Drone Policy: ಭದ್ರತೆಯಿಂದ ಕೃಷಿಯವರೆಗೆ ಹಲವು ಕ್ಷೇತ್ರಗಳಲ್ಲಿ ಡ್ರೋನ್​ ಬಳಕೆಗೆ ಅವಕಾಶ

|

Updated on: May 26, 2022 | 4:28 PM

ಡ್ರೋಣ್​ ನೀತಿಯನ್ನು ಭಾರತ ಸರ್ಕಾರ ಪರಿಷ್ಕರಿಸಿದ್ದು ಭದ್ರತೆ, ಕೃಷಿ, ಆರೋಗ್ಯ, ಕೈಗಾರಿಕೆ ಮತ್ತು ಮನರಂಜನೆ ಕ್ಷೇತ್ರಗಳಲ್ಲಿ ಡ್ರೋಣ್ ಬಳಕೆಗೆ ಅವಕಾಶಗಳು ಮುಕ್ತವಾಗಿವೆ

Drone Policy: ಭದ್ರತೆಯಿಂದ ಕೃಷಿಯವರೆಗೆ ಹಲವು ಕ್ಷೇತ್ರಗಳಲ್ಲಿ ಡ್ರೋನ್​ ಬಳಕೆಗೆ ಅವಕಾಶ
ಮೋದಿ ಆಡಳಿತ ಅವಧಿಯಲ್ಲಿ ಡ್ರೋಣ್ ನೀತಿ ಸುಧಾರಣೆಯಾಗಿದೆ.
Follow us on

ಕೃತಕ ಬುದ್ಧಿಮತ್ತೆಯಲ್ಲಿ (Artificial Intelligence – AI) ನೂತನ ಆವಿಷ್ಕಾರಗಳು ಆದ ನಂತರ ಮಾನವ ರಹಿತ ವೈಮಾನಿಕ ಉಪಕರಣ ಕ್ಷೇತ್ರದಲ್ಲಿ (Unmanned Aerial Vehicles – UAVs) ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದವು. ಆದರೆ ಸರ್ಕಾರದ ಬಿಗಿಯಾದ ನೀತಿಯ ಕಾರಣದಿಂದಾಗಿ ಡ್ರೋಣ್​ಗಳ (Drones) ಬಳಕೆ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಲಿಲ್ಲ. ಇದೀಗ ಡ್ರೋಣ್​ ನೀತಿಯನ್ನು ಭಾರತ ಸರ್ಕಾರ ಪರಿಷ್ಕರಿಸಿದ್ದು ಭದ್ರತೆ, ಕೃಷಿ, ಆರೋಗ್ಯ, ಕೈಗಾರಿಕೆ ಮತ್ತು ಮನರಂಜನೆ ಕ್ಷೇತ್ರಗಳಲ್ಲಿ ಡ್ರೋಣ್ ಬಳಕೆಗೆ ಅವಕಾಶಗಳು ಮುಕ್ತವಾಗಿವೆ. ಇದು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಗಳಲ್ಲಿ ಆಶಾ ಭಾವನೆ ಬಿತ್ತಿದೆ. ಈಗ್ಗೆ ನಾಲ್ಕು ವರ್ಷ ಹಿಂದಿನವರೆಗೆ ಭಾರತದಲ್ಲಿ ಸಮರ್ಪಕ ಡ್ರೋಣ್ ನೀತಿ ಎಂಬುದು ಇರಲಿಲ್ಲ. ಮಾನವ ರಹಿತ ವೈಮಾನಿಕ ವಾಹನಗಳ ಬಳಕೆಗೆ ಸ್ಥಳೀಯ ವಾತಾವರಣವೂ ಪೂರಕವಾಗಿರಲಿಲ್ಲ. ಡ್ರೋಣ್​ಗಳ ಬಳಕೆಯಿಂದ ದೇಶದ ಭದ್ರತೆಗೆ ಹಾನಿಯೇ ಹೆಚ್ಚು ಎನ್ನುವ ಮನೋಭಾವ ಎಲ್ಲೆಡೆ ನೆಲೆಸಿತ್ತು. 2018ರಲ್ಲಿ ಜಮ್ಮುವಿನಲ್ಲಿದ್ದ ಭಾರತೀಯ ವಾಯುಪಡೆಯ (Indian Air Force – IAF) ನೆಲೆಗೆ ಡ್ರೋಣ್ ಮೂಲಕ ಸ್ಫೋಟಕಗಳನ್ನು ಸಾಗಿಸಿದ ನಂತರ ಈ ಆತಂಕ ಮತ್ತಷ್ಟು ಹೆಚ್ಚಾಯಿತು. ನಂತರದ ದಿನಗಳಲ್ಲಿ ಡ್ರೋಣ್ ಬಳಕೆಯ ಕುರಿತು ಸಮಗ್ರ ನೀತಿಯೊಂದನ್ನು ರೂಪಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದೀಗ ದೇಶೀಯವಾಗಿ ಡ್ರೋಣ್​ಗಳ ಉತ್ಪಾದನೆ ಮತ್ತು ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.

ಈ ಸುದ್ದಿಯಲ್ಲಿ ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಡ್ರೋಣ್ ನೀತಿ-2021 ಮಾನವ ರಹಿತ ವೈಮಾನಿಕ ಉಪಕರಣಗಳ ಬಳಕೆಗೆ ಮತ್ತಷ್ಟು ಉದಾರವಾದಿ ದೃಷ್ಟಿಕೋನ ಪ್ರದರ್ಶಿಸಿದೆ. ಈ ಹಿಂದಿನ ಬೆಳವಣಿಗೆಗಳಿಗೆ ಹೋಲಿಸಿದರೆ ಹಲವು ಅನಗತ್ಯ ನಿಬಂಧನೆಗಳನ್ನು ಇದು ತೆಗೆದುಹಾಕಿದೆ. ಇದರಿಂದ ಡ್ರೋಣ್​ಗಳ ಉತ್ಪಾದನೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಕಾರ್ಯನಿರ್ವಹಣೆಯಲ್ಲಿ ಮುಕ್ತ ಅವಕಾಶಗಳು ಸಿಕ್ಕಿವೆ. ಈ ಮೊದಲು ಡ್ರೋಣ್ ಕಾರ್ಯಾಚರಣೆಗೆ ಮೊದಲು 25 ಅರ್ಜಿಗಳನ್ನು ತುಂಬಿ, ಅನುಮೋದನೆ ಪಡೆದುಕೊಳ್ಳಬೇಕಿತ್ತು. ಇದೀಗ ಈ ಪ್ರಮಾಣವು 5ಕ್ಕೆ ಕಡಿಮೆಯಾಗಿದೆ. ಈ ಮೊದಲು 72 ಬಗೆಯ ಶುಲ್ಕಗಳನ್ನು ತುಂಬಬೇಕಾಗಿತ್ತು. ಇದು ಈಗ 4ಕ್ಕೆ ಇಳಿದಿದೆ. ವಿಧಿಸುತ್ತಿದ್ದ ಶುಲ್ಕದ ಮೊತ್ತವನ್ನೂ ಕಡಿಮೆ ಮಾಡಲಾಗಿದ್ದು, ಡ್ರೋಣ್​ನ ಗಾತ್ರಕ್ಕೆ ತಕ್ಕಂತೆ ಶುಲ್ಕ ತುಂಬಬೇಕು ಎನ್ನುವ ನಿಬಂಧನೆಯಿಂದಲೂ ವಿನಾಯ್ತಿ ನೀಡಲಾಗಿದೆ.

ಡ್ರೋಣ್​ ಬಳಕೆಗೆ ಸಂಬಂಧಿಸಿದ ವಿವಿಧ ಅನುಮತಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಡಿಜಿಟಲ್ ಸ್ಕೈ ವೇದಿಕೆಯ ಮೂಲಕವೇ ನಿರ್ವಹಿಸಬಹುದಾಗಿದೆ. ಇದರಲ್ಲಿ ಭೂಪ್ರದೇಶವನ್ನು ಹಸಿರು, ಹಳದಿ ಮತ್ತು ಕೆಂಪು ವಲಯಗಳಾಗಿ ವಿಂಗತಿಸಲಾಗಿದೆ. ಹಸಿರು ವಲಯದಲ್ಲಿ ಮುಕ್ತವಾಗಿ, ಹಳದಿ ವಲಯದಲ್ಲಿ ನಿರ್ಬಂಧಿತ ರೀತಿಯಲ್ಲಿ ಡ್ರೋಣ್​ಗಳು ಸಂಚರಿಸಬಹುದು. ಆದರೆ ಕೆಂಪು ವಲಯದಲ್ಲಿ ಡ್ರೋಣ್ ಹಾರಾಟಕ್ಕೆ ಅವಕಾಶವೇ ಇರುವುದಿಲ್ಲ. ತರಬೇತಿ ಪಡೆಯದವರಿಂದ ಆಗುವ ಅಪಾಯಗಳನ್ನು ತಪ್ಪಿಸಲು ‘ಆ್ಯಂಟಿ ಡ್ರೋಣ್ ಫ್ರೇಮ್​ವರ್ಕ್​’ ನಿಯಮಗಳನ್ನು 2019ರಲ್ಲಿ ರೂಪಿಸಲಾಯಿತು. ಕೇಂದ್ರ ಸರ್ಕಾರದ ಈ ಎಲ್ಲ ಉಪಕ್ರಮಗಳಿಂದ ಡ್ರೋಣ್ ಉತ್ಪಾದನೆ ಮತ್ತು ಕಾರ್ಯಾಚರಣೆ ಈಗ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.

ಉತ್ಪಾದನೆಗೆ ಪೂರಕ ಪ್ರೋತ್ಸಾಹಧನ (Production Linked Incentive Scheme – PLI) ಯೋಜನೆಯನ್ನು 2021ರಲ್ಲಿ ಜಾರಿಗೊಳಿಸಲಾಯಿತು. ಇದಕ್ಕಾಗಿ ಮೂರು ವರ್ಷಗಳ ಅವಧಿಗೆ ₹ 120 ಕೋಟಿ ಅನುದಾನವನ್ನು ಡ್ರೋಣ್ ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ ನೀಡಲು ಮೀಸಲಿಡಲಾಯಿತು. ಇದು 2021-22ರ ಅವಧಿಯಲ್ಲಿ ಎಲ್ಲ ಸ್ಥಳೀಯ ಡ್ರೋಣ್ ಉತ್ಪಾದಕರ ಒಟ್ಟಾರೆ ವಹಿವಾಟಿನ ಮೊತ್ತಕ್ಕೆ ದುಪ್ಪಟ್ಟು ಪ್ರಮಾಣ. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ನಂತರ ದೆಹಲಿಯ ಆಗಸದಲ್ಲಿ ಅತ್ಯದ್ಭುತ ಡ್ರೋಣ್ ಪ್ರದರ್ಶನ ನಡೆಯಿತು.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾದ ಡ್ರೋಣ್​ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಹಸ್ತಾಂತರಿಸಿದರು. ವಿದೇಶಿ ನಿರ್ಮಿತ ಡ್ರೋಣ್​ಗಳ ಆಮದನ್ನು ಭಾರತ ಸರ್ಕಾರ ನಿಷೇಧಿಸಿದೆ. ಆದರೆ ಡ್ರೋಣ್ ತಯಾರಿಸಲು ಬಳಕೆಯಾಗುವ ಬಿಡಿಭಾಗಗಳು ಅಥವಾ ತಾಂತ್ರಿಕ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Thu, 26 May 22