2024ರ ಏಪ್ರಿಲ್​ನಿಂದ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್​ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

|

Updated on: Dec 03, 2024 | 4:10 PM

FDI to India: ಭಾರತಕ್ಕೆ ವಿದೇಶೀ ನೇರ ಹೂಡಿಕೆ ಏಪ್ರಿಲ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ 29.79 ಬಿಲಿಯನ್ ಡಾಲರ್​ಷ್ಟು ಸಿಕ್ಕಿದೆ. ಮೊದಲ ಕ್ವಾರ್ಟರ್​ನಲ್ಲಿ 16.17 ಬಿಲಿಯನ್ ಡಾಲರ್, ಎರಡನೇ ಕ್ವಾರ್ಟರ್​ನಲ್ಲಿ 13.6 ಬಿಲಿಯನ್ ಡಾಲರ್ ಎಫ್​ಡಿಐ ಸಿಕ್ಕಿದೆ. ಆರು ತಿಂಗಳಲ್ಲಿ ಬಂದ 29.79 ಎಫ್​ಡಿಐನಲ್ಲಿ ಮಹಾರಾಷ್ಟ್ರಕ್ಕೆ ಅರ್ಧದಷ್ಟು ಹೋಗಿದೆ. ಕರ್ನಾಟಕ ನಂತರದ ಸ್ಥಾನದಲ್ಲಿದೆ.

2024ರ ಏಪ್ರಿಲ್​ನಿಂದ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್​ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
ಹೂಡಿಕೆ
Follow us on

ನವದೆಹಲಿ, ಡಿಸೆಂಬರ್ 3: ಭಾರತದಲ್ಲಿ ವಿದೇಶೀ ನೇರ ಹೂಡಿಕೆಗಳು (ಎಫ್​ಡಿಐ) ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ 29.79 ಬಿಲಿಯನ್ ಡಾಲರ್​ನಷ್ಟಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದ ಎಫ್​ಡಿಐ ಮೊತ್ತ 20.5 ಬಿಲಿಯನ್ ಡಾಲರ್. ಈ ಬಾರಿ ಬರೋಬ್ಬರಿ ಶೇ. 45ರಷ್ಟು ಹೆಚ್ಚು ವಿದೇಶೀ ಹೂಡಿಕೆಗಳು ಭಾರತಕ್ಕೆ ಹರಿದುಬಂದಿರುವುದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.

ಇನ್ನು, ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಫಾರೀನ್ ಡಿರೆಕ್ಟ್ ಇನ್ವೆಸ್ಟ್​ಮೆಂಟ್ 13.6 ಬಿಲಿಯನ್ ಡಾಲರ್​ನಷ್ಟಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 9.52 ಬಿಲಿಯನ್ ಡಾಲರ್ ಎಫ್​ಡಿಐ ಭಾರತಕ್ಕೆ ಬಂದಿತ್ತು.

ಅದಕ್ಕೂ ಹಿಂದಿನ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಶೇ. 47ರಷ್ಟು ಹೆಚ್ಚಾಗಿದ್ದ ಎಫ್​ಡಿಐ ಒಳಹರಿವು 16.17 ಬಿಲಿಯನ್ ಡಾಲರ್ ಗಡಿ ಮುಟ್ಟಿತ್ತು.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ

ಈಕ್ವಿಟಿ ಒಳಹರಿವು, ಆದಾಯದ ಮರುಹೂಡಿಕೆ ಮತ್ತಿತರ ಬಂಡವಾಳಗಳೆಲ್ಲವನ್ನೂ ಒಳಗೊಂಡ ಒಟ್ಟು ಎಫ್​ಡಿಐ ಹೂಡಿಕೆ ಏಪ್ರಿಲ್​ನಿಂದ ಸೆಪ್ಟೆಂಬರ್​ನಲ್ಲಿ 42.1 ಬಿಲಿಯನ್ ಡಾಲರ್​ನಷ್ಟಾಗುತ್ತದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 28ರಷ್ಟು ಹೆಚ್ಚಳ ಆದಂತಾಗಿದೆ ಎಂದು ಡಿಪಿಐಐಟಿ ದತ್ತಾಂಶದಿಂದ ತಿಳಿದುಬರುತ್ತದೆ.

ಎಫ್​ಡಿಐನ ಈಕ್ವಿಟಿ ಒಳಹರಿವಿನ ವಿಚಾರಕ್ಕೆ ಬಂದರೆ, ಮಾರಿಷಸ್, ಸಿಂಗಾಪುರ್, ಅಮೆರಿಕ, ನೆದರ್​ಲ್ಯಾಂಡ್ಸ್, ಯುಎಐ, ಕೇಮ್ಯಾನ್ ಐಲ್ಯಾಂಡ್ಸ್, ಸೈಪ್ರಸ್ ದೇಶಗಳಿಂದ ಹೆಚ್ಚುವರಿ ಹರಿವು ಸಿಕ್ಕಿದೆ. ಜಪಾನ್ ಮತ್ತು ಬ್ರಿಟನ್​ನಿಂದ ಎಫ್​ಡಿಐಗಳ ಈಕ್ವಿಟಿ ಒಳಹರಿವು ಮೈನಸ್​ನಲ್ಲಿದೆ.

ಇದನ್ನೂ ಓದಿ: ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ಎಫ್​ಡಿಐ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನ

2024ರ ಏಪ್ರಿಲ್​ನಿಂದ ಸೆಪ್ಟೆಂಬರ್​ನಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಅತಿಹೆಚ್ಚು ಎಫ್​ಡಿಐ ಸಿಕ್ಕಿದೆ. 13.55 ಬಿಲಿಯನ್ ಡಾಲರ್​ನಷ್ಟು ಬಂಡವಾಳವು ಆ ರಾಜ್ಯಕ್ಕೆ ಹೋಗಿದೆ. ಇನ್ನು ಕರ್ನಾಟಕಕ್ಕೆ ಸಿಕ್ಕಿರುವ ಎಫ್​ಡಿಐ 3.54 ಬಿಲಿಯನ್ ಡಾಲರ್. ತೆಲಂಗಾಣ ರಾಜ್ಯಕ್ಕೆ 1.54 ಬಿಲಿಯನ್ ಡಾಲರ್ ಎಫ್​ಡಿಐ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ