ಭಾರತದಿಂದ ಮೊದಲ ಕ್ವಾರ್ಟರ್​ನಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತು

India exports 5 billion dollar iPhones in 2026Q1: 2025-26ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಭಾರತದಿಂದ ಐದು ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 3 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತಾಗಿತ್ತು. ಆದರೆ, ಹಿಂದಿನ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ 5.58 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತಾಗಿತ್ತು.

ಭಾರತದಿಂದ ಮೊದಲ ಕ್ವಾರ್ಟರ್​ನಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತು
ಐಫೋನ್

Updated on: Jul 20, 2025 | 12:39 PM

ನವದೆಹಲಿ, ಜುಲೈ 20: ಭಾರತದಿಂದ ರಫ್ತಾಗುತ್ತಿರುವ ಸ್ಮಾರ್ಟ್​ಫೋನ್​​ನಲ್ಲಿ ಆ್ಯಪಲ್ ಪಾಲು (iPhone exports) ಶೇ. 70ರಷ್ಟಿದೆ. 2025ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕದಲ್ಲಿ ಐದು ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳು ಭಾರತದಿಂದ ರಫ್ತಾಗಿವೆ ಎಂದು ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿ ಪ್ರಕಟವಾಗಿದೆ. ಕಳೆದ ವರ್ಷದ ಇದೇ ಕ್ವಾರ್ಟರ್​​ನಲ್ಲಿ 3 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳು ರಫ್ತಾಗಿದ್ದವು. ಅಮೆರಿಕ ಮತ್ತು ಚೀನಾ ದೇಶಗಳ ಒತ್ತಡದ ನಡುವೆಯೂ ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ ತಯಾರಿಕೆಯ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಏರಿಸುತ್ತಲೇ ಹೋಗುತ್ತಿದೆ.

ಫಾಕ್ಸ್​ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗಳು ಭಾರತದಲ್ಲಿ ಐಫೋನ್​ಗಳನ್ನು ತಯಾರಿಸುವ ಕೆಲಸ ಮಾಡುತ್ತಿವೆ. ಜಾಗತಿಕ ಸ್ಮಾರ್ಟ್​ಫೋನ್ ಸರಬರಾಜು ಸರಪಳಿಯಲ್ಲಿ ಭಾರತದ ಪಾತ್ರ ಗಟ್ಟಿಗೊಳ್ಳುತ್ತಿದೆ.

ಇದನ್ನೂ ಓದಿ: ಭಾರತಕ್ಕೇನು ಕಾದಿದೆ? ಒಪ್ಪಂದ ಮಾಡಿಕೊಂಡರೆ ಶೇ 10, ಇಲ್ಲದಿದ್ದರೆ ಶೇ. 27 ಟ್ಯಾರಿಫ್? ಟ್ರಂಪ್ ನಿಲುವೇನಾಗಬಹುದು?

ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ 5.58 ಬಿಲಿಯನ್ ಡಾಲರ್ ಐಫೋನ್ ರಫ್ತು

ಕಳೆದ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ5.58 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳನ್ನು ಭಾರತದಿಂದ ಸರಬರಾಜು ಮಾಡಲಾಗಿತ್ತು. ಯಾವುದೇ ಕ್ವಾರ್ಟರ್​ನಲ್ಲಿ ಅತಿಹೆಚ್ಚು ಐಫೋನ್ ರಫ್ತಾಗಿದ್ದು ಅದೇ ಮೊದಲು. ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್​ನಿಂದ ಅಧಿಕ ಟ್ಯಾರಿಫ್ ವಿಧಿಸುವ ಎಚ್ಚರಿಕೆ ನೀಡಿದ್ದರಿಂದ ಆ್ಯಪಲ್ ಕಂಪನಿ ಮಾರ್ಚ್​ನೊಳಗೆ ಐಫೋನ್ ದಾಸ್ತಾನು ಹೆಚ್ಚಿಸಿತ್ತು. ಹೀಗಾಗಿ, ಮೇಡ್ ಇನ್ ಇಂಡಿಯಾ ಐಫೋನ್​ಗಳು ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕವನ್ನು ತಲುಪಿದ್ದವು. ಆ ಕ್ವಾರ್ಟರ್​​ನಲ್ಲಿ ಅತಿಹೆಚ್ಚು ಐಫೋನ್ ರಫ್ತಾಗಲು ಇದು ಪ್ರಮುಖ ಕಾರಣ.

ಜೂನ್ ಕ್ವಾರ್ಟರ್​​ನಲ್ಲಿ ಮಂಕಾಗುವ ಐಫೋನ್ ಸೇಲ್ಸ್

ಸಾಮಾನ್ಯವಾಗಿ ಆ್ಯಪಲ್ ಕಂಪನಿ ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಐಫೋನ್ ಅನಾವರಣಗೊಳಿಸುತ್ತದೆ. ಹೀಗಾಗಿ, ಜೂನ್ ಅಂತ್ಯದ ಕ್ವಾರ್ಟರ್ ಮತ್ತು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ಗಳಲ್ಲಿ ಐಫೋನ್ ಮಾರಾಟ ಕಡಿಮೆ ಇರುತ್ತದೆ. ಹೀಗಾಗಿ, ಈ ಬಾರಿಯ ಜೂನ್ ಕ್ವಾರ್ಟರ್​ನಲ್ಲಿ ಭಾರತದಿಂದ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳು ರಫ್ತಾಗಿರುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ

ಭಾರತದಲ್ಲಿ 2024-25ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಸ್ಮಾರ್ಟ್​ಫೋನ್ ತಯಾರಿಕೆ 64 ಬಿಲಿಯನ್ ಡಾಲರ್ ಮುಟ್ಟಿದೆ. ಇದರಲ್ಲಿ 24.1 ಬಿಲಿಯನ್ ಡಾಲರ್​​ನಷ್ಟು ರಫ್ತಾಗಿದೆ. ಅಂದರೆ, ಕಳೆದ ಹಣಕಾಸು ವರ್ಷದಲ್ಲಿ ಶೇ. 38ರಷ್ಟು ಮೇಡ್ ಇನ್ ಇಂಡಿಯಾ ಫೋನ್​ಗಳು ವಿದೇಶಗಳಿಗೆ ಹೋಗಿವೆ.

2014-15ರಲ್ಲಿ ಭಾರತದಿಂದ ರಫ್ತಾಗುವ ಸರಕುಗಳಲ್ಲಿ ಸ್ಮಾರ್ಟ್​ಫೋನ್ 167ನೇ ಸ್ಥಾನದಲ್ಲಿತ್ತು. ಈಗ ಅದು ಎಂಜಿನಿಯರಿಂಗ್ ಸರಕು ಮತ್ತು ಪೆಟ್ರೋಲಿಯಂ ಬಳಿಕ ಅತಿಹೆಚ್ಚು ರಫ್ತಾಗುವ ವಸ್ತುವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ