LIC: ಎಲ್ಐಸಿಗೆ ಖಾಸಗಿ ಸಿಇಒ ನೇಮಿಸಲು ಕೇಂದ್ರ ಚಿಂತನೆ; ಆಧುನೀಕರಣಕ್ಕಾಗಿ ಕ್ರಮ
ಒಂದು ವೇಳೆ ಖಾಸಗಿ ಕ್ಷೇತ್ರದ ಸಿಇಒ ನೇಮಕವಾದಲ್ಲಿ, ದೇಶದ ಅತಿದೊಡ್ಡ ವಿಮಾ ಸಂಸ್ಥೆಯನ್ನು 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಖಾಸಗಿ ಕ್ಷೇತ್ರದ ವ್ಯಕ್ತಿ ಮುನ್ನಡೆಸುವಂತಾಗಲಿದೆ.
ನವದೆಹಲಿ: ಭಾರತೀಯ ಜೀವ ವಿಮಾ ನಿಗಮಕ್ಕೆ (LIC) ಇದೇ ಮೊದಲ ಬಾರಿಗೆ ಖಾಸಗಿ ಕ್ಷೇತ್ರದ ವೃತ್ತಿಪರರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ (CEO) ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರಿ ಅಧಿಕಾರಿಗಳಿಬ್ಬರು ತಿಳಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ (Stock Market) ಎಲ್‌ಐಸಿ ಷೇರುಗಳು (LIC Shares) ಉತ್ತಮ ಗಳಿಕೆ ದಾಖಲಿಸದಿರುವುದು ನಿರಾಶೆಗೆ ಕಾರಣವಾಗಿದೆ. ಹೀಗಾಗಿ ಎಲ್ಐಸಿಯನ್ನು ಆಧುನೀಕರಣಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಖಾಸಗಿ ಕ್ಷೇತ್ರದ ಸಿಇಒ ನೇಮಕವಾದಲ್ಲಿ, 41 ಟ್ರಿಲಿಯನ್ ರೂ. ಸ್ವತ್ತು ಹೊಂದಿರುವ ದೇಶದ ಅತಿದೊಡ್ಡ ವಿಮಾ ಸಂಸ್ಥೆಯನ್ನು 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಖಾಸಗಿ ಕ್ಷೇತ್ರದ ವ್ಯಕ್ತಿ ಮುನ್ನಡೆಸುವಂತಾಗಲಿದೆ.
ಇದನ್ನೂ ಓದಿ: LIC WhatsApp Service: ವಾಟ್ಸ್ಆ್ಯಪ್ ಮೂಲಕವೂ ಎಲ್‌ಐಸಿ ಸೇವೆ; ಪಾಲಿಸಿ ಸ್ಥಿತಿ, ಪ್ರೀಮಿಯಂ ವಿವರ ತಿಳಿಯಲು ಹೀಗೆ ಮಾಡಿ
‘ಎಲ್‌ಐಸಿ ಸಿಇಒ ನೇಮಕಕ್ಕೆ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಖಾಸಗಿ ಕ್ಷೇತ್ರದ ಅಭ್ಯರ್ಥಿಗಳೂ ಎಲ್‌ಐಸಿ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ, ಎಲ್ಐಸಿಯ ಮೇಲುಸ್ತುವಾರಿ ವಹಿಸಿರುವ ಹಣಕಾಸು ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಎಲ್‌ಐಸಿ ಚೇರ್ಮನ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಿನ ಚೇರ್ಮನ್ ಅವಧಿ 2023ರ ಮಾರ್ಚ್ಗೆ ಕೊನೆಗೊಳ್ಳಲಿದೆ. ಆ ಬಳಿಕ ಈ ಹುದ್ದೆಯನ್ನೇ ಸರ್ಕಾರ ತೆಗೆದುಹಾಕಲಿದೆ. ಬಳಿಕ ಖಾಸಗಿ ಕ್ಷೇತ್ರದ ಸಿಇಒ ನೇಮಕ ಮಾಡಲಿದೆ. ಇದಕ್ಕಾಗಿ ಎಲ್‌ಐಸಿ ನಿಯಮಗಳಲ್ಲಿ ಕಳೆದ ವರ್ಷವೇ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡಲು ಕಾರ್ಯತಂತ್ರ ಬದಲಿಸಿ: ಎಲ್ಐಸಿಗೆ ಸರ್ಕಾರ
ಸರ್ಕಾರದ ಈ ನಡೆಯಿಂದ ಆಯ್ಕೆಗಳು ಹೆಚ್ಚಾಗಲಿವೆ. ಷೇರುದಾರರಿಗೆ ಉತ್ತಮ ಸಂದೇಶವೂ ರವಾನೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವ ನಿಟ್ಟಿನಲ್ಲಿ ಉತ್ಪನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡುವಂತೆ ಎಲ್ಐಸಿಗೆ ಇತ್ತೀಚೆಗೆ ಸರ್ಕಾರ ಸೂಚಿಸಿತ್ತು. ಎಲ್ಐಸಿಯು 949 ರೂ. ಆರಂಭಿಕ ಮುಖಬೆಲೆಯೊಂದಿಗೆ ಮೇ 17ರಂದು ಷೇರು ವಹಿವಾಟು (ಐಪಿಒ ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆ) ಆರಂಭಿಸಿತ್ತು. ಆ ಬಳಿಕ ಅದಕ್ಕಿಂತ ಕಡಿಮೆ ಬೆಲೆಯಲ್ಲೇ ಟ್ರೇಡಿಂಗ್ ನಡೆಸುತ್ತಿದೆ. ಸದ್ಯ ಎಲ್‌ಐಸಿ ಷೇರಿನ ಮುಖಬೆಲೆ (ಎನ್ಎಸ್ಇ ಹಾಗೂ ಬಿಎಸ್ಇ) 662 ರೂ. ಆಸುಪಾಸಿನಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ