Flying Taxi: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ

|

Updated on: Mar 07, 2024 | 3:43 PM

e200, India's First flying taxi: ಐಐಟಿ ಪ್ರೊಫೆಸರ್​ವೊಬ್ಬರು ತಯಾರಿಸಿರುವ ಇ200 ಎಂಬ ಹಾರುವ ಕಾರು ಭಾರತದಲ್ಲಿ ಈ ವರ್ಷದೊಳಗೆ ಮೊದಲ ಹಾರಾಟ ನಡೆಸಲಿದೆ. ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಇದರ ಮೊದಲ ಕಮರ್ಷಿಯಲ್ ಹಾರಾಟ ನಡೆಯಲಿದೆ. ಚೀನಾದ ಇಹ್ಯಾಂಗ್ ಸಂಸ್ಥೆ ತಯಾರಿಸುವ ಇಎಚ್216-ಎಸ್ ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ಎನಿಸಿದರೂ ವಿಶ್ವದ ಹಲವೆಡೆ ಹಾರುವ ಕಾರುಗಳು ಆಗಸದಲ್ಲಿ ಮಿಂಚಲು ಅಣಿಯಾಗಿವೆ.

Flying Taxi: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ
ಚೀನಾದ ಫ್ಲೈಯಿಂಗ್ ಕಾರು ಇಎಚ್216-ಎಸ್
Follow us on

ಫ್ಲೈಯಿಂಗ್ ಟ್ಯಾಕ್ಸಿ ಬಗ್ಗೆ ಈಗ್ಗೆ ಕೆಲವಾರು ವರ್ಷಗಳಿಂದ ಸಾಕಷ್ಟು ಸುದ್ದಿಗಳನ್ನು ನೋಡಿದ್ದೇವೆ. ವಿಶ್ವದ ಹಲವೆಡೆ ಹಾರುವ ಕಾರು ಅಥವಾ ಜನರನ್ನು ಹೊತ್ತೊಯ್ಯಬಲ್ಲ ಪ್ರಬಲ ಡ್ರೋನ್​ಗಳು ಇನ್ನೊಂದು ಅಥವಾ ಎರಡು ವರ್ಷದಲ್ಲಿ ಸಾರ್ವಜನಿಕ ಸೇವೆಗೆ ಸಿಗಲು ಅಣಿಯಾಗಿವೆ. ಚೀನಾದ ಇಹ್ಯಾಂಗ್ (eHang) ಎಂಬ ಸಂಸ್ಥೆ ಫ್ಲೈಯಿಂಗ್ ಟ್ಯಾಕ್ಸಿ ಅಥವಾ eVTOL (electric vertical take-off and landing aircraft) ನಿರ್ಮಿಸಿದ್ದು, ಇದಕ್ಕೆ ಚೀನಾದ ವಿಮಾನಯಾನ ಇಲಾಖೆ ನಾಲ್ಕು ತಿಂಗಳ ಹಿಂದೆ (2023ರ ಅಕ್ಟೋಬರ್) ಅನುಮೋದನೆ ಕೊಟ್ಟಿದೆ. ಇಎಚ್216-ಎಸ್ ಇದು ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ಎನಿಸಲಿದೆ. ಇದರ ಕಮರ್ಷಿಯಲ್ ಹಾರಾಟ ಈ ವರ್ಷದೊಳಗೆ ಆಗಬಹುದು ಎನ್ನಲಾಗುತ್ತಿದೆ. ಇದೇ ವೇಳೆ, ಭಾರತದಲ್ಲೂ ಫ್ಲೈಯಿಂಗ್ ಟ್ಯಾಕ್ಸಿಗಳ ತಯಾರಿಕೆ ನಡೆಯುತ್ತಿದೆ. ಇಪ್ಲೇನ್ (ePlane) ಕಂಪನಿ ಇ200 ಎಂಬ ಹಾರುವ ಕಾರನ್ನು (flying taxi) ಅಭಿವೃದ್ಧಿಪಡಿಸುತ್ತಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಎರಡನೇ ಹಂತದ ಪ್ರಯೋಗ ನಡೆಯಲಿದೆ. ಈ ವರ್ಷದೊಳಗೆ ಪೂರ್ಣ ಪ್ರಮಾಣದ ಹಾರಾಟ ನಡೆಯಲಿದೆ. ಸರ್ಕಾರದ ಅನುಮೋದನೆ ಸಿಕ್ಕರೆ 2025ರಲ್ಲಿ ಭಾರತದಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಕಾಣಬಹುದು.

ಭಾರತದ ಫ್ಲೈಯಿಂಗ್ ಟ್ಯಾಕ್ಸಿ ಹಿಂದೆ ಮಾಜಿ ಐಐಟಿ ಪ್ರೊಫೆಸರ್

ಇಪ್ಲೇನ್ ಕಂಪನಿಯ ಸಂಸ್ಥಾಪಕರಾದ ಸತ್ಯ ಚಕ್ರವರ್ತಿ ಅವರು ಐಐಟಿ ಮದ್ರಾಸ್​ನ ಏರೋಸ್ಪೇಸ್ ಎಂಜಿನಿಯರಿಂಗ್​ನಲ್ಲಿ ಪ್ರೊಫೆಸರ್ ಆಗಿದ್ದವರು. ಇವರು ಹುಟ್ಟುಹಾಕಿದ ಇಪ್ಲೇನ್ ಕಂಪನಿ ಭಾರತದ ಮೊದಲ ಹಾರುವ ಕಾರು ತಯಾರಿಸಿದೆ.

ಸುರಕ್ಷತೆ ಸೇರಿದಂತೆ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಗುಣಮಟ್ಟ ಪ್ರಮಾಣಗಳಿಗೆ ಹೊಂದಿಕೆ ಆಗುವಂತೆ ಈ ಫ್ಲೈಯಿಂಗ್ ಕಾರನ್ನು ತಯಾರಿಸಲಾಗಿದೆ. ತುಸು ಕಡಿಮೆ ಆಕಾರದ ಸಣ್ಣ ಪ್ರೋಟೋಟೈಪ್ ಅನ್ನು (ಇ50) ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಕ್ಕಿಂತ ತುಸು ದೊಡ್ಡದಾದ ಇನ್ನೊಂದು ಪ್ರೋಟೋಟೈಪ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಲಿದೆ. ಏಳೆಂಟು ತಿಂಗಳ ಬಳಿಕ, ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಇ-200 ಪ್ಲೇನ್​ನ ಹಾರಾಟ ಆಗಲಿದೆ ಎಂದು ಪ್ರೊಫೆಸರ್ ಸತ್ಯ ಚಕ್ರವರ್ತಿ ಹೇಳಿದ್ದಾರೆ.

ಇದನ್ನೂ ಓದಿ: ಸಾವಿರ ಕೋಟಿ ರೂ ಕಾಂಪೆನ್ಸೇಶನ್ ಕೊಟ್ಟಿಲ್ಲ; ಇಲಾನ್ ಮಸ್ಕ್ ವಿರುದ್ಧ ಮಾಜಿ ಟ್ವಿಟ್ಟರ್ ಎಕ್ಸಿಕ್ಯೂಟಿವ್​​ಗಳಿಂದ ಮೊಕದ್ದಮೆ

ಟ್ಯಾಕ್ಸಿ ರೇಡ್​ಗಿಂತ ತೀರಾ ಹೆಚ್ಚೇನಿಲ್ಲ ಫ್ಲೈಯಿಂಗ್ ಟ್ಯಾಕ್ಸಿ

ಮೇಲೆ ಹಾರಾಡುವ ಕಾರುಗಳನ್ನು ನಾವೆಲ್ಲವೂ ಸ್ಕೈಫೈ ಸಿನಿಮಾಗಳಲ್ಲಿ ನೋಡಿರುತ್ತೇವೆ. ಮಿನಿ ಸ್ಪೇಸ್​ಕ್ರಾಫ್ಟ್ ರೀತಿ ಇರುವ ಈ ಹಾರುವ ಕಾರು ನೋಡಿ, ನೂರು ವರ್ಷದ ಬಳಿಕ ಇದನ್ನು ಭೂಮಿಯ ಜನರು ನೋಡಬಹುದು ಎಂದು ಕನಸು ಕಂಡಿರುತ್ತೇವೆ. ಆದರೆ, ಈಗಲೇ ಇದು ನನಸಾಗತೊಡಗಿದೆ. ಇದರ ಮೇಲೆ ಹಾರಾಡುವುದು ತುಂಬಾ ದುಬಾರಿ ಇರಬಹುದು ಎಂಬ ಗೊಂದಲ ನಿಮಗೆ ಇರಬಹುದು. ಪ್ರೊ. ಸತ್ಯ ಚಕ್ರವರ್ತಿ ಈ ಅನುಮಾನ ಇಲ್ಲವಾಗಿಸಿದ್ದಾರೆ. ಅವರ ಪ್ರಕಾರ, ಓಲಾ, ಊಬರ್​ನ ಕ್ಯಾಬ್ ರೈಡಿಂಗ್​ಗಿಂತ ಎರಡು ಪಟ್ಟು ದರ ಮಾತ್ರವೇ ಇ200 ರೇಡಿಂಗ್​ಗೆ ಇರುತ್ತದೆ ಎಂದಿದ್ದಾರೆ.

ಭಾರತದ ಇ200 ಫ್ಲೈಯಿಂಗ್ ಕಾರು

ಅಂದರೆ, ಕೆಂಗೇರಿಯಿಂದ ಮೆಜೆಸ್ಟಿಕ್​ಗೆ ಬರಲು ಟ್ಯಾಕ್ಸಿಯಲ್ಲಿ ಸುಮಾರು 250-350 ರೂ ಆಗುತ್ತದೆ. ಹಾರುವ ಕಾರಿನಲ್ಲಿ 600 ರೂ ಆಗಬಹುದು.

ಅಮೆರಿಕದ ಆರ್ಚರ್ ಏವಿಯೇಶನ್​ನಿಂದ ಭಾರತದಲ್ಲಿ 2026ಕ್ಕೆ ಏರ್ ಟ್ಯಾಕ್ಸಿ ಸೇವೆ

ಭಾರತದಲ್ಲಿ ಇನ್ನೆರಡು ವರ್ಷದಲ್ಲಿ ಹಾರುವ ಕಾರುಗಳು ಬರುವುದು ನಿಶ್ಚಿತ ಎಂಬಂತಿದೆ. ಅಮೆರಿಕದ ಆರ್ಚರ್ ಏವಿಯೇಶನ್ ಸಂಸ್ಥೆ ನಿರ್ಮಿಸುತ್ತಿರುವ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು ಭಾರತಕ್ಕೆ 2026ಕ್ಕೆ ಬರಲಿವೆ. ಇಂಡಿಗೋ ಏರ್ಲೈನ್ ಸಂಸ್ಥೆ ಆರ್ಚರ್ ಏವಿಯೇಶನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಟ್ಯಾಕ್ಸಿಯಲ್ಲಿ ಒಟ್ಟು 5 ಮಂದಿಯವರೆಗೆ ಕೂರುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಗೂಗಲ್​ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್​ಗಳ ನೈಜ ಉಪಯೋಗ ಕಂಡುಹಿಡಿಯಿರಿ

ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಇದರ ಏರ್ ಟ್ಯಾಕ್ಸಿ ಸೇವೆ ಮೊದಲು ಆರಂಭವಾಗಲಿದೆ.

ಇದು ಮಾತ್ರವಲ್ಲ, ಊಬರ್​ನ ಎಲಿವೇಟ್, ಜರ್ಮನಿಯ ವೊಲೋಕಾಪ್ಟರ್ ಸಂಸ್ಥೆಗಳೂ ಕೂಡ ಹಾರುವ ಕಮರ್ಷಿಯಲ್ ಕಾರುಗಳನ್ನು ತಯಾರಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ