ನವದೆಹಲಿ, ಜೂನ್ 11: ನೀವು ಯೂರೋಪ್ ಪ್ರವಾಸಕ್ಕೆ ಯೋಜಿಸುತ್ತಿದ್ದೀರಾ? ತುಸು ದುಬಾರಿಯಾಗಲಿದೆ ಪ್ರವಾಸ. ಯೂರೋಪ್ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ (Schengen region) ನೀವು ಪ್ರವಾಸ ಹೋಗುವುದಾದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಯೂರೋಪಿಯನ್ ಕಮಿಷನ್ ಶೆಂಗನ್ ವೀಸಾ ಶುಲ್ಕವನ್ನು (Schengen visa fees) ಶೇ. 12ರಷ್ಟು ಹೆಚ್ಚಿಸಿದೆ. ಇದು ಇಂದಿನಿಂದಲೇ (ಜೂನ್ 11) ಜಾರಿಗೆ ಬರಲಿದೆ. ವಿಶ್ವಾದ್ಯಂತ ಬರುವ ಪ್ರವಾಸಿಗರಿಗೆ ಇದು ಅನ್ವಯ ಆಗುತ್ತದೆ.
ಆರರಿಂದ ಹನ್ನೆರಡು ವರ್ಷದ ವಯೋಮಾನದ ಮಕ್ಕಳಿಗೆ ಶೆಂಗನ್ ವೀಸಾ ಶುಲ್ಕ 45 ಯೂರೋಗೆ ಹೆಚ್ಚಿಸಲಾಗಿದೆ. 12 ವರ್ಷ ಮೇಲ್ಪಟ್ಟವರಿಗೆ ವೀಸಾ ಶುಲ್ಕ 90 ಯೂರೋಗೆ ಏರಿಸಲಾಗಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶುಲ್ಕ ಇರುವುದಿಲ್ಲ. ಈ ವಿಷಯವನ್ನು ಸ್ಲೊವೇನಿಯಾ ಸರ್ಕಾರ ಪ್ರಕಟಿಸಿದೆ. ಇಲ್ಲಿ ಒಂದು ಯೂರೋ ಕರೆನ್ಸಿಗೆ 90 ರೂ ಆಸುಪಾಸು ಬೆಲೆ ಇದೆ.
ಶೆಂಗನ್ ಪ್ರದೇಶ ಎಂಬುದು ಐರೋಪ್ಯ ಒಕ್ಕೂಟದ ವಿವಿಧ ದೇಶಗಳು ಸೇರಿ ರೂಪಿಸಿರುವ ಗಡಿರಹಿತ, ವೀಸಾರಹಿತ ವ್ಯವಸ್ಥೆಯಾಗಿದೆ. ಯೂರೋಪ್ನ 29 ದೇಶಗಳು ಈ ಶೆಂಗನ್ ಪ್ರದೇಶದಲ್ಲಿವೆ. ಇದರಲ್ಲಿ ಯೂರೋಪಿಯನ್ ಒಕ್ಕೂಟದ 25 ಸದಸ್ಯ ದೇಶಗಳೂ ಒಳಗೊಂಡಿವೆ.
ಇದನ್ನೂ ಓದಿ: 3,500 ಪೇಟಿಎಂ ಉದ್ಯೋಗಿಗಳ ಲೇ ಆಫ್; ಬೇರೆಡೆ ಕೆಲಸ ಕೊಡಿಸಲು ಕಂಪನಿಯಿಂದಲೇ ನೆರವು
ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ಪೋಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಬಲ್ಗೇರಿಯಾ, ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ಸ್ಲೊವೇನಿಯಾ, ಪೋರ್ಚುಗಲ್, ಆಸ್ಟ್ರಿಯಾ ಮೊದಲಾದ ದೇಶಗಳೂ ಇದರಲ್ಲಿ. ಬ್ರಿಟನ್ ಈ ಯೂರೋಪಿಯನ್ ಒಕ್ಕೂಟದಲ್ಲಾಗಲೀ, ಶೆಂಗನ್ ಪ್ರದೇಶದ ವ್ಯಾಪ್ತಿಯಲ್ಲಾಗಲೀ ಸೇರಿಲ್ಲ.
ಈ ಶೆಂಗನ್ ವ್ಯಾಪ್ತಿಯಲ್ಲಿರುವ ಯೂರೋಪಿಯನ್ ದೇಶಗಳಿಗೆ ಸಾಮಾನ್ಯವಾಗಿರುವ ವೀಸಾ ಇತ್ಯಾದಿ ವ್ಯವಸ್ಥೆ ಇದೆ. ಅಲ್ಪ ಅವಧಿಯ ಪ್ರಯಾಣಕ್ಕೆ ಇಲ್ಲಿ ಟೈಪ್ ಸಿ ವೀಸಾ ನೀಡಲಾಗುತ್ತದೆ. ಇದುವೇ ಶೆಂಗನ್ ವೀಸಾ. ಈ ದೇಶಗಳಿಗೆ ಪ್ರವಾಸ ಹೋಗುವವರು ಶೆಂಗನ್ ವೀಸಾ ಪಡೆದರೆ ಸಾಕು. ಆ ವ್ಯಾಪ್ತಿಯ ಯಾವ ದೇಶಕ್ಕೆ ಬೇಕಾದರೂ ಮುಕ್ತವಾಗಿ ಸಂಚರಿಸಬಹುದಾಗಿದೆ.
ಹಣದುಬ್ಬರ ಏರುತ್ತಿರುವುದು, ಸರ್ಕಾರಿ ನೌಕರರ ಸಂಬಳ ಹೆಚ್ಚುತ್ತಿರುವುದು ಶೆಂಗನ್ ವೀಸಾ ಶುಲ್ಕ ಏರಿಸಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಶೆಂಗನ್ ವೀಸಾ ನಿಯಮಗಳನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಬಾರಿ 2020ರ ಫೆಬ್ರುವರಿಯಲ್ಲಿ ವೀಸಾ ಶುಲ್ಕ ಹೆಚ್ಚಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ