ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿ ಪ್ರಮುಖರಾಗಿರುವ, ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಉದ್ಯಮಿ ಇಲಾನ್ ಮಸ್ಕ್ ಅವರು ಎಚ್1ಬಿ ವೀಸಾ ಯೋಜನೆಯನ್ನು ಬಲವಾಗಿ ಸಮರ್ಥಿಸಿದ್ದಾರೆ. ಈ ರೀತಿಯ ವೀಸಾ ವ್ಯವಸ್ಥೆ ಮೂಲಕ ಅರ್ಹ ಟೆಕ್ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣದ ಬೊಂಬೆಗಳಂತೆ ವಿಶೇಷ ಈ ಏಟಿಕೊಪ್ಪಕ ಆಟಿಕೆ; ಪ್ರಧಾನಿ ಪ್ರಶಂಸೆ ಬಳಿಕ ಮರುಜೀವ ಪಡೆದ ಈ ಬೊಂಬೆ ಕಲೆ

‘ಸ್ಟೇಸ್ ಎಕ್ಸ್, ಟೆಸ್ಲಾ ಹಾಗೂ ಇತರ ನೂರಾರು ಕಂಪನಿಗಳನ್ನು ಕಟ್ಟಲು ನನ್ನನ್ನೂ ಒಳಗೊಂಡಂತೆ ಹಲವು ವ್ಯಕ್ತಿಗಳು ಅಮೆರಿಕಕ್ಕೆ ಬರಲು ಮತ್ತು ಈ ದೇಶವನ್ನು ಬಲಶಾಲಿಯಾಗಿ ಮಾಡಲು ಕಾರಣವಾಗಿರುವುದೇ ಎಚ್1ಬಿ’ ಎಂದು ಮಸ್ಕ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ