ಫೋರ್ಡ್ ಕಂಪೆನಿಯ ಡೀಲರ್ಗಳು ಭಾರತದಲ್ಲಿ ಭಾರೀ ನಷ್ಟದತ್ತ ಮುಖ ಮಾಡಿದ್ದಾರೆ. ಏಕೆಂದರೆ, ವಾಹನ ತಯಾರಿಕಾ ಕಂಪೆನಿಯಾದ ಫೋರ್ಡ್ನಿಂದ ತಕ್ಷಣದಿಂದಲೇ ಭಾರತದಲ್ಲಿ ಉತ್ಪಾದನೆ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಆಟೋಮೊಬೈಲ್ ಡೀಲರ್ಗಳ ಸಂಘ FADA ಗುರುವಾರ ಹೇಳಿದೆ. ಕಂಪೆನಿಯ ನಿರ್ಧಾರ ಆಘಾತಕಾರಿಯಾಗಿದೆ. ಡೀಲರ್ಗಳು ಮಾರಾಟ ಮೂಲಸೌಕರ್ಯಕ್ಕಾಗಿ 2000 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಿದ್ದರು, ದೇಶದಾದ್ಯಂತ 40 ಸಾವಿರ ಮಂದಿಯನ್ನು ನೇಮಿಸಿಕೊಳ್ಳಲಾಗಿತ್ತು. “ತಕ್ಷಣದಿಂದಲೇ ಜಾರಿಗೆ ಬರುವಂತೆ ಫೋರ್ಡ್ನಿಂದ ಉತ್ಪಾದನೆ ಸ್ಥಗಿತ ಮಾಡುವುದಾಗಿ ಘೋಷಿಸಿದ್ದು, ವಾಹನ ರೀಟೇಲ್ ವಲಯವು ಫೋರ್ಡ್ ಇಂಡಿಯಾದ ಘೋಷಣೆಯಿಂದ ದಿಗ್ಭ್ರಮೆಯಲ್ಲಿದೆ,” ಎಂದು FADA ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು 170 ಡೀಲರ್ಗಳು, 391 ಔಟ್ಲೆಟ್ಗಳನ್ನು ಹೊಂದಿದ್ದಾರೆ. ತಮ್ಮ ಡೀಲರ್ಶಿಪ್ ಸ್ಥಾಪನೆಗಾಗಿ 2000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಗುಲಾಟಿ ಇನ್ನೂ ಮುಂದುವರಿದು, ಫೋರ್ಡ್ ಇಂಡಿಯಾ ಡೀಲರ್ಗಳ ಬಳಿ 1000 ವಾಹನಗಳು, ಅಂದರೆ 150 ಕೋಟಿ ಮೌಲ್ಯದ ದಾಸ್ತಾನಿದೆ, ಅವುಗಳಿಗೆ ಪ್ರತಿಷ್ಠಿತ ಬ್ಯಾಂಕ್ಗಳು ಹಣಕಾಸು ಒದಗಿಸಿವೆ ಎಂದು ಹೇಳಿದ್ದಾರೆ. “ಡೀಲರ್ಗಳ ಬಳಿ ಡೆಮೋ ವಾಹನಗಳು ಸಹ ನೂರರ ಸಂಖ್ಯೆಯಲ್ಲಿವೆ. ಅದಕ್ಕಿಂತ ಹೆಚ್ಚಾಗಿ ಕಂಪೆನಿಯಿಂದ ಐದು ತಿಂಗಳ ಹಿಂದಿನವರೆಗೆ ಕೂಡ ಹಲವು ಡೀಲರ್ಗಳನ್ನು ನೇಮಿಸಲಾಗಿದೆ. ಅಂಥ ಡೀಲರ್ಗಳುಗೆ ತಮ್ಮ ಜೀವನದುದ್ದಕ್ಕೂ ಭಾರೀ ನಷ್ಟ ಆಗಲಿದೆ,” ಎಂದು ಹೇಳಿದ್ದಾರೆ.
ಫ್ರಾಂಚೈಸಿ ಪ್ರೊಟೆಕ್ಷನ್ ಕಾಯ್ದೆ ತರುವಂತೆ FADAದಿಂದ ಬಹಳ ಹಿಂದಿನಿಂದ ಕೇಂದ್ರ ಸರ್ಕಾರವನ್ನು ಕೇಳಿಕೊಂಡು ಬರಲಾಗುತ್ತಿದೆ. ಇಂಥದ್ದೊಂದು ಕಾಯ್ದೆ ಬಾರದಿದ್ದಲ್ಲಿ ಮೆಕ್ಸಿಕೋ, ಬ್ರೆಜಿಲ್, ರಷ್ಯಾ, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಜಪಾನ್ಗಳಲ್ಲಿ ಇರುವಂತೆ ಇಲ್ಲಿ ಪರಿಹಾರ ದೊರೆಯುವುದಿಲ್ಲ. ಜನರಲ್ ಮೋಟಾರ್ಸ್ ಆದ ಮೇಲೆ ಮ್ಯಾನ್ ಟ್ರಕ್ಸ್, ಹಾರ್ಲೆ ಡೇವಿಡ್ಸನ್, ಯು.ಎಂ.ಲೋಹಿಯಾ ಮತ್ತು ಹಲವು ಕಂಪೆನಿಗಳು ಭಾರತದಿಂದ ಹೋಗಿವೆ. 2017ರಿಂದ ಈಚೆಗೆ ಭಾರತೀಯ ಮಾರ್ಕೆಟ್ನಿಂದ ಹೊರಹೋಗುತ್ತಿರುವ ಐದನೇ ಅತಿದೊಡ್ಡ ಕಂಪೆನಿ ಫೋರ್ಡ್ ಇಂಡಿಯಾ ಎಂದು ಗುಲಾಟಿ ಹೇಳಿದ್ದಾರೆ. ಅಂದಹಾಗೆ ಆಟೋಮೊಬೈಲ್ ಡೀಲರ್ಗಳಿಗಾಗಿ ಕೈಗಾರಿಕೆ ಸಂಸದೀಯ ಸಮಿತಿಯು 2020ರ ಡಿಸೆಂಬರ್ನಲ್ಲಿ ಫ್ರಾಂಚೈಸಿ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ವರದಿ ನೀಡಿತ್ತು ಎಂದು ಅವರು ಹೇಳುತ್ತಾರೆ.
ಅಮೆರಿಕದ ಪ್ರಮುಖ ವಾಹನ ತಯಾರಿಕೆ ಕಂಪೆನಿಯಾದ ಫೋರ್ಡ್ ಮೋಟಾರ್ ಕಂಪೆನಿ ಗುರುವಾರ ಘೋಷಣೆ ಮಾಡಿ, ಭಾರತದ ಎರಡು ಘಟಕಗಳಲ್ಲಿ ಉತ್ಪಾದನೆ ನಿಲ್ಲಿಸುವುದಾಗಿ ತಿಳಿಸಿತು. ಮರುರಚನೆ ಭಾಗವಾಗಿ ಆಮದು ವಾಹನಗಳನ್ನು ಮಾತ್ರ ದೇಶದಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ. ಫೋರ್ಡ್ ಕಂಪೆನಿ ಚೆನ್ನೈ ಮತ್ತು ಗುಜರಾತ್ನ ಸನಂದ್ ಘಟಕದಲ್ಲಿ 250 ಕೋಟಿ ಅಮೆರಿಕನ್ ಡಾಲರ್ನಷ್ಟು ಹೂಡಿಕೆ ಮಾಡಿದೆ. ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ 200 ಕೋಟಿ ಡಾಲರ್ ಆಪರೇಟಿಂಗ್ ನಷ್ಟ ಎಂದು ಕಮಡಿದೆ. ಈಗಿನ ನಿರ್ಧಾರದಿಂದ 4000ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 300ಕ್ಕೂ ಹೆಚ್ಚು ಔಟ್ಲೆಟ್ ನಡೆಸುವ 150 ಡೀಲರ್ಗಳ ಮೇಲೆ ಪರಿಣಾಮ ಆಗಲಿದೆ.
ಆದರೆ, ಫೋರ್ಡ್ ಎಂಜಿನ್ ತಯಾರಿಕೆಯನ್ನು ಸನಂದ್ ಘಟಕದಿಂದ ಮುಂದುವರಿಸಲಿದೆ. ಕಂಪೆನಿಯ ಜಾಗತಿಕ ಕಾರ್ಯಾಚರಣೆಗೆ ರಫ್ತು ಮಾಡಲಿದೆ. ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆ ನಿಲ್ಲಿಸುವುದರೊಂದಿಗೆ ಎಕೋಸ್ಪೋರ್ಟ್, ಫಿಗೋ, ಎಂಡೆವರ್, ಫ್ರೀಸ್ಟೈಲ್, ಆಸ್ಪೈರ್ ಇವುಗಳ ಮಾರಾಟವನ್ನು ನಿಲ್ಲಿಸಲಿದೆ. ಫೋರ್ಡ್ ಹೇಳಿರುವಂತೆ, ವಾಹನಗಳ ಭಾಗಗಳ ಡಿಪೋಗಳನ್ನು ದೆಹಲಿ, ಚೆನ್ನೈ, ಮುಂಬೈ, ಸನಂದ್ ಮತ್ತು ಕೋಲ್ಕತ್ತಾದಲ್ಲಿ ನಿರ್ವಹಿಸಲಿದೆ. ಇನ್ನು ಡೀಲರ್ಗಳ ಬಳಿ ಸೇಲ್ಸ್ ಅಂಡ್ ಸರ್ವೀಸ್ ಅನ್ನು ಪಾರ್ಟ್ಸ್ ಅಂಡ್ ಸರ್ವೀಸ್ ಸಪೋರ್ಟ್ ಆಗಿ ಬದಲಾಯಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಗ್ರಾಹಕರಿಗೆ ಸೇವೆ, ಮಾರುಕಟ್ಟೆ ನಂತರ ಬಿಡಿ ಭಾಗಗಳು ಮತ್ತು ವಾರಂಟಿ ಕವರೇಜ್ ಮುಂದುವರಿಯಲಿದೆ ಎಂದು ಸೇರಿಸಿದೆ.
ಇದನ್ನೂ ಓದಿ: ಭಾರತಕ್ಕೆ ವಿದಾಯ ಹೇಳಲಿದೆ ಪ್ರಪಂಚದ ದುಬಾರಿ ಬೈಕ್ ಕಂಪನಿ, ಯಾವುದದು?
Ford: ಭಾರತದಲ್ಲಿನ ಉತ್ಪಾದನಾ ಘಟಕಗಳನ್ನು ಮುಚ್ಚಲಿದೆ ಫೋರ್ಡ್ ಕಂಪೆನಿ
(Ford India Dealers Staring At A Loss Of Rs 2000 Crore Sales Infrastructure Investment After Company Announced Shut Operation)