ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಇದೇ ಮೊದಲ ಬಾರಿಗೆ ಬಂದಿರುವ 4ಜಿ ಮತ್ತು 5ಜಿ ಕನೆಕ್ಟಿವಿಟಿ ಮಾಡ್ಯೂಲ್ ಪ್ರೊಡಕ್ಷನ್ ಲೈನ್ (5G connectivity module production line) ಅನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ. ಅಮೆರಿಕ ಮೂಲದ ವಿವಿಡಿಎನ್ ಟೆಕ್ನಾಲಜೀಸ್ ಸಂಸ್ಥೆ ಟೆಲಿಟ್ ಟೆಲಿಕಮ್ಯೂನಿಕೇಶನ್ಸ್ ಸಹಯೋಗದಲ್ಲಿ ಹರ್ಯಾಣದ ಗುರುಗ್ರಾಮ್ನ ಮಾನೇಸರ್ನಲ್ಲಿ ಈ ಅತ್ಯಾಧುನಿಕ ಮ್ಯಾನುಫ್ಯಾಕ್ಚರಿಂಗ್ ಮಾಡ್ಯೂಲ್ ಅನ್ನು ನಿರ್ಮಿಸಿದೆ. ಟೆಲಿಕಾಂ ವಲಯದಲ್ಲಿ ಭಾರತಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಬೆಳವಣಿಗೆ ಇದಾಗಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಆಗಿ ಪ್ರೊಡಕ್ಷನ್ ಲೈನ್ಗೆ ಚಾಲನೆ ನೀಡಿದರು. ಈ ವೇಳೆ, ವಿವಿಡಿಎನ್ನ ಪಾರ್ಟ್ನರ್ ಕಂಪನಿ ಟೆಲಿಟ್ನ ಸಿಇಒ ಪಾವೊಲೊ ಡ್ಯಾಲ್ ಪಿನೋ ಅವರೂ ಉಪಸ್ಥಿತರಿದ್ದರು. ಈ ಘಟಕ ನಿರ್ಮಿಸಿರುವ ವಿವಿಡಿಎಲ್ ಅಮೆರಿಕ ಮೂಲದ್ದಾಗಿದ್ದು, ಬೆಂಗಳೂರಿನಲ್ಲೂ ಒಂದು ಘಟಕ ಹೊಂದಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಸಂದರ್ಭದಲ್ಲಿ ಮಾತನಾಡಿ, ಈ ಅತ್ಯಾಧುನಿಕ ಘಟಕ ನಿರ್ಮಾಣವಾಗಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದು ಬಹಳ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಪ್ರೋಸಸ್ ಆಗಿದ್ದು, ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ. 9 ವರ್ಷದ ಹಿಂದೆ ಈ ದೇಶದ ನಾಯಕತ್ವ ಬದಲಾವಣೆಯಿಂದ ಇದೆಲ್ಲಾ ಸಾಧ್ಯವಾಗಿದೆ. ಒಬ್ಬ ಸ್ಪಷ್ಟ ಗುರಿ ಮತ್ತು ದಾರಿ ಇರುವ ನಾಯಕ ಆಗಮನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.
‘ಹಿಂದೆ, ಟೆಲಿಕಾಂ ಉಪಕರಣ ನಮ್ಮಲ್ಲಿ ಆಮದಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಒಂದು ದೂರದೃಷ್ಟಿ ಹೊಂದಿದ ಪರಿಣಾಮ 2022 ಅಕ್ಟೋಬರ್ನಲ್ಲಿ 5ಜಿ ಚಾಲನೆ ಆಯಿತು. ಕೆಲವೇ ತಿಂಗಳಲ್ಲಿ ಅಗಾಧವಾಗಿ ಬೆಳೆಯಿತು. ಇದೀಗ ಟೆಲಿಕಾಂ ಕ್ಷೇತ್ರ ಸಮೃದ್ಧಗೊಂಡಿದೆ. ಅತಿದೊಡ್ಡ 5ಜಿ ನೆಟ್ವರ್ಕ್ ಇಕೋಸಿಸ್ಟಂ ಹೊಂದಿರುವ ಮೂರನೇ ದೇಶ ಭಾರತ.
‘ಟೆಲಿಕಾಂ ಕ್ಷೇತ್ರದಲ್ಲಿ ರಫ್ತು ಹೆಚ್ಚಿದೆ. ಭಾರತದಲ್ಲಿ ತಯಾರಾದ ಉಪಕರಣಗಳು ಅಮೆರಿಕದಂಥ ದೇಶಗಳಿಗೆ ರಫ್ತಾಗುತ್ತಿವೆ. ಉದ್ಯೋಗಸೃಷ್ಟಿ ಹೆಚ್ಚಾಗುತ್ತಿದೆ. 17,000ಕ್ಕೂ ಹೆಚ್ಚು ಮಂದಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ. ಭಾರತದ ಟೆಲಿಕಾಂ ಉತ್ಪನ್ನಗಳಿಗೆ ಪ್ರತಿಷ್ಠಿತ ಸಿಕ್ಸ್ ಸಿಗ್ಮಾ ಸರ್ಟಿಫಿಕೇಶನ್ ಸಿಕ್ಕಿದೆ’ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.
ನಾವು ಬಹಳಷ್ಟು ಮೈಲಿಗಲ್ಲುಗಳನ್ನು ತಲುಪಿದ್ದೇವೆ. ಇವತ್ತು ಟೆಲಿಕಾಂ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಧಾನಿಯವರ ದೃಷ್ಟಿಕೋನ ಕಾರಣ. ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಮೌಲ್ಯವರ್ಧನೆ ಏನಿದೆ ಎಂದು ಅನುಮಾನ ಪಟ್ಟವರಿದ್ದಾರೆ. ಅವರು ಈ ಘಟಕವನ್ನು ಬಂದು ನೋಡಬೇಕು. ಬಹಳ ಸುಧಾರಿತ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆ ಇಲ್ಲಿ ಇದೆ ಎಂದರು.
ಈ ಉದ್ಘಾಟನಾ ಕಾರ್ಯಕ್ರಮ ಹಾಗೂ ಅಶ್ವಿನಿ ವೈಷ್ಣವ್ ಮಾತನಾಡಿರುವ ವಿಡಿಯೋ ಇಲ್ಲಿದೆ…
ಇದನ್ನೂ ಓದಿ: ಹವಾಮಾನ ಪರಿಣಾಮದಿಂದ ಜಾಗತಿಕ ಇನ್ಫ್ರಾಸ್ಟ್ರಕ್ಚರ್ಗೆ ಆಗುವ ಹಾನಿ ವರ್ಷಕ್ಕೆ ಬರೋಬ್ಬರಿ 27 ಲಕ್ಷಕೋಟಿ ರೂ
ಉದ್ಘಾಟನೆ ವೇಳೆ ಘಟಕದಲ್ಲಿ ಮಹಿಳಾ ಉದ್ಯೋಗಿಗಳೂ ಇದ್ದರು. ಸಚಿವ ಅಶ್ವಿನಿ ವೈಷ್ಣವ್ ಅವರ ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಒಬ್ಬರು ಈ ಕೆಲಸದ ಬಗ್ಗೆ ಮಾತನಾಡಬೇಕು ಎಂದು ಕೇಳಿಕೊಂಡರು. ಆಕಾಂಕ್ಷ ದ್ವಿವೇದಿ ಎಂಬಾಕೆ ಮಾತನಾಡಿ ಮೆಷಿನ್ ಆಪರೇಟಿಂಗ್ ಕೆಲಸದ ಬಗ್ಗೆ ವಿವರಿಸಿದರು.
ಹುಡುಗಿಯರು ಮೆಷೀನ್ ಆಪರೇಟ್ ಮಾಡಲು ಅವಕಾಶ ಸಿಗೋದಿಲ್ಲ. ಆದರೆ, ಇಲ್ಲಿ ನಾವು ಮೂರು ವರ್ಷಗಳಿಂದ ಮೆಷೀನ್ ಆಪರೇಟಿಂಗ್ ಮಾಡಿ ಪರಿಣಿತಿ ಗಳಿಸಿದ್ದೇವೆ. ವಿವಿಡಿಎನ್ನಲ್ಲಿ ಕೆಲಸ ಮಾಡಲು ಬಹಳ ಖುಷಿಯಾಗುತ್ತದೆ ಎಂದು ಆಕಾಂಕ್ಷಾ ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ