ನವದೆಹಲಿ, ಅಕ್ಟೋಬರ್ 21: ಭಾರತ ಸದ್ಯ 3.6 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ ಹೊಂದಿದೆ. 2047ರಷ್ಟರಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಟ್ಟ ಮುಟ್ಟುವ ಗುರಿ ಇಟ್ಟಿದೆ. ಮುಂದಿನ 23 ವರ್ಷದಲ್ಲಿ ಜಿಡಿಪಿಯು ಹೆಚ್ಚೂಕಡಿಮೆ ಹತ್ತು ಪಟ್ಟು ಬೆಳೆಯಬೇಕಾಗುತ್ತದೆ. ಬಹಳ ಜನರು ಇದನ್ನು ಅಸಾಧ್ಯ ಗುರಿ ಎನ್ನುತ್ತಾರೆ. ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ (S & P Global Ratings) ಸಂಸ್ಥೆ ಪ್ರಕಾರ 2047ರೊಳಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲು ಸಾಧ್ಯ. ಆದರೆ, ಆ ಹಾದಿಯಲ್ಲಿ ಕೆಲ ಪ್ರಮುಖ ತೊಡಕುಗಳಿವೆ ಎಂದೂ ಅದು ಎಚ್ಚರಿಸಿದೆ.
ಭಾರತ ಮುಂದಿನ ಮೂರು ವರ್ಷ ಕಾಲ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. 2030ರೊಳಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಸಾಗುತ್ತಿದೆ. ಜೆಪಿ ಮಾರ್ಗನ್ ಸಂಸ್ಥೆಯ ಉದಯೋನ್ಮುಖ ಮಾರುಕಟ್ಟೆಯ ಸರ್ಕಾರಿ ಬಾಂಡ್ ಇಂಡೆಕ್ಸ್ನಲ್ಲಿ ಭಾರತವನ್ನು ಒಳಗೊಂಡಿರುವುದರಿಂದ ಸರ್ಕಾರಕ್ಕೆ ಹೆಚ್ಚು ಆರ್ಥಿಕ ಸಂಪನ್ಮೂಲ ಸಿಗಲಿದೆ. ದೇಶೀಯ ಬಂಡವಾಳ ಮಾರುಕಟ್ಟೆಗೆ ಹೊಸ ಸಂಪನ್ಮೂಲ ಹರಿದುಬರುತ್ತದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯ ವರದಿಯೊಂದರಲ್ಲಿ (Look Forward Emerging Markets: A Decisive Decade) ಹೇಳಲಾಗಿದೆ.
ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ನಮಗೆ ಭಾರತವೇ ಗ್ರೋತ್ ಎಂಜಿನ್: ಎಸ್ಐಜಿ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್
ಭಾರತದ ಈ ಬೆಳವಣಿಗೆಯ ಹೆಜ್ಜೆ ಇನ್ನೂ ಆರಂಭ ಮಾತ್ರವೇ. ಇದು ಹೀಗೇ ಸಾಗಬೇಕಾದರೆ ಮಾರುಕಟ್ಟೆ ಪ್ರವೇಶಾವಕಾಶ ಸುಧಾರಣೆ ಆಗಬೇಕು. ಸೆಟಲ್ಮೆಂಟ್ ವಿಧಾನಗಳು ಉತ್ತಮಗೊಳ್ಳಬೇಕು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಹಾಗೆಯೇ, ಜನಸಂಖ್ಯೆ ಹೆಚ್ಚಳ ಆಗುತ್ತಿರುವುದು ತೊಡಕಾಗಬಹುದು. ಎಲ್ಲಾ ಜನರಿಗೂ ಉತ್ತಮ ಆರೋಗ್ಯಪಾಲನಾ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಕಲ್ಪಿಸುವ ದೊಡ್ಡ ಸವಾಲು ಸರ್ಕಾರಕ್ಕೆ ಇರುತ್ತದೆ. ಉತ್ಪನ್ನಶೀಲತೆಯನ್ನು ಕಾಯ್ದುಕೊಳ್ಳಬೇಕಾದಲ್ಲಿ ಇನ್ಫ್ರಾಸ್ಟ್ರಕ್ಚರ್ ಮತ್ತು ಟೆಕ್ನಾಲಜಿಯಲ್ಲಿ ಸಾಕಷ್ಟು ಹೂಡಿಕೆ ಮಾಡುವ ಅವಶ್ಯಕತೆ ಇದೆ ಎನ್ನುವ ಅನಿಸಿಕೆ ಈ ವರದಿಯಲ್ಲಿ ಬಂದಿದೆ.
ಭಾರತವನ್ನೂ ಒಳಗೊಂಡಂತೆ ಅಭಿವೃದ್ಧಿಶೀಲ ಮಾರುಕಟ್ಟೆಗಳು (ಎಮರ್ಜಿಂಗ್ ಮಾರ್ಕೆಟ್ಸ್) 2035ರವರೆಗೆ ಸರಾಸರಿಯಾಗಿ ಶೇ. 4.06ರ ದರದಲ್ಲಿ ಜಿಡಿಪಿ ಬೆಳವಣಿಗೆ ಹೊಂದಬಹುದು. ಇದೇ ವೇಳೆ ಶ್ರೀಮಂತ ದೇಶಗಳ ಆರ್ಥಿಕತೆ ಸರಾಸರಿಯಾಗಿ ಶೇ. 1.59ರಷ್ಟು ಬೆಳೆಯಬಹುದು. 2035ರೊಳಗೆ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಉದಯೋನ್ಮುಖ ಆರ್ಥಿಕತೆಗಳ ಪಾಲು ಶೇ. 65ರಷ್ಟಾಗಬಹುದು ಎಂದು ಎಸ್ ಅಂಡ್ ಪಿ ರೇಟಿಂಗ್ಸ್ನ ವರದಿಯಲ್ಲಿ ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: ಸಿಲಿಕಾನ್ ಶಕ್ತಿಯಾಗುವತ್ತ ಭಾರತ; ಸೆಮಿಕಂಡಕ್ಟರ್ ಮಿಷನ್ನ ಮೊದಲ ಹೆಜ್ಜೆ ಯಶಸ್ವಿ, ಎರಡನೇ ಹೆಜ್ಜೆಗೆ ಹೊಸ ಹುಮ್ಮಸ್ಸು
2035ರಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುತ್ತದೆ. ಇತರ ಉದಯೋನ್ಮುಖ ಆರ್ಥಿಕತೆಗಳಾದ ಇಂಡೋನೇಷ್ಯಾ ಮತ್ತು ಬ್ರೆಜಿಲ್ ದೇಶಗಳು ಕ್ರಮವಾಗಿ 8 ಮತ್ತು 9ನೇ ಸ್ಥಾನಕ್ಕೆ ಏರಿರಲಿವೆ ಎಂದೂ ಈ ವರದಿ ಭವಿಷ್ಯ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ