ಇನ್ಷೂರೆನ್ಸ್ ಹೆಚ್ಚು ಜನರನ್ನು ಯಾಕೆ ತಲುಪುತ್ತಿಲ್ಲ? ಪ್ರಶ್ನೆ ಮಾಡುತ್ತಿರುವ ಆರ್ಥಿಕ ಸಮೀಕ್ಷೆ
Economic Survey 2026 shows light on insurance sector: 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ವಿಮಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಭಾರತದಲ್ಲಿ ಇನ್ಷೂರೆನ್ಸ್ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ, ಆದರೆ, ವಿಸ್ತರಣೆ ಆಗುತ್ತಿಲ್ಲ ಎಂಬ ಸಂಗತಿಯನ್ನು ಎತ್ತಿ ತೋರಿಸಿದೆ. ಅಧಿಕ ಡಿಸ್ಟ್ರಿಬ್ಯೂಶನ್ ವೆಚ್ಚದಿಂದಾಗಿ ಇನ್ಷೂರೆನ್ಸ್ ಪ್ರೀಮಿಯಮ್ ಬೆಲೆ ಅಧಿಕ ಇರುವುದನ್ನೂ ಈ ಸಮೀಕ್ಷೆ ಗುರುತಿಸಿದೆ.

ನವದೆಹಲಿ, ಜನವರಿ 29: ವಿಮಾ ಕ್ಷೇತ್ರದಲ್ಲಿ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ. ಆದರೆ, ಹೆಚ್ಚು ಜನರನ್ನು ಇದು ತಲುಪುತ್ತಿಲ್ಲ. ಇಂಥದ್ದೊಂದು ಪರಿಸ್ಥಿತಿಯನ್ನು ಆರ್ಥಿಕ ಸಮೀಕ್ಷೆಯಲ್ಲಿ (Economic Survey) ಎತ್ತಿ ತೋರಿಸಲಾಗಿದೆ. ಹಾಗೆಯೇ ಅದಕ್ಕೆ ಕಾರಣವೇನಿರಬಹುದು ಎಂದೂ ಅಂದಾಜಿಸಿದೆ. ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ವೆಚ್ಚ ಬಹಳ ಅಧಿಕ ಇದೆ. ಇದರಿಂದಾಗಿ ಈ ಕ್ಷೇತ್ರದ ಬೆಳವಣಿಗೆ ತಡೆ ಎದುರಿಸುತ್ತಿದೆ.
ಭಾರತದಲ್ಲಿ ಇನ್ಷೂರೆನ್ಸ್ ಉದ್ಯಮ ಬೆಳೆಯುತ್ತಿದೆ. ಆದಾಯವೂ ಹೆಚ್ಚುತ್ತಿದೆ. ಆದರೆ, ಈಗಿರುವ ಗ್ರಾಹಕರಿಂದಲೇ ಹೆಚ್ಚಾಗಿ ಆದಾಯ ಬರುತ್ತಿರುವುದು. 2024-25ರಲ್ಲಿ ಇನ್ಷೂರೆನ್ಸ್ ದಟ್ಟಣೆ (ಪ್ರೀಮಿಯಮ್ ಸಂಗ್ರಹ) 97 ಡಾಲರ್ಗೆ ಏರಿದೆ. ಅದರೆ, ಇನ್ಷೂರೆನ್ಸ್ ವ್ಯಾಪ್ತಿ (ಹೊಸ ಗ್ರಾಹಕರು) ಶೇ. 3.7ಕ್ಕೆ ಇಳಿಕೆಯಾಗಿದೆ. ಅಂದರೆ, ಹಾಲಿ ಗ್ರಾಹಕರಿಗೆ ಕವರೇಜ್ ಹೆಚ್ಚುತ್ತಿರುವುದು ಹಾಗೂ ಹೊಸ ಗ್ರಾಹಕರಿಗೆ ವಿಸ್ತರಣೆಯಾಗುತ್ತಿರುವುದು, ಈ ಎರಡರ ಮಧ್ಯೆ ಅಂತರ ಹೆಚ್ಚುತ್ತಿದೆ ಎಂದು ಸಮೀಕ್ಷೆಯು ಗಮನಿಸಿದೆ.
ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ
ಲೈಫ್ ಇನ್ಷೂರೆನ್ಸ್ ಮತ್ತು ನಾನ್-ಲೈಫ್ ಇನ್ಷೂರೆನ್ಸ್ ಸೆಗ್ಮೆಂಟ್ ಎರಡರಲ್ಲೂ ಈ ಸಮಸ್ಯೆ ಇದೆ. ಡಿಸ್ಟ್ರಿಬ್ಯೂಶನ್ ಅಥವಾ ಅಡ್ಮಿನಿಸ್ಟ್ರೇಟಿವ್ ವೆಚ್ಚ ಬಹಳ ಅಧಿಕ ಇರುವುದರಿಂದ ಕಂಪನಿಗಳ ಆಪರೇಟಿಂಗ್ ವೆಚ್ಚ ಹೆಚ್ಚಾಗಿದೆ ಎಂದು 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಇನ್ಷೂರೆನ್ಸ್ ಲಭ್ಯ ಇದೆಯಾದರೂ ಈಗಲೂ ಕೂಡ ಮಧ್ಯವರ್ತಿಗಳು ಭಾಗಿಯಾಗಿರುವ ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ಗಳ ಮೂಲಕವೇ ಹೆಚ್ಚಿನ ಬ್ಯುಸಿನೆಸ್ ನಡೆಯುತ್ತಿದೆ. ಈ ಡಿಸ್ಟ್ರಿಬ್ಯೂಶನ್ ವೆಚ್ಚವು ಪ್ರೀಮಿಯಮ್ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ, ಜಿಡಿಪಿ ಬೆಳವಣಿಗೆಯ ವೇಗಕ್ಕೆ ಇನ್ಷೂರೆನ್ಸ್ ಬೆಳವಣಿಗೆ ತಾಳೆಯಾಗುತ್ತಿಲ್ಲ ಎಂಬುದನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಗುರುತಿಸಲಾಗಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ
ಭಾರತದ ಇನ್ಷೂರೆನ್ಸ್ ಸೆಕ್ಟರ್ನಲ್ಲಿ 83 ಲಕ್ಷ ಇಂಟರ್ಮೀಡಿಯರಿಗಳಿದ್ದಾರೆ (ಏಜೆಂಟ್ಸ್ ಇತ್ಯಾದಿ ಮಧ್ಯವರ್ತಿ). ಇದು ಈ ಸೆಕ್ಟರ್ನ ಬಲ ಮತ್ತು ದೌರ್ಬಲ್ಯ. ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ಅನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸಿದರೆ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಉತ್ತಮ ಇನ್ಷೂರೆನ್ಸ್ ಉತ್ಪನ್ನಗಳನ್ನು ಕೊಡಲು ಸಾಧ್ಯವಾಗಬಹುದು ಎನ್ನುವ ಸಲಹೆಯನ್ನೂ ಸಮೀಕ್ಷೆಯಲ್ಲಿ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




