
ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಸ್ಪೇಸ್ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್.
ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್ಎಐ ವಿಲೀನ ಆದ ನಂತರ ಮಸ್ಕ್ ಅವರ ಶ್ರೀಮಂತಿಕೆ ತಾರಕಕ್ಕೇರಿದೆ. ಎಕ್ಸ್ಎಐ ಅನ್ನು ಖರೀದಿಸಿದ ಬಳಿಕ ಸ್ಪೇಸ್ಎಕ್ಸ್ನ ಮೌಲ್ಯ ಬಹಳ ಹೆಚ್ಚಾಗಿದೆ. ಈ ಡೀಲ್ಗೆ ಮುನ್ನ ಸ್ಪೇಸ್ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕ ಸ್ಪೇಸ್ಎಕ್ಸ್ನ ಮೌಲ್ಯ 542 ಬಿಲಿಯನ್ ಡಾಲರ್ಗೆ ಏರಿದೆ. ಇದರಲ್ಲಿ ಇಲಾನ್ ಮಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಹೊಂದಿದ್ದಾರೆ.
ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಫೋರ್ಬ್ಸ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ ಅವರ ಆಸ್ತಿ ಮೌಲ್ಯ 854 ಬಿಲಿಯನ್ ಡಾಲರ್ಗೆ ಏರಿತು. ಈ ವರದಿ ಬರೆಯುವ ಸಂದರ್ಭದಲ್ಲಿ ಅವರ ಆಸ್ತಿಮೌಲ್ಯ 841 ಬಿಲಿಯನ್ ಡಾಲರ್ ಇತ್ತು. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಸ್ಕ್ ಅವರಿಗಿದೆ. ಟೆಸ್ಲಾದ ಬ್ಯುಸಿನೆಸ್ ಗುರಿಯನ್ನು ಈಡೇರಿಸಿದರೆ ಈ ಸ್ಟಾಕ್ ಆಪ್ಷನ್ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.
ಇದನ್ನೂ ಓದಿ: ಎಎಂಸಿಎ ಪ್ರಾಜೆಕ್ಟ್ ರೇಸ್ನಿಂದ ಎಚ್ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ